ನುಕುವಲೋಫಾ: ಸಾಮಾನ್ಯವಾಗಿ ಆಕಾಶ ನೀಲಿಯಾಗಿ ಕಾಣುತ್ತದೆ. ಆದರೆ, ನೇರಳೆ ಬಣ್ಣಕ್ಕೆ ತಿರುಗುವುದನ್ನು ನಾವು ನೋಡಿಲ್ಲ. ಈಗ ನೋಡಬಹುದು! ಆದರೆ, ಅದನ್ನು ನೋಡಲು ನೀವು ಅಂಟಾರ್ಟಿಕಾಕ್ಕೆ ಹೋಗಬೇಕು!
ಹೌದು, ಅಂಟಾರ್ಟಿಕಾದ ಬಾನಂಗಳವು ನೇರಳೆ ಬಣ್ಣಕ್ಕೆ ತಿರುಗಿದ್ದು, ನೋಡುಗರನ್ನು ಸೆಳೆಯುತ್ತಿದೆ. ಆದರೆ, ಆಗಸವು ಈ ರೀತಿ ವರ್ಣರಂಜಿತವಾಗಲು ಕಾರಣವೇನು ಗೊತ್ತೇ? ದಿ ಹುಂಗಾ ಟೋಂಗಾ – ಹುಂಗಾ ಹಪಾಯಿ ಎಂಬ ಅಗ್ನಿಪರ್ವತ ಸ್ಫೋಟಗೊಂಡಿರುವುದು.ವಿಶೇಷವೆಂದರೆ, ಜ್ವಾಲಾಮುಖಿ ಸ್ಫೋಟಗೊಂಡಿರುವುದು ಜ. 15ರಂದು.
ಜ್ವಾಲಾಮುಖಿ ಸ್ಫೋಟದಿಂದ ಸಲ್ಫೇಟ್ ಕಣಗಳು, ಸಮುದ್ರ ಉಪ್ಪು ಮತ್ತು ನೀರಿನ ಭಾಷ್ಪವನ್ನು ಒಳಗೊಂಡ ಅನಿಲದ ಕಣಗಳು ಗಾಳಿಯಲ್ಲಿ ಸೇರಿಕೊಳ್ಳುತ್ತದೆ. ಈ ಕಣಗಳು ಸೂರ್ಯನ ಕಿರಣಗಳನ್ನು ಚದುರುವಂತೆ ಮಾಡಿ, ಆಗಸದಲ್ಲಿ ಗುಲಾಬಿ, ನೇರಳೆ ಮತ್ತು ನೀಲಿ ಬಣ್ಣಗಳ ಹೊಳಪು ಮೂಡುವಂತೆ ಮಾಡುತ್ತವೆ. ಇದನ್ನು “ಆಫ್ಟರ್ ಗ್ಲೋಸ್’ ಎನ್ನುತ್ತಾರೆ. ಅಂಟಾರ್ಟಿಕಾದ ಬಾನಂಗಳವು ನೇರಳೆ ಬಣ್ಣದಿಂದ ಕಂಗೊಳಿಸಲು ಇದುವೇ ಕಾರಣ.
ತಿಂಗಳ ಹಿಂದೆಯೂ ಹೀಗಾಗಿತ್ತು
ಜೂನ್ ತಿಂಗಳ ಆರಂಭದಲ್ಲಿ ನ್ಯೂಜಿಲೆಂಡ್‌ನಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಆಗಸವು ವರ್ಣರಂಜಿತವಾಗಿ ಕಂಡುಬಂದಿತ್ತು. ಇದು ಕೂಡ ಅಂಟಾರ್ಟಿಕಾದ ಜ್ವಾಲಾಮುಖಿ ಸ್ಫೋಟದ ಎಫೆಕ್ಟ್ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಅಂಟಾರ್ಟಿಕಾದಿಂದ ನ್ಯೂಜಿಲೆಂಡ್‌ಗೆ 5 ಸಾವಿರ ಕಿ.ಮೀ. ಅಂತರವಿದ್ದು, ಟೋಂಗಾದಿಂದ ನ್ಯೂಜಿಲೆಂಡ್ 7 ಸಾವಿರ ಕಿ.ಮೀ. ದೂರದಲ್ಲಿದೆ.