ಮೈಕ್ರೋಸಾಫ್ಟ್ 1997ರಲ್ಲಿ ತನ್ನ ಆಪರೇಟಿಂಗ್ ಸಿಸ್ಟಮ್ 7 ಅನ್ನು ಬಿಡುಗಡೆಗೊಳಿಸಿದಾಗ ಕಲ್ಲಿನ ರಚನೆಗಳ ಮಧ್ಯಭಾಗದಿಂದ ಬೆಳಕಿನ ಕಿರಣಗಳು ಹೊಮ್ಮುತ್ತಿರುವ ಫೋಟೋವನ್ನು ತನ್ನ ವಾಲ್‌ಪೇಪರ್ ಆಗಿ ಮಾಡಿತ್ತು. ಅದನ್ನು ನೋಡಿದ ಎಷ್ಟೋ ಜನರಿಗೆ ಅಂತದ್ದೊಂದು ತಾಣವಿದೆಯೆಂಬುದೇ ಅರಿವಿರಲಿಲ್ಲ. ಇಂದು ಅಲ್ಲಿಗೆ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಕಲ್ಲಿನಲ್ಲಿ ನೈಸರ್ಗಿಕವಾಗಿ ಅರಳಿದ ಪ್ರಕೃತಿಯ ಈ ಚೆಂದವನ್ನು ಕಣ್ತುಂಬಿಕೊಳ್ಳಲೇ ಬೇಕು. ಮರಳುಗಾಡಿನಲ್ಲಿ ಏನು ಸೌಂದರ್ಯ? ಎನ್ನುವವರೂ ಇದಕ್ಕೆ ಮಾರುಹೋಗುತ್ತಾರೆ. ಇಲ್ಲಿನ ಆಕೃತಿಗಳ ಅಚ್ಚರಿಗೊಳಿಸುವ ರಚನೆ, ಪ್ರತೀ ಕಾಲಕ್ಕೂ ಇದು ಪ್ರವಾಸಿಗರಿಗೆ ನೀಡುವ ಖುಷಿಯನ್ನು ಹೇಳಿದಷ್ಟು ಸಾಲದು.
ಕಠೋರ ಮನುಷ್ಯರಿಗೆ “ಕಲ್ಲು’ ಮನಸ್ಸಿನವರು ಎಂದು ಹೇಳುವುದು ಪ್ರತೀತಿ. ಕಲ್ಲೆಂದರೆ ಘನವಾದ, ಯಾವುದೇ ಪರಿಸ್ಥಿತಿಗೂ ಕರಗದ, ಸೊರಗದ, ಗಟ್ಟಿಯಾದ ವಸ್ತು ಎಂಬ ಕಾರಣಕ್ಕೆ ಈ ಮಾತು ರೂಢಿಯಲ್ಲಿದೆ. ಆದರೆ ಕಲ್ಲುಗಳು ಸಹ ಕರಗುತ್ತವೆ. ಸಮುದ್ರದ ದಂಡೆಯಲ್ಲಿರುವ ಬಂಡೆಗಲ್ಲುಗಳು ದಿನಂಪ್ರತಿ ಅಲೆಗಳು ಬಂದು ಅಪ್ಪಳಿಸಿದಾಗ ಇಂಚಿಂಚಾಗಿ ಕರಗುತ್ತವಲ್ಲವೇ… ಶಾಖ ಹೆಚ್ಚಾದಾಗ ಬಂಡೆಗಲ್ಲಿನೊಳಗೂ ಬಿರುಕು ಬಿಟ್ಟು ಎರಡು ಹೋಳಾಗುತ್ತದೆ. ಹೀಗೆ ಕಲ್ಲುಗಳಿಂದ ಉಂಟಾದ ಅನೇಕ ನೈಸರ್ಗಿಕ ವಿಸ್ಮಯಗಳು ಜಗತ್ತಿನಲ್ಲಿವೆ. ಅದರಲ್ಲಿ ಒಂದು ಅರಿಝೊನಾ ರಾಜ್ಯದಲ್ಲಿರುವ ಆಂಟಲೋಪ್ ಕ್ಯಾನ್ಯಾನ್ಸ್. ಕ್ಯಾನ್ಯಾನ್ ಎಂದರೆ ದೊಡ್ಡದಾದ ಕಂದಕ ಅಥವಾ ಕಮರಿ. ಆಂಟಲೋಪ್ ಎಂದರೆ ಇಂಗ್ಲಿಷ್‌ನಲ್ಲಿ ಜಿಂಕೆ ಎಂದರ್ಥ. ಈ ಜಾಗದಲ್ಲಿ ಜಿಂಕೆಗಳು ಬಹಳವಾಗಿ ಓಡಾಡುತ್ತಿದ್ದರಿಂದ ಈ ಹೆಸರು ಬಂದಿದೆ.
ಅಮೆರಿಕದ ಮೂಲ ನಿವಾಸಿಗಳು ಅಂದರೆ ಮೂಲ ಅಮೆರಿಕನ್ನರಲ್ಲಿ ನವಾಹೋ ಜನಾಂಗವೂ ಒಂದು. 2021ರ ಜನಗಣತಿಯ ಅಂಕಿಅಂಶಗಳ ಪ್ರಕಾರ ಸುಮಾರು ಮೂರು ಲಕ್ಷದಷ್ಟು ಜನಸಂಖ್ಯೆಯಿರುವ ಈ ಜನಾಂಗ ನ್ಯೂ ಮೆಕ್ಸಿಕೊ, ಕೊಲರಾಡೋ, ಅರಿಝೊನಾ ಮತ್ತು ಯೂಟಾ ರಾಜ್ಯಗಳಲ್ಲಿ ಹೆಚ್ಚಾಗಿ ವಾಸಿಸುತ್ತಾರೆ. ಅಮೆರಿಕ ಸರಕಾರ ಮೂಲ ಅಮೆರಿಕನ್ನರಾದ ಇಂತಹ ಆದಿವಾಸಿ ಜನಾಂಗಗಳಿಗೆಂದೇ ಭೂಮಿಯನ್ನು ಮೀಸಲಿಟ್ಟಿದೆ. ಹಾಗೆ ಮೀಸಲಿಟ್ಟಿರುವ ಜಾಗದಲ್ಲಿಯೇ ಈ ಆಂಟಲೋಪ್ ಕ್ಯಾನಿಯನ್ ಕಾಣಸಿಗುತ್ತವೆ. ಆದ್ದರಿಂದ ಇದು ಸರಕಾರಕ್ಕೆ ಸೇರಿದ್ದಲ್ಲ. ನವಾಹೋ ಕುಟುಂಬಕ್ಕೆ ಸೇರಿದ ಖಾಸಗಿ ಸ್ವತ್ತು. ಪ್ರವಾಸಿಗರು ಈ ಕ್ಯಾನ್ಯಾನ್ ನೋಡಬೇಕೆಂದರೆ ಅವರ ಒಡೆತನಕ್ಕೆ ಸೇರಿದ ಖಾಸಗಿ ಟೂರ್‌ಗಳನ್ನು ಬುಕ್ ಮಾಡಿ ಅದರ ಮೂಲಕವೇ ನೋಡಬೇಕು. ಸುಮಾರು ನಲವತ್ತೈದು ನಿಮಿಷಗಳಿಂದ ಒಂದು ಗಂಟೆಯವರೆಗೆ ನಡೆಯುವ ಈ ಟೂರ್‌ಗಳಿಗೆ ಸಾಕಷ್ಟು ಬೇಡಿಕೆಯಿರುತ್ತದೆ. ನಾಲ್ಕೈದು ತಿಂಗಳುಗಳಿಗೂ ಮೊದಲೇ ನಿಗದಿ ಮಾಡಿಕೊಳ್ಳಬೇಕು.
ಈ ಆಂಟಲೋಪ್ ಕ್ಯಾನಿಯನ್ಸ್ ನಿರ್ಮಾಣವಾದ ಬಗೆಯೇ ಒಂದು ವಿಸ್ಮಯ. ಸಾವಿರಾರು ವರ್ಷಗಳ ಹಿಂದೆ ಬೃಹತ್ತಾದ ಮರಳುಗಲ್ಲು ನೀರಿನ ಹರಿವಿನಿಂದ ಸವೆಯುತ್ತ ಹೋಗಿ ಅದರೊಳಗೆ ಕಡಿದಾದ ಮಾರ್ಗವೊಂದು ನಿರ್ಮಾಣವಾಗಿದೆ. ಇದಾಗಿದ್ದು ಜುರಾಸಿಕ್ ಯುಗದಲ್ಲಿ. ಅಂದರೆ ಸುಮಾರು 190 ಮಿಲಿಯನ್ ವರ್ಷಗಳ ಹಿಂದೆ! ಸುತ್ತಲೂ ಬಂಜರು ಭೂಮಿ ಮಧ್ಯದಲ್ಲಿ ಈ ಕಂದಕವಿದೆ. ಹೀಗೆ ಕಲ್ಲು ಸೀಳಿ ನಿರ್ಮಾಣವಾದ ಗೋಡೆಗಳ ಮೇಲೆ ಉಸುಕು, ಗರಟ, ಖನಿಜ ಇತ್ಯಾದಿಗಳೆಲ್ಲ ಸೇರ್ಪಡೆಯಾಗಿ ತೆಳುವಾದ ನೆರಿಗೆಗಳಂತಹ ರಚನೆಗಳು ನಿರ್ಮಾಣವಾಗಿವೆ. ಕೆಂಪು ಮಿಶ್ರಿತ ಕೇಸರಿ ಬಣ್ಣದಲ್ಲಿರುವ ಈ ಗೋಡೆಗಳು ಭಿನ್ನ ಆಕಾರಗಳನ್ನು ಹೊಂದಿರುವುದರಿಂದ ನೋಡಲು ಚೆಂದವೆನ್ನಿಸುತ್ತವೆ.
ಪ್ರತೀ ಸಲ ಜೋರಾಗಿ ಮಳೆಯಾದಾಗಲೂ ಈ ಕಂದಕದೊಳಗೆ ನೀರು ನುಗ್ಗಿ ಮೆತ್ತನೆಯ ಗೋಡೆಗಳ ಹಾಯ್ದು ಹೊಸ ಬಗೆಯ ಆಕಾರ ನೀಡುತ್ತವೆ. ಬೇಸಗೆಗಾಲದಲ್ಲಿ ಕಿಂಡಿಯೊಳಗಿಂದ ಕಂದಕದೊಳಗೆ ಇಳಿಯುವ ಬೆಳಕಿನ ಕಿರಣಗಳು ನೆರಳು ಬೆಳಕಿನಾಟದ ವಿನ್ಯಾಸಗಳನ್ನು ಪ್ರದರ್ಶಿಸುತ್ತ ನೋಡುಗರಿಗೆ ಎಂದೂ ಕಂಡಿರದ ವಿಸ್ಮಯವನ್ನು ತೋರಿಸುತ್ತವೆ. ಭೂಮಿಯ ಆಳದೊಳಗೆ ಇಷ್ಟು ಸುಂದರವಾದ ತಾಣವೊಂದಿದೆ ಎಂದು ಹೇಳಿದರೆ ನಂಬಲಿಕ್ಕೆ ಆಗದಂತಹ ಜಾಗವಿದು. ಅಲ್ಲಿ ಇದ್ದಷ್ಟು ಹೊತ್ತು ಭೂಮಿಯನ್ನು ಬಿಟ್ಟು ಇನ್ನಾವುದೋ ಬೇರೆಯ ಗ್ರಹಕ್ಕೆ ಬಂದಿಲ್ಲವೇನೋ ಎಂದೆನ್ನಿಸುತ್ತದೆ. ಅಲೆಗಳಂತಹ ರಚನೆ ಕಲ್ಲಿನ ಮೇಲೆ ಆಗಿದೆಯೆಂದರೆ ಅದೆಷ್ಟು ವರ್ಷಗಳ ಕಾಲ ನೀರು ಈ ಕಲ್ಲನ್ನು ಸವೆಸಿರಬಹುದು? ಇನ್ನೂ ನೂರು ವರ್ಷಗಳ ಅನಂತರ ಈ ಕ್ಯಾನ್ಯಾನ್ ಹೇಗೆಲ್ಲ ಬದಲಾಯಿಸಬಹುದು? ಎಂದು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.
ಈ ಕ್ಯಾನ್ಯಾನ್‌ಗಳ ವಿಶಿಷ್ಟತೆಯೆಂದರೆ ಕಡಿದಾದ ಮಾರ್ಗದ ಮೂಲಕ ಸ್ವಾಭಾವಿಕವಾಗಿ ನಿರ್ಮಾಣವಾದ ಈ ರಚನೆಗಳನ್ನು ನೋಡುತ್ತ ಸಾಗುವುದು. ಟೂರ್ ಗೈಡ್ ಕರೆದೊಯ್ಯುತ್ತಿದ್ದಾ ಗ ಅಲ್ಲೊಂದು ಇಂತಹ ವಿಸ್ಮಯ ಇದೆಯೇ ಎಂದು ಅಚ್ಚರಿ ಪಡುವಷ್ಟು ಬಂಜರು ಭೂಮಿಯಿತ್ತು ಸುತ್ತಲೂ. ನಿಧಾನವಾಗಿ ಮುಂದಕ್ಕೆ ಸಾಗಿದಾಗ ಮುಂದೆ ಭೂಮಿಯ ಮೇಲೆ ಕೊನೆಯಿಲ್ಲದ ಬಿರುಕೊಂದು ಕಾಣಿಸತೊಡಗಿತು. ನಿಧಾನವಾಗಿ ಈ ಬಿರುಕು ದೊಡ್ಡದಾಗುತ್ತ ಹೋಗಿ ನಾವು ಈ ಬಿರುಕಿನೊಳಗೆ ಸಾಗಲಿದ್ದೇವೆ ಎಂದು ತಿಳಿದಾಗ ಯಾವತ್ತೂ ಇಂತಹ ವಿಸ್ಮಯವನ್ನೇ ನೋಡಿರದ ನಮಗೆ ಅಚ್ಚರಿಯಾಗಿತ್ತು.
ಕೆಳಗಿಳಿಯಲು ಚಿಕ್ಕದಾದ ಮರದ ಮೆಟ್ಟಿಲುಗಳಿದ್ದವು. ನಮ್ಮ ಮೈ ಅಕ್ಕಪಕ್ಕದ ಗೋಡೆಗೆ ಹತ್ತುವಷ್ಟು ಕಡಿದಾದ ದಾರಿ. ನಿಧಾನವಾಗಿ ಮುಂದೆ ಸಾಗಿದಂತೆಲ್ಲ ನಾವು ಇನ್ನಷ್ಟು ಕೆಳಗೆ ಸಾಗುತ್ತ ನಮ್ಮ ಎಡ ಬಲಕ್ಕಿದ್ದ ಗೋಡೆಯ ಆಕಾರ ಭಿನ್ನವಾಗುತ್ತ ಹೋಗಿ ತರ ತರಹದ ರಚನೆಗಳು ಕಾಣಿಸತೊಡಗಿದವು. ಮೇಲೆ ತಲೆಯೆತ್ತಿ ನೋಡಿದರೆ ನೀಲಿ ಆಕಾಶ. ಸುತ್ತಲೂ ಅಲೆ ಅಲೆಗಳಂತಹ ವಿನ್ಯಾಸ ಹೊತ್ತು ನಿಂತಿದ್ದ ಕಲ್ಲಿನ ಗೋಡೆ. ಒಂದು ಕಡೆ ಹಾರುತ್ತಿರುವ ಹುಡುಗಿಯಂತಹ ರಚನೆ. ಇನ್ನೊಂದು ಕಡೆ ಕುದುರೆಯಂತಹ ರಚನೆ. ಮತ್ತೂಂದೆಡೆ ಸುರುಳಿಯಾಕಾರದ ರಚನೆ. ಭೂಮಿಯೊಳಗೆ ಕಲ್ಲಿನಿಂದ ಕಟ್ಟಿದ ಅರಮನೆಯೇನೋ ಎಂಬಂತೆ ಕೇಸರಿ ಬಣ್ಣದ ಗೋಡೆಗಳು. ಇಣುಕುತ್ತಿದ್ದ ಸೂರ್ಯನ ಬೆಳಕು. ಕೆಲವು ಕಡೆ ಬೆಳಕಿನ ಕಿರಣಗಳು ಗೋಡೆಯ ಮೇಲಿದ್ದ ನೆರಳಿನ ಜತೆ ಆಟವಾಡುತ್ತಿರುವಂತೆ ಕಾಣಿಸುತ್ತಿತ್ತು. ಅಲ್ಲೊಂ ದು ಹೊಸ ಬಗೆಯ ನೋಟ ಸೃಷ್ಟಿಯಾಗಿತ್ತು. ಸುಮಾರು ನಲವತ್ತು ನಿಮಿಷಗಳ ನಾವು ಈ ಕ್ಯಾನ್ಯಾನ್ಸ್ ಒಳಗೆ ಸುತ್ತು ಹಾಕುತ್ತ ಬದುಕಿನ ತುಂಬ ನೆನಪಿಡುವಂತಹ ಅಚ್ಚರಿಗಳನ್ನು ಕಣ್ಣು ತುಂಬಿಸಿಕೊಳ್ಳುತ್ತಿದ್ದೇವು.
ಇದರಲ್ಲಿಯೇ ಲೋವರ್ ಮತ್ತು ಅಪ್ಪರ್ ಎಂಬ ಎರಡು ಭಾಗಗಳಿವೆ. ಎರಡರಲ್ಲೂ ಒಂದೇ ಬಗೆಯ ರಚನೆಗಳು ಇವೆಯಾದರೂ ಅಪ್ಪರ್ ಕ್ಯಾನ್ಯಾನ್ಸ್ ಹೆಚ್ಚು ಪ್ರತೀತಿ. ಇದು ಲೋವರ್‌ಗಿಂತಲೂ ಸ್ವಲ್ಪ ಅಗಲವಿದೆ ಮತ್ತು ಅಳತೆಯಲ್ಲೂ ಅದಕ್ಕಿಂತ ದೊಡ್ಡದು. ಜತೆಗೆ ಇಲ್ಲಿ ಬೀಳುವ ಬೆಳಕಿನಿಂದ ಚಂದವಾದ ಫೋಟೋಗಳನ್ನು ಸೆರೆ ಹಿಡಿಯಬಹುದು ಎಂಬುದು ಮುಖ್ಯ ಕಾರಣ. ಚಾರ್ಲ್ಸ್ ಓ ರೇರ್ ಎಂಬ ನ್ಯಾಶಲ್ ಜಿಯೋಗ್ರಾಫಿಕ್ ಫೋಟೊಗ್ರಾಫರ್ ತೆಗೆದ ಆಂಟಲೋಪ್ ಕ್ಯಾನ್ಯಾನ್ ಫೋಟೋವನ್ನು 1997 ರಲ್ಲಿ ಮೈಕ್ರೋಸಾಫ್ಟ್ ತನ್ನ ಆಪರೇಟಿಂಗ್ ಸಿಸ್ಟಮ್ 7 ಅನ್ನು ಬಿಡುಗಡೆ ಮಾಡಿದಾಗ ಇದನ್ನು ವಾಲ್‌ಪೇಪರ್ ಆಗಿ ಇಟ್ಟಿತ್ತು. ಆ ಫೋಟೋ ಬಹಳ ಜನಪ್ರಿಯವಾಗಿ ಅಲ್ಲಿಯವರೆಗೂ ಆಂಟಲೋಪ್ ಕ್ಯಾನ್ಯಾನ್ಸ್ ಬಗ್ಗೆ ಗೊತ್ತಿರದ ಅದೆಷ್ಟೋ ಜನ ಇದರ ವಿಶಿಷ್ಟತೆಗೆ ಮಾರು ಹೋಗಿ ಆ ಜಾಗಕ್ಕೆ ಭೇಟಿ ನೀಡಲು ಶುರು ಮಾಡಿದರು.
ಆ ಫೋಟೊಗೆ ಮೈಕ್ರೋಸಾಫ್ಟ್ ಎಷ್ಟು ದುಡ್ಡು ಕೊಟ್ಟಿತೆಂದು ಖಚಿತವಾಗಿ ಗೊತ್ತಿಲ್ಲದೇ ಹೋದರೂ ಮಿಲಿಯನ್ ಗಟ್ಟಲೇ ದುಡ್ಡು ಕೊಟ್ಟು ಖರೀದಿಸಿದ್ದರೆಂದು ಟೂರ್ ಗೈಡ್ ಹೇಳುತ್ತಾನೆ. ಪೀಟರ್ ಲಿಕ್ ಎಂಬಾತ ಇಲ್ಲಿ ತೆಗೆದ ಫೋಟೋ ಒಂದು ಬರೋಬ್ಬರಿ ಆರೂವರೆ ಮಿಲಿಯನ್ನಿಗೆ ಮಾರಾಟವಾಗಿ ಅತೀ ದುಬಾರಿಯಾದ ಫೋಟೋ ಎಂದು ಹೆಸರು ಪಡೆದಿದೆ. ಹೀಗಾಗಿ ಈ ಜಾಗ ಫೋಟೋಗ್ರಾಫರ್‌ಗಳ ಮೆಚ್ಚಿನ ತಾಣ. ಈ ರಚನೆಗಳನ್ನು ಹೊಸ ಕೋನದಲ್ಲಿ, ವಿನ್ಯಾಸದಲ್ಲಿ ಹಿಡಿದಿಡುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ.
ಮೊದಲೇ ಹೇಳಿದಂತೆ ಇದು ಖಾಸಗಿ ಸ್ವತ್ತು. ಆದಿವಾಸಿ ಜನಾಂಗಕ್ಕೆ ಸೇರಿದ್ದಾದರೂ ಸುಮಾರು ಇಪ್ಪತ್ತು ವರ್ಷಗಳಿಂದ ಟೂರ್‌ಗಳ ಮೂಲಕ ಪ್ರವಾಸಿಗರಿಗೆ ಈ ವಿಸ್ಮಯವನ್ನು ತೋರಿಸುತ್ತಿರುವ ನೊವಾಹೋ ಕುಟುಂಬ ಈ ಭೂಮಿಯನ್ನು ಬಹಳ ಗೌರವಿಸುತ್ತದೆ. ಇದೇ ಜನಾಂಗಕ್ಕೆ ಸೇರಿರುವ ಜನ ಟೂರ್ ಗೈಡ್ ಆಗಿ ನೋವಾಹೋ ಜನಾಂಗದ ಇತಿಹಾಸದ ಬಗ್ಗೆ, ಭೂಗರ್ಭಶಾಸ್ತ್ರದ ಬಗ್ಗೆ, ಈ ರಚನೆಗಳ ಬಗ್ಗೆ, ಕ್ಯಾನ್ಯಾನ್ಸ್‌ಗೆ ಸಂಬಂಧಪಟ್ಟಂತಹ ಆಸಕ್ತಿಕರವಾದ ವಿಷಯಗಳ ಬಗ್ಗೆ ಹೇಳುತ್ತ ಇಡೀ ಟೂರ್ ಅನ್ನು ಸಾರ್ಥಕಗೊಳಿಸುತ್ತಾರೆ. ಫೋಟೋಗ್ರಾಫರ್ ಇರಲಿ, ಪ್ರಕೃತಿ ಪ್ರೇಮಿಯೇ ಇರಲಿ ಅಥವಾ ಟ್ರಾವೆಲ್ ಫ್ರೀಕ್ ಇರಲಿ, ಎಲ್ಲ ಬಗೆಯ ಜನರಿಗೂ ಇದು ನೋಡಲೇಬೇಕಾದಂತಹ ಜಾಗ. ಅಲ್ಲಿಂದ ಹೊರಡುವಾಗ ಅಚ್ಚರಿಯೊಂದು ಮನಸ್ಸೊಳಗೆ ಅಚ್ಚಳಿಯಂತೆ ಉಳಿಯುವುದಂತೂ ಖಂಡಿತ.
*ಸಂಜೋತಾ ಪುರೋಹಿತ್, ಸ್ಯಾನ್‌ಫ್ರಾನ್ಸಿಸ್ಕೋ