Advertisement

“ವ್ಯಾಕರಣ ದೋಷದಿಂದ ಉತ್ತರವೇ ತಪ್ಪಾಗದಿರಲಿ’

11:24 PM Jan 28, 2020 | Lakshmi GovindaRaj |

ಬೆಂಗಳೂರು: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಸಣ್ಣಪುಟ್ಟ ವ್ಯಾಕರಣ ದೋಷದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಆದರೆ, ಇಡೀ ಉತ್ತರದ ಅರ್ಥವೇ ಬದಲಾಗುವಂತೆ ವ್ಯಾಕರಣ ದೋಷ ಆಗಬಾರದು ಎಂಬ ಎಚ್ಚರ ಇರಲಿ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ.ಸುಮಂಗಳಾ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

Advertisement

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳನ್ನೇ ಗಮನದಲ್ಲಿಟ್ಟುಕೊಂಡು ಏರ್ಪಡಿಸಿರುವ “ಸಂವೇದನಾ-ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಬಂದ ಕರೆಗಳಿಗೆ ಉತ್ತರಿಸಿದ ಅವರು, ಈ ಬಾರಿ ಲಿಬರಲ್‌ ಮೌಲ್ಯಮಾಪನ ಮಾಡಲಿದ್ದೇವೆ ಎಂದು ತಿಳಿಸಿದರು.

ಫೋನ್‌ ಇನ್‌ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗದ ವಿದ್ಯಾರ್ಥಿಗಳು, ಪಾಲಕರು, ಪೋಷಕರು, ಶಾಲಾ ಶಿಕ್ಷಕರು ಕರೆ ಮಾಡಿ, ಪರೀಕ್ಷೆಯ ಮಾಹಿತಿ ಪಡೆದರು. ವಿದ್ಯಾರ್ಥಿಗಳು ಪರೀಕ್ಷಾ ಭಯ, ಪ್ರಶ್ನೆ ಪತ್ರಿಕೆಯ ಬದಲಾವಣೆ ಸೇರಿ ವಿವಿಧ ವಿಷಯಗಳ ಬಗ್ಗೆ ವಿವರ ಪಡೆದರು.

ಪರೀಕ್ಷೆಯಲ್ಲಿ ವ್ಯಾಕರಣದೋಷಕ್ಕೆ ಅಂಕ ಕಳೆಯುತ್ತಾರೆಂದು ಹೊಸಪೇಟೆಯ ಶಿವಪ್ರಸಾದ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿ.ಸುಮಂಗಳಾ ಅವರು, ಸಣ್ಣಪುಟ್ಟ ವ್ಯಾಕರಣ ದೋಷಕ್ಕೆ ಅಂಕಗಳನ್ನು ಕಡಿತ ಮಾಡುವುದಿಲ್ಲ. ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಸಂಪೂರ್ಣ ವ್ಯಾಕರಣ ದೋಷ ಇರುವ ಉತ್ತರ ಪತ್ರಿಕೆಗೆ ಗ್ರೀನ್‌ ಟ್ಯಾಗ್‌ ಹಾಕಿರುತ್ತೇವೆ. ಅಂತಹ ಉತ್ತರ ಪತ್ರಿಕೆಯನ್ನು ಯಾವ ರೀತಿಯಲ್ಲಿ ಮೌಲ್ಯ ಮಾಪನ ಮಾಡಬೇಕು ಎಂಬುದರ ತರಬೇತಿಯನ್ನು ಶಿಕ್ಷಕರಿಗೆ ನೀಡಿರುತ್ತೇವೆ. ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.

ಕೃಪಾಂಕದ ಬಗ್ಗೆ ಸಿಂಧು ಎಂಬ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ಕೃಪಾಂಕ ನೀಡಬೇಕೇ ಅಥವಾ ಬೇಡವೇ ಎಂಬುದನ್ನು ಮಂಡಳಿ ನಿರ್ಧರಿಸುತ್ತದೆ. ಆದರೆ, ಕೃಪಾಂಕಕ್ಕಾಗಿಯೇ ಕಾಯುವುದು ಸರಿಯಲ್ಲ ಎಂದು ಸಲಹೆ ನೀಡಿದರು. ಪಠ್ಯ ಮತ್ತು ಅಂಕಗಳಿಗೆ ಸಾಕಷ್ಟು ವ್ಯತ್ಯಾಸ ಇರುತ್ತದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಮಾರಕವಾಗುವುದಿಲ್ಲವೇ ಎಂದು ಕುಷ್ಠಗಿಯ ರಾಜೇಶ್‌ ಪ್ರಶ್ನೆಗೆ ಉತ್ತರಿಸಿ, 1ರಿಂದ 9ನೇ ತರಗತಿಗೆ ಪರೀಕ್ಷೆ ನಡೆಯುತ್ತಿದೆ.

Advertisement

ವಿದ್ಯಾರ್ಥಿಗೆ ಪರೀಕ್ಷೆಯ ನೀಲನಕ್ಷೆ ಇಲ್ಲ. ಪ್ರಶ್ನೆಪತ್ರಿಕೆ ತಯಾರಿಸಲು ಮತ್ತು ಪರೀಕ್ಷೆ ನಡೆಸಲು ಶಿಕ್ಷಕರಿಗೆ ನೀಲನಕ್ಷೆ ನೀಡುತ್ತೇವೆ. ಎಲ್ಲ ಪಠ್ಯವೂ ಬೋಧನೆ ಮಾಡಬೇಕು ಮತ್ತು ಅದರಂತೆ ಪ್ರಶ್ನೆಗೆ ಪರೀಕ್ಷೆಯಲ್ಲಿ ಉತ್ತರ ಬರೆಯಬೇಕಾಗುತ್ತದೆ ಎಂದರು. ಇದಕ್ಕೆ ಸಚಿವ ಸುರೇಶ್‌ ಕುಮಾರ್‌ ಪ್ರತಿಕ್ರಿಯಿಸಿ, ಪೂರ್ವಸಿದ್ಧತಾ ಪರೀಕ್ಷೆಗೆ ರಾಜ್ಯ ಮಟ್ಟದಿಂದಲೇ ಪ್ರಶ್ನೆ ಪತ್ರಿಕೆ ನೀಡುತ್ತೇವೆ. ಹೀಗಾಗಿ ವಾರ್ಷಿಕ ಪರೀಕ್ಷೆಯ ಸ್ಪಷ್ಟ ಚಿತ್ರಣ ಸಿಗಲಿದೆ. ಈ ಬಗ್ಗೆ ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ ಎಂದರು.

ಮದ್ದೂರಿನ ಶಾಲೆಯೊಂದರಲ್ಲಿ ಪರೀಕ್ಷೆ ವೇಳೆ ಸಾಮೂಹಿಕ ನಕಲು ಆಗುತ್ತಿರುವ ಬಗ್ಗೆ ದೂರು ನೀಡಿದರೂ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಮೋದ್‌ ಎಂಬುವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಾಮೂಹಿಕ ನಕಲು ತಡೆಗೆ ಎಲ್ಲ ರೀತಿಯ ಕ್ರಮ ತೆಗೆದುಕೊಂಡಿದ್ದೇವೆ. ಓದಿದ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಿದ್ದೇವೆ ಎಂದು ಹೇಳಿದರು.

ಪೂರ್ವ ಸಿದ್ಧತಾ ಪರೀಕ್ಷೆ ಒಂದೇ ನಡೆಯುತ್ತದೆ. ಆದರೆ ವಿದ್ಯಾರ್ಥಿಗಳು ಎಲ್ಲ ಪ್ರಶ್ನೆ ಎದುರಿಸಲು ಸಿದ್ಧರಾಗಿರಬೇಕೆಂದು ವಿ. ಸುಮಂಗಳಾ ಅವರು ಈ ಸಂಬಂಧ ಧಾರವಾಡದ ರವಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು.ಕೀ ಉತ್ತರ ಸರಿಯಿದ್ದರೂ ಅಂಕ ನೀಡುವುದಿಲ್ಲ ಎಂದು ಕಲಬುರಗಿಯ ಶಾಂತಾ ಕೇಳಿದ ಪ್ರಶ್ನೆಗೆ, ಕೀ ಉತ್ತರಕ್ಕೆ ಸಮೀಪವಿದ್ದ ಉತ್ತರ ನೀಡಿದರೂ ಅಂಕ ನೀಡಲಾಗುತ್ತದೆ. ಈ ಬಗ್ಗೆ ಸಂಶಯ ಬೇಡ ಎಂದರು.

ಸರ್ಕಾರಕ್ಕೆ ಪ್ರಸ್ತಾವನೆ: ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೂ ಸಿಇಟಿ, ನೀಟ್‌ ಕೋಚಿಂಗ್‌ ನೀಡುವಂತೆ ಹಿರಿಯೂರಿನ ಭಾಗ್ಯಶ್ರೀ ಕೇಳಿದ ಪ್ರಶ್ನೆಗೆ ಪಿಯು ಇಲಾಖೆ ನಿರ್ದೇಶಕಿ ಕನಗವಳ್ಳಿ ಪ್ರತಿಕ್ರಿಯಿಸಿ, ವಿದ್ಯಾರ್ಥಿಗಳಿಗೆ ಸಿಇಟಿ ಕೋಚಿಂಗ್‌ ನೀಡುವ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ. ಪರಿಶೀಲನಾ ಹಂತದಲ್ಲಿದೆ. ಆದರೆ, ಈ ಕುರಿತ ಪಠ್ಯಗಳನ್ನು ಯ್ಯೂ ಟ್ಯೂಬ್‌ನಲ್ಲಿ ಪ್ರಕಟಿಸಿದ್ದೇವೆ. ಅದನ್ನು ಅಧ್ಯಯನ ಮಾಡಬಹುದು ಎಂದರು. ಸಚಿವರು ಪ್ರತಿಕ್ರಿಯಿಸಿ, ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದರು.

ತಾಂತ್ರಿಕ ದೋಷ: ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಆಗಾಗ ತಾಂತ್ರಿಕ ದೋಷ ಎದುರಾಗುತ್ತಿತ್ತು. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕ, ಪೋಷಕರು ಕೇಳಿದ ಪ್ರಶ್ನೆಗಳು ಕೆಲವೊಮ್ಮೆ ಸಚಿವರು ಹಾಗೂ ಅಧಿಕಾರಿಗಳಿಗೆ ಕೇಳಿಸುತ್ತಿರಲಿಲ್ಲ. ಅಧಿಕಾರಿಗಳು, ಸಚಿವರು ಉತ್ತರ ನೀಡುವಾಗ ಅದು ಪ್ರಶ್ನೆ ಕೇಳಿದವರಿಗೆ ಸ್ಪಷ್ಟವಾಗಿ ತಲುಪುತ್ತಿರಲಿಲ್ಲ. ತಾಂತ್ರಿಕ ದೋಷದ ನಡುವೆಯೂ ಅನೇಕ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರವೂ ಸಿಕ್ಕಿತು.

ಶಿಕ್ಷಕರನ್ನು ನಿಯೋಜಿಸಿ: ದಿವ್ಯಾಂಗ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಅರ್ಥಮಾಡಿಕೊಳ್ಳಲು ಅನುಕೂಲವಾಗುವಂತೆ ಶಿಕ್ಷಕರನ್ನು ನೇಮಿಸಿ ಎಂದು ಬೆಳಗಾವಿ ಅಂಧಮಕ್ಕಳ ಶಾಲೆಯ ಶಿಕ್ಷಕ ಶಂಕರ್‌ ಗೌಡ ಪಾಟೀಲ್‌ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಇದೊಂದು ವಿಶೇಷ ಪ್ರಕರಣ, ಯಾವ ರೀತಿ ಬಗೆಹರಿಸಬಹುದು ಎಂದು ಯೋಚಿ ಸುವುದಾಗಿ ತಿಳಿಸಿದರು. ವಿ.ಸುಮಂಗಳಾ ಪ್ರತಿಕ್ರಿಯಿಸಿ, ವಿಶೇಷ ಶಿಕ್ಷಕರನ್ನು ನೀಡಲು ಸಾಧ್ಯವಿಲ್ಲ. ಶಿಕ್ಷಕರು ಪ್ರಶ್ನೆ ಹೇಳುತ್ತಿದ್ದಾರೋ ಅಥವಾ ಉತ್ತರ ಹೇಳಿಕೊಡುತ್ತಿದ್ದಾರೋ ಎಂಬುದು ಗೊತ್ತಾಗುವುದಿಲ್ಲ. ಹೀಗಾಗಿ 9 ಅಥವಾ 11ನೇ ತರಗತಿಯ ವಿಶೇಷ ಚೇತನ ವಿದ್ಯಾರ್ಥಿಗಳನ್ನು ಇದಕ್ಕಾಗಿ ನೇಮಿಸಲಿದ್ದೇವೆ ಎಂದರು.

ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರದಲ್ಲೂ ಸಿಸಿ ಕ್ಯಾಮೆರಾ ಅಳವಡಿಸುತ್ತೇವೆ. ಇದಕ್ಕಾಗಿ ಜಿಲ್ಲಾತಂಡಗಳು ಕಾರ್ಯನಿರ್ವಹಿಸುತ್ತಿವೆ. ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ.
-ಸುರೇಶ್‌ ಕುಮಾರ್‌, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ

ವಿದ್ಯಾರ್ಥಿಗಳ ತಾರ್ಕಿಕ ಚಿಂತನೆಯನ್ನು ಬರವಣಿಗೆ ರೂಪದಲ್ಲಿ ತರಲು ಮತ್ತು ಅವರ ಆಲೋಚನಾ ಸಾಮರ್ಥ್ಯ ಹಾಗೂ ಬರವಣಿಗೆ ಕೌಶಲ್ಯ ಹೆಚ್ಚಿಸಲು ಪ್ರಶ್ನೆ ಪತ್ರಿಕೆಯಲ್ಲಿ ಸ್ವಲ್ಪಮಟ್ಟಿನ ಬದಲಾವಣೆ ಮಾಡಿದ್ದೇವೆ.
-ವಿ.ಸುಮಂಗಳಾ, ನಿರ್ದೇಶಕಿ, ಎಸ್ಸೆಸ್ಸೆಲ್ಸಿ ಬೋರ್ಡ್‌

Advertisement

Udayavani is now on Telegram. Click here to join our channel and stay updated with the latest news.

Next