Advertisement

ಕಾಫಿ ಕೊಯ್ಲಿಗೆ ಇರುವೆ ಕಾಟ

01:36 PM Feb 04, 2020 | Suhan S |

ಕೊಟ್ಟಿಗೆಹಾರ: ಇದು ಕುಯ್ಲಿನ ಸಮಯವಾಗಿರುವುದರಿಂದ ಕಾಫಿ ತೋಟಗಳಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಆದರೆ, ಕಾಫಿ ಕುಯ್ಲಿಗೆ ಕುನಕ ಎಂಬ ಇರುವೆ ಕಾಟದಿಂದ ಕಾರ್ಮಿಕರು ಹಿಂದೇಟು ಹಾಕುತ್ತಿರುವುದು ರೈತರಿಗೆ ತಲೆನೋವಾಗಿದೆ.

Advertisement

ಅತಿವೃಷ್ಟಿಯಿಂದ ಕೀಟಗಳ ಸಂತತಿ ಅತಿಯಾಗಿದ್ದು, ಮಳೆಗಾಲದಲ್ಲಿ ಜಿಗಣಿ(ಇಂಬಳ), ಚುಂಗಳ(ಕಂಬಳ ಹುಳ), ಚಳಿಗಾಲ ಬರುತ್ತಲೆ ಉಣುಗು (ಉಣ್ಣೆ), ಕಾಫಿ ಕುಯ್ಲಿನ ಸಮಯಕ್ಕೆ ಬಂದರೆ ಕುನಕ (ಕುಣಜ) ಮತ್ತು ಚಗಳಿಗಳ ಕಾಟ ಅತಿಯಾಗಿದೆ. ಇದರಿಂದ ಕಾಫಿ ಕುಯ್ಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹಣ್ಣಾಗಿ ನಿಂತ ಕಾಫಿ ಗಿಡದ ಹಲವು ರೆಂಬೆಗಳನ್ನು ಬಳಸಿ ಕುನಕಗಳು ಗೂಡು ಕಟ್ಟುವುದರಿಂದ ಕಾಫಿ ಕುಯ್ಲು ಸಂದರ್ಭದಲ್ಲಿ ಕುನಜದಿಂದ ಕಚ್ಚಿಸಿಕೊಳ್ಳುತ್ತಲೇ ಕಾಫಿ ಕುಯ್ಯುವ  ಸ್ಥಿತಿ ಬಂದಿದೆ.

ಕೀಟನಾಶಕ ಬಳಸಿ ಕುನಕದ ಕೀಟ ಬಾಧೆ ನಿಯಂತ್ರಿಸಬಹುದಾದರೂ ಎಲ್ಲಾ ಗಿಡಗಳಲ್ಲೂ ಕುನಕಗಳ ಕಾಟ ಇರುವುದರಿಂದ ಎಲ್ಲಾ ಕಾಫಿ ಗಿಡಗಳಿಗೆ ಕೀಟನಾಶಕ ಸಿಂಪಡಿಸುವುದು ದುಬಾರಿ ಮತ್ತು ಕೀಟನಾಶಕಗಳಿಂದ ಅಡ್ಡ ಪರಿಣಾಮಗಳಿರುವುದರಿಂದ ಕೀಟನಾಶಕ ಸಿಂಪಡಿಸುವುದು ಕೂಡ ರೈತರಿಗೆ ಸವಾಲಾಗಿ ಪರಿಣಮಿಸಿದೆ. ಕುನಜಗಳು ಸಗಣಿಯನ್ನು ಬಳಸಿ ಗೂಡು ಕಟ್ಟುತ್ತವೆ. ಗೋಮಾಳಗಳು ಕಡಿಮೆಯಾಗುವುದರಿಂದ ಜಾನುವಾರುಗಳು ತೋಟಗಳಲ್ಲಿ ಸಂಚರಿಸುವುದರಿಂದ ತೋಟದ ನಡುವೆ ಸಿಗುವ ಸಗಣಿಯನ್ನು ಬಳಸಿ ಕುನಜಗಳು ಗೂಡು ಕಟ್ಟಿರುವುದರಿಂದ ಕೆಲ ವರ್ಷಗಳಿಂದ ಕಾಫಿ ತೋಟಗಳಲ್ಲಿ ಕುನಕಗಳ ಕಾಟ ಹೆಚ್ಚಾಗಿದೆ. ಕೈಗೆ ಕವಚಗಳನ್ನು ಹಾಕಿಕೊಂಡು ಕಾಫಿ ಕುಯ್ಲು ಮಾಡಲು ಸಾಧ್ಯವಿದ್ದರೂ ಕುನಕಗಳು ಇತರೆ ಇರುವೆಗಳಂತೆ ಕಚ್ಚದೇ ಕಾಫಿ ಗಿಡದ ಕೆಳಗೆ ಕಾಫಿ ಕುಯ್ಲು ಮಾಡುವ ಕಾರ್ಮಿಕರ ಮೇಲೆ ಕುನಕಗಳು ಉದುರಿ ನಂತರ ಕಚ್ಚಲು ಪ್ರಾರಂಭಿಸುತ್ತವೆ. ಇದರಿಂದ ಕೈಗೆ ಕವಚಗಳನ್ನು ಹಾಕುವುದು ಕೂಡ ಕುನಕಗಳ ತಡೆಗೆ ಪರಿಣಾಮಕಾರಿಯಲ್ಲ. ಅತಿವೃಷ್ಟಿ, ಅನಾವೃಷ್ಟಿ, ಕಾರ್ಮಿಕರ ಕೊರತೆ, ಕಡಿಮೆ ಇಳುವರಿ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವ ಕಾಫಿ ಬೆಳೆಗಾರರಿಗೆ ಕುನಕಗಳ ಕಾಟ ತಲೆನೋವಾಗಿ ಪರಿಣಮಿಸಿದೆ.

ಅತಿಯಾದ ಮಳೆ ಮತ್ತು ತೇವಾಂಶದಿಂದ ಈ ಹಿಂದೆ ನೆಲಮಟ್ಟದಲ್ಲಿ ಗೂಡು ಕಟ್ಟುತ್ತಿದ್ದ ಕುನಕಗಳು ಕಾಫಿ ಮತ್ತು ಕೆಲ ಜಾತಿಯ ಮರಗಳಲ್ಲಿ ಗೂಡು ಕಟ್ಟುತ್ತವೆ. ಉಣುಗು ಎಂಬ ಒಂದು ರೀತಿಯ ಕೀಟಗಳು ಇದ್ದ ಕಡೆಗಳಲ್ಲಿ ಕುನಕಗಳ ಕಾಟ ಕಡಿಮೆ ಇರುತ್ತದೆ. ಕಾಫಿಯ ನಾಲ್ಕಾರು ರೆಂಬೆಗಳನ ಆಧಾರ ಪಡೆದು ಕುನಕಗಳು ಗೂಡನ್ನು ಕಟ್ಟುತ್ತವೆ.  ಗಿರೀಶ್‌,ಕೃಷಿ ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ, ಮೂಡಿಗೆರೆ

ಕುನಕ, ಚಗಳಿ ಗಿಡದಲ್ಲಿ ಹೆಚ್ಚಿರುವುದರಿಂದ ಕಾಫಿ ಹಣ್ಣಿನ ಕುಯ್ಲಿಗೆ ತೊಂದರೆಯಾಗಿದೆ. ಈ ಮುಂಚೆ ದಿನವೊಂದಕ್ಕೆ 8 ರಿಂದ 10 ಬುಸಲು ಕಾಫಿ ಕುಯ್ಯುತ್ತಿದ್ದೆವು. ಈಗ 4 ರಿಂದ 5 ಬುಸಲಿಗೆ ಇಳಿದಿದೆ. ಕುನಕದಿಂದಾಗಿ ದಿನಕ್ಕೆ ಕಾಫಿ ಕುಯ್ಲಿನ ಪ್ರಮಾಣ ಕಡಿಮೆಯಾಗಿದೆ.  ಶಕುಂತಲಾ,ಕಾಫಿ ತೋಟದ ಕಾರ್ಮಿಕರು

Advertisement

 

ಸಂತೋಷ್‌

Advertisement

Udayavani is now on Telegram. Click here to join our channel and stay updated with the latest news.

Next