ಮಂಗಳೂರು: ಕರೋಪಾಡಿ ಅಕ್ಷಯ ನಾಯಕ್ ನಿರ್ದೇಶನದ ಜಿಎಸ್ ಬಿ ಕೊಂಕಣಿ ಭಾಷೆಯ ಅಂತು ಸಿನಿಮಾದ ಧ್ವನಿ ಸುರುಳಿ ಜುಲೈ 28ರಂದು ಮಂಗಳೂರಿನ ಪುರಭವನದಲ್ಲಿ ಬಿಡುಗಡೆಯಾಗಲಿದೆ.
ಕೋಸ್ಟಲ್ ವುಡ್ ನ ಪ್ರಾದೇಶಿಕ ಭಾಷೆಯ ಅಂತು ಸಿನಿಮಾದ ವಿಶೇಷ ಧ್ವನಿ ಸುರುಳಿ ಹಕ್ಕನ್ನು ತನ್ನದಾಗಿಸಿಕೊಳ್ಳುವ ಮೂಲಕ ಲಹರಿ ಸಂಸ್ಥೆಯ ಮಾಲೀಕ ವೇಲು ಅವರು ಪ್ರೋತ್ಸಾಹದ ಹಸ್ತ ಚಾಚಿರುವುದಾಗಿ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂತು ಸಿನಿಮಾದ ಧ್ವನಿ ಸುರುಳಿ ಸಮಾರಂಭದಲ್ಲಿ ಲಹರಿ ಸಂಸ್ಥೆಯ ವೇಲು ಸೇರಿದಂತೆ ಹಲವು ಗಣ್ಯರು ಹಾಜರಾಗಲಿದ್ದಾರೆ. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ್ ಶೆಣೈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ಗಣೇಶ್ ಬೀಡಿ ವರ್ಕ್ಸ್ ನ ನಿರ್ದೇಶಕ ಜಗನ್ನಾಥ ಶೆಣೈ ಮೈಸೂರ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಆರ್.ಪಿ.ನಾಯ್ಕ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಬಿ. ದೇವದಾಸ್ ಪೈ, ಡಿವಿಕೆ ಗ್ರೂಪ್ ಪಾಲುದಾರರಾದ ವೇದವ್ಯಾಸ್ ಕಾಮತ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಸಾಹಿತಿ ಶ್ರೀನಿವಾಸ್ ಶೆಣೈ ಪುತ್ತೂರು, ಓಂ ಗಣೇಶ್ ಕಾಮತ್ ಉಪ್ಪುಂದ, ಸಂಗೀತ ನಿರ್ದೇಶಕ ಬಿ ಆತ್ಮಾರಾಮ್ ನಾಯಕ್ ಪುತ್ತೂರು ಹಾಗೂ ಸಂಗೀತ ನಿರ್ದೇಶಕ ಹರೀಶ್ ಪಾಂಡವ್ ಮೈಸೂರು ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಓಂ ಗಣೇಶ್ ಕಾಮತ್ ಉಪ್ಪುಂದ ಹಾಗೂ ಶ್ರೀನಿವಾಸ್ ಶೆಣೈ ಪುತ್ತೂರು ಚಿತ್ರಕ್ಕೆ ಸಂಗೀತ ಸಾಹಿತ್ಯ ಬರೆದಿದ್ದಾರೆ. ಸಂಗೀತ ಹರಿರಾಮ್ (ಬಿ,ಆತ್ಮಾರಾಮ್ ನಾಯಕ್ ಹಾಗೂ ಹರೀಶ್ ಪಾಂಡವ್) ನೀಡಿದ್ದಾರೆ.
ಬಾಲಚಂದ್ರ ಪ್ರಭು, ಅಶ್ವಿನ್ ಪ್ರಭು ಮೈಸೂರು, ವರ್ಷ ಭಟ್ ಮೈಸೂರು, ಸ್ನೇಹ ದಾನಿವಾಸ್ ಮೈಸೂರು ಸಂಗೀತ ಹಾಡಿದ್ದಾರೆ.