Advertisement

ಕಳೆದ ವರ್ಷ ಎರಡು ಪ್ರಕರಣ ದಾಖಲು; ಈ ವರ್ಷ ಬಂದಿಲ್ಲ

04:20 AM Jun 12, 2018 | Karthik A |

ಮಹಾನಗರ: ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಇಲಾಖೆ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ವರ್ಷಗಳಿಗೆ ಹೋಲಿಸಿದರೆ ಎರಡು ವರ್ಷಗಳಿಂದೀಚೆಗೆ ಬಾಲ ಕಾರ್ಮಿಕರ ಸಂಖ್ಯೆ ಇಳಿಮುಖವಾಗಿದೆ. 2017-18ನೇ ಸಾಲಿನಲ್ಲಿ ಇಲ್ಲಿಯವರೆಗೆ ಕೇವಲ ಎರಡು ಪ್ರಕರಣ ಜಿಲ್ಲೆಯಲ್ಲಿ ಕಂಡು ಬಂದಿದ್ದು, 2018ನೇ ವರ್ಷದಲ್ಲಿ ಮೇ ತಿಂಗಳಾಂತ್ಯದವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಬಾಲ ಕಾರ್ಮಿಕ ವಿರೋಧಿ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಿಲ್ಲಾ ಕಾರ್ಮಿಕ ಇಲಾಖೆ ಶ್ರಮಿಸುತ್ತಿದೆ.  

Advertisement

ಮೂರು ಪ್ರಕರಣಗಳಲ್ಲಿ FIR 
2016-17ರಲ್ಲಿ ದಾಖಲಾದ ಪ್ರಕರಣದಲ್ಲಿ ಓರ್ವ ಬಾಲಕ ಧಕ್ಕೆಯಲ್ಲಿ ಮೀನುಗಾರಿಕಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರೆ, ಇನ್ನೋರ್ವ ಬಾಲಕ ಹೊಟೇಲ್‌ ನಲ್ಲಿ ಕೆಲಸ ಮಾಡುತ್ತಿದ್ದ. 2017-18ರ ಪ್ರಕರಣದಲ್ಲಿ ಓರ್ವ ಅಪಾರ್ಟ್‌ಮೆಂಟ್‌ ವೊಂದರಲ್ಲಿ, ಮತ್ತೋರ್ವ ಮಾಲ್‌ ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಈ ಪೈಕಿ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಸಂಸ್ಥೆಗಳ ಮಾಲಕರ ಮೇಲೆ FIR ದಾಖಲಿಸಲಾಗಿದೆ.


ಮೂವರು ಹೆತ್ತವರ ಸುಪರ್ದಿಗೆ

ಬಾಲಕಾರ್ಮಿಕರನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗುತ್ತದೆ. ಬಳಿಕ ಅವರಿಗೆ ಪುನರ್ವಸತಿ ಅಥವಾ ಹೆತ್ತವರಿಗೆ ಹಸ್ತಾಂತರಿಸಲಾಗುತ್ತದೆ. ಈ ಮಕ್ಕಳಲ್ಲಿ ಓರ್ವನನ್ನು ಚಿಣ್ಣರ ತಂಗುದಾಣಕ್ಕೆ ನೀಡಲಾಗಿದ್ದರೆ, ಉಳಿದವರನ್ನು ಹೆತ್ತವರ ಸುಪರ್ದಿಗೆ ನೀಡಲಾಗಿದೆ. ‘ಧಕ್ಕೆಯಲ್ಲಿ ಕೆಲಸ ಮಾಡುತ್ತಿದ್ದ ಬಾಲಕ ತನ್ನದೇ ಕೆಲಸ ನಿರ್ವಹಿಸುತ್ತಿದ್ದರಿಂದ ಮತ್ತು ಮಾಲಕರ ಅಡಿಯಲ್ಲಿ ಕೆಲಸ ಮಾಡದ ಹಿನ್ನೆಲೆಯಲ್ಲಿ ಆತನನ್ನು ಪಾಲಕರ ಸುಪರ್ದಿಗೆ ನೀಡಲಾಗಿದೆ’ ಎಂದು ಚೈಲ್ಡ್‌ ಲೇಬರ್‌ ಪ್ರಾಜೆಕ್ಟ್ ಡೈರೆಕ್ಟರ್‌ ಶ್ರೀನಿವಾಸ್‌ ‘ಉದಯವಾಣಿ-ಸುದಿನ’ಕ್ಕೆ ತಿಳಿಸಿದ್ದಾರೆ.

1098ಕ್ಕೆ 185 ಕರೆಗಳು
ಬಾಲ ಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬುದಾಗಿ ಪಡಿ ಚೈಲ್ಡ್‌ ಲೈನ್‌ 1098 ಮಕ್ಕಳ ಸಹಾಯವಾಣಿ ಸಂಖ್ಯೆಗೆ ಐದು ವರ್ಷಗಳಲ್ಲಿ ಒಟ್ಟು 85 ದೂರುಗಳು ಬಂದಿದ್ದು, ಈ ಪೈಕಿ 35 ಮಕ್ಕಳನ್ನು ರಕ್ಷಿಸಲಾಗಿದೆ. 11 ಪ್ರಕರಣಗಳಿಗೆ ಸಂಬಂಧಿಸಿ FIR ದಾಖಲಿಸಲಾಗಿದ್ದು, ವಿಚಾರಣೆ ಮುಂದುವರಿಯುತ್ತಿದೆ. ಇದರಲ್ಲಿ 2014-15ನೇ ಸಾಲಿನಲ್ಲಿ ದೂರವಾಣಿ ಮುಖಾಂತರ 20 ದೂರುಗಳು ಬಂದಿದ್ದು, 10 ಮಕ್ಕಳನ್ನು ರಕ್ಷಿಸಲಾಗಿದೆ. 7 ಪ್ರಕರಣಕ್ಕೆ FIR ದಾಖಲಾಗಿದೆ. 2015 – 16ನೇ ಸಾಲಿನಲ್ಲಿ ಫೋನ್‌ ಮುಖಾಂತರ ಬಂದ 33 ದೂರುಗಳಲ್ಲಿ 11 ಪ್ರಕರಣಗಳಲ್ಲಿ ಮಕ್ಕಳನ್ನು ರಕ್ಷಿಸಲಾಗಿದೆ. ಒಂದು ಪ್ರಕರಣದಲ್ಲಿ FIR ದಾಖಲಾಗಿದ್ದು, ನಾಲ್ಕು ಕೇಸ್‌ ಗಳನ್ನು ಎಚ್ಚರಿಕೆ ನೀಡಿ ಕೈ ಬಿಡಲಾಗಿದೆ. 2016-17ರಲ್ಲಿ ಫೋನ್‌ ಮುಖಾಂತರ ಬಂದ 17 ದೂರುಗಳ ಪೈಕಿ ಏಳು ಮಕ್ಕಳನ್ನು ರಕ್ಷಿಸಲಾಗಿದ್ದು, ಒಂದು ಪ್ರಕರಣಕ್ಕೆ FIR ದಾಖಲಾಗಿದೆ. ಉಳಿದ ಆರು ಪ್ರಕರಣಗಳನ್ನು ಎಚ್ಚರಿಕೆ ನೀಡಿ ಬಿಡಲಾಗಿದೆ.

2017-18ರಲ್ಲಿ ಫೋನ್‌ ಮುಖಾಂತರ ಬಂದ 15 ದೂರುಗಳಿಗೆ ಸಂಬಂಧಿಸಿದಂತೆ ಏಳು ಮಕ್ಕಳನ್ನು ರಕ್ಷಣೆ ಮಾಡಲಾಗಿದ್ದು, ಎರಡು ಪ್ರಕರಣದಲ್ಲಿ FIR ಆಗಿದೆ. ಉಳಿದವುಗಳನ್ನು ಎಚ್ಚರಿಕೆ ನೀಡಿ ಕೈಬಿಡಲಾಗಿದೆ ಎಂದು ಪಡಿ ಚೈಲ್ಡ್‌ಲೈನ್‌ ನಿರ್ದೇಶಕ ಹಾಗೂ ಬಾಲ ಕಾರ್ಮಿಕ ಪದ್ಧತಿ ವಿರೋಧಿ ಆಂದೋಲನದ ರಾಜ್ಯ ಸಂಚಾಲಕ ರೆನ್ನಿ ಡಿ’ಸೋಜಾ ತಿಳಿಸಿದ್ದಾರೆ.

Advertisement

ಈ ಸಂಖ್ಯೆಗೆ ಕರೆ ಮಾಡಿ
14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ಮತ್ತು 14ರಿಂದ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರಗಳಲ್ಲಿ ದುಡಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಲ್ಲಿ ಸಾರ್ವಜನಿಕರು 1098- ಚೈಲ್ಡ್‌ಲೈನ್‌ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು. ಈ ಕರೆ ಉಚಿತವಾಗಿರುತ್ತದೆ. ಅಲ್ಲದೆ ಕಾರ್ಮಿಕ ಇಲಾಖೆಯದೂ.ಸಂಖ್ಯೆ 0824 – 2433131, 2437479, 2435343 ಮತ್ತು 2433132 ಗೂ ಕರೆ ಮಾಡಬಹುದು.

ಶಿಕ್ಷೆ ಏನು?
ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆಯ ಕಾರ್ಮಿಕರ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ-1986ರನ್ನು ಜಾರಿಗೆ ತರಲಾಯಿತು. 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ದುಡಿಸಿಕೊಂಡಿರುವುದು ಗಮನಕ್ಕೆ ಬಂದರೆ ಮತ್ತು 15 ವರ್ಷದಿಂದ 18 ವರ್ಷದೊಳಗಿನ ಕಿಶೋರಾವಸ್ಥೆಯ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಂಡಿರುವುದು ಕಂಡುಬಂದರೆ ಆ ದುಡಿತಕ್ಕೆ ಕಾರಣರಾದ ಸಂಸ್ಥೆಗಳ ಮಾಲಕರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ. ಮೊದಲಾಗಿ ಅಂತಹವರ ಮೇಲೆ FIR ದಾಖಲು ಮಾಡಿಕೊಳ್ಳಲಾಗುತ್ತದೆ. ಬಳಿಕ 20 ಸಾವಿರ ರೂ.ಗಳಿಂದ 50 ಸಾವಿರ ರೂ.ಗಳವರೆಗೆ ದಂಡ ಹಾಗೂ ಆರು ತಿಂಗಳಿನಿಂದ ಎರಡು ವರ್ಷದವರೆಗೆ ಜೈಲು ಶಿಕ್ಷೆ  ವಿಧಿಸುವ ಅವಕಾಶ ಕಾನೂನಿನಲ್ಲಿದೆ. ಅಲ್ಲದೆ 20 ಸಾವಿರ ರೂ. ಕಾರ್ಪಸ್‌ ನಿಧಿಯನ್ನು ಅವರು ಪಾವತಿಸಬೇಕಾಗುತ್ತದೆ.

ಅರಿವು ಅಗತ್ಯ
ಹಿಂದಿನ ಕಾಯ್ದೆ ಪ್ರಕಾರ 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡಲ್ಲಿ ಅವರನ್ನು ಬಾಲ ಕಾರ್ಮಿಕರೆಂದು ಪರಿಗಣಿಸಲಾಗಿತ್ತು. ಕಳೆದೆರಡು ವರ್ಷಗಳಿಂದೀಚೆಗೆ ಕಾಯ್ದೆ ಬದಲಾವಣೆಗೊಂಡಿದ್ದು, 18 ವರ್ಷದೊಳಗಿನ ಮಕ್ಕಳನ್ನೂ ಅಪಾಯಕಾರಿ ಕ್ಷೇತ್ರಗಳಲ್ಲಿ ದುಡಿಸಿಕೊಳ್ಳುವಂತಿಲ್ಲ. ಸಾರ್ವಜನಿಕರು ಈ ಬಗ್ಗೆ ಅರಿವು ಹೊಂದಬೇಕು. 
– ರೆನ್ನಿ ಡಿ’ಸೋಜಾ, ರಾಜ್ಯ ಸಂಚಾಲಕ, ಬಾಲ ಕಾರ್ಮಿಕ ಪದ್ಧತಿ ವಿರೋಧಿ ಆಂದೋಲನ

— ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next