Advertisement

ಅಂತರಗಟ್ಟೆ ದುರ್ಗಾಂಬಾ ದೇವಿ ಅದ್ಧೂರಿ ರಥೋತ್ಸವ

03:16 PM Feb 09, 2020 | Naveen |

ಅಜ್ಜಂಪುರ: ತಾಲೂಕಿನ ಅಂತರಗಟ್ಟೆಯಲ್ಲಿ ಪ್ರತಿಷ್ಠಿತ ದುರ್ಗಾಂಬಾ ದೇವಿ ರಥೋತ್ಸವ ಸಾವಿರಾರು ಭಕ್ತರ ಭಕ್ತಿ-ಭಾವದ ನಡುವೆ ಶನಿವಾರ ಅದ್ಧೂರಿಯಾಗಿ ನೆರವೇರಿತು. ಶುಕ್ರವಾರ ಸಂಪ್ರದಾಯದಂತೆ ದೇವಿಯನ್ನು ಶ್ಯಾನುಭೋಗರ ಮನೆಗೆ ಕೊಂಡೊಯ್ದು ಅಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ ಸಲ್ಲಿಸಲಾಯಿತು.

Advertisement

ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು. ಬಳಿಕ ಅಮ್ಮನವರ ಮೂರ್ತಿಯ ಉತ್ಸವ ನಡೆಸಿ, ರಥಾರೋಹಣಕ್ಕೆ ಬೀಳ್ಕೊಡಲಾಯಿತು. ರಥೋತ್ಸವದ ವೇಳೆ ಭಕ್ತರು ಜಯಘೋಷ ಹಾಕಿ ಸಂಭ್ರಮಿಸಿದರು. ಅಲ್ಲದೇ, ಬಾಳೆಹಣ್ಣು, ನಿಂಬೆಹಣ್ಣನ್ನು ರಥದ ಕಳಸದತ್ತ ಎಸೆದು ಸಂತಸಪಟ್ಟರು. ದೇವಿಗೆ ಹೂ-ಹಣ್ಣು ಸಮರ್ಪಿಸಿ ಭಕ್ತಿ ಮೆರೆದರು. ಜಾತ್ರಾ ಮಹೋತ್ಸವದ ಅಂಗವಾಗಿ ದುರ್ಗಾಂಬೆ, ಮಾರಾಳಮ್ಮ ದೇವಿ, ಮಾತಂಗೆಮ್ಮ, ಗೋಣಿ ಮರದಮ್ಮ ದೇವಿ ಉತ್ಸವ ಮೂರ್ತಿಗಳನ್ನು ವಿವಿಧ ಹೂವುಗಳಿಂದ ಅಲಂಕರಿಸಿ, ಪೂಜೆ ಸಲ್ಲಿಸಲಾಯಿತು.

ಜಾತ್ರೆಯಲ್ಲಿ ಪುರಿ, ಸಿಹಿ ತಿನಿಸುಗಳು, ಆಟಿಕೆಗಳ ಅಂಗಡಿಗಳು ತಲೆಎತ್ತಿದ್ದವು. ಹಿರಿಯರು ಪೂಜಾ ಸಾಮಗ್ರಿ ಮತ್ತು ಮಂಡಕ್ಕಿ, ಕಾರ ಮೂಮತಾದವುಗಳನ್ನು ಕೊಳ್ಳಲು ಮುಂದಾದರೆ, ಮಕ್ಕಳು ಆಟಿಕೆಗಳನ್ನು ಖರೀಸಲು ಮುಗಿಬಿದ್ದಿದ್ದರು. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿದ್ದರು. ಬಸ್‌ ಗಳಲ್ಲದೇ ಸಾವಿರಾರು ಎತ್ತಿನ ಬಂಡಿ, ನೂರಾರು ಟ್ರ್ಯಾಕ್ಟರ್‌, ಲಾರಿ, ಆಟೋಗಳಲ್ಲಿ ಸಾವಿರಾರು ಜನ ಭಕ್ತರು ಆಗಮಿಸಿದ್ದರು. ಉಪವಿಭಾಗಾ ಧಿಕಾರಿ ರೂಪಾ, ಅಜ್ಜಂಪುರ ತಹಶೀಲ್ದಾರ್‌ ವಿಶ್ವೇಶ್ವರ ರೆಡ್ಡಿ, ಶಾಸಕ ಡಿ.ಎಸ್‌. ಸುರೇಶ್‌ ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಪೊಲೀಸ್‌, ಗೃಹ ರಕ್ಷಕ ದಳ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next