ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿರುವ ಜಿಲ್ಲೆಯೇ ಅನ್ರೋಹಾ. ಅದು ಒಂದು ಲೋಕಸಭಾ ಕ್ಷೇತ್ರವೂ ಆಗಿದೆ. ಸದ್ಯ ಅಲ್ಲಿಯ ಸಂಸದ ಬಿಜೆಪಿಯ ಕನ್ವರ್ ಸಿಂಗ್ ತನ್ವರ್ ದೇಶದ ಅತ್ಯಂತ ಸಿರಿವಂತ ಸಂಸದರಲ್ಲೊಬ್ಬರು. ಈ ಬಾರಿ ಅಲ್ಲಿಯ ಸ್ಪರ್ಧಾಳುವಿಗೆ ಕರ್ನಾಟಕದ ಟಚ್ ಕೂಡಾ ಇದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಲ್ಲಿ ಪ್ರಧಾನ ಪಾತ್ರವಹಿಸಿದ್ದ ಮತ್ತು ಜೆಡಿಎಸ್‌ನ ಪ್ರಧಾನ ಕಾರ್ಯದರ್ಶಿ ಆಗಿದ್ದ ಕುನ್ವರ್ ಡ್ಯಾನಿಷ್ ಅಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ನಿಟ್ಟಿನಲ್ಲಿ ಬಿಎಸ್‌ಪಿಗೆ ಸೇರ್ಪಡೆಯಾಗಿದ್ದಾರೆ. ಅಲಿ ಪ್ರಕಾರ ಉತ್ತರ ಪ್ರದೇಶ ತಮ್ಮ ಜನ್ಮಭೂಮಿಯಾಗಿತ್ತು. ಈಗ ಕರ್ಮಭೂಮಿ ಆಗಲಿದೆಯಂತೆ. ಕಾಂಗ್ರೆಸ್ ಪಕ್ಷವು ಈ ಕ್ಷೇತ್ರದಲ್ಲಿ ಹಿರಿಯ ನಾಯಕ ರಶೀದ್ ಅಳ್ವಿ ಸ್ಥಾನದಲ್ಲಿ ಸಚಿನ್ ಚೌಧರಿ ಅವರನ್ನು ಕಣಕ್ಕಿಳಿಸಿದೆ. ಏ.18ರಂದು ಅಲ್ಲಿ ಮತದಾನ ನಡೆಯಲಿದೆ.
ಜಾತಿ ಲೆಕ್ಕಾಚಾರ: ಲಕ್ನೋಗೆ ಹೋಲಿಕೆ ಮಾಡಿದರೆ ರಾಷ್ಟ್ರ ರಾಜಧಾನಿ ನವದೆಹಲಿಗೆ ಹತ್ತಿರವೇ ಇರುವ ಈ ಸ್ಥಳದಲ್ಲಿ ಮುಸ್ಲಿಂ ಸಮುದಾಯವರ ಸಂಖ್ಯೆ ಶೇ. 66 ಇದೆ. ಹಿಂದಿ ಮತ್ತು ಭೋಜ್‌ಪುರಿ ಭಾಷೆ ಬಹುವಾಗಿ ಬಳಕೆಯಾಗುತ್ತಿದೆ. 2011ರ ಜನಗಣತಿಯ ಪ್ರಕಾರ ಈ ಜಿಲ್ಲೆ ದೇಶದಲ್ಲಿ ಅತ್ಯಂತ ಹೆಚ್ಚು ಜನರು ಇರುವ ಜಿಲ್ಲೆಗಳ ಪೈಕಿ ಒಂದು. ಈ ಪ್ರದೇಶದ ಜನರ ಪೈಕಿ ಜಾಟರು ಕೂಡ ಕೊಂಚ ಪ್ರಮಾಣದಲ್ಲಿ ಇದ್ದಾರೆ. ಜತೆಗೆ ದಲಿತ ಸಮುದಾಯದವರೂ ಇದ್ದಾರೆ.
ಹೀಗಾಗಿ, ಯಾವುದೇ ಪಕ್ಷದ ಅಭ್ಯರ್ಥಿಗೆ ಜಯ ಸಾಧಿಸಲು ಗ್ರಾಮೀಣ ಪ್ರದೇಶದಲ್ಲಿರುವ ದಲಿತ ಮತ್ತು ಮುಸ್ಲಿಂ ಸಮುದಾಯದ ಮತಗಳೇ ಪ್ರಧಾನವಾಗುತ್ತವೆ. ಸೈನಿ ಸಮುದಾಯದವರೂ ಕ್ಷೇತ್ರದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಮುಸ್ಲಿಂ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಇರುವುದು ಬಿಎಸ್‌ಪಿ-ಎಸ್‌ಪಿ ಮೈತ್ರಿ ಅಭ್ಯರ್ಥಿ ಕುನ್ವರ್ ಡ್ಯಾನಿಷ್ ಅಲಿಗೆ ಧನಾತ್ಮಕವಾಗಿ ಪರಿಣಮಿಸಬಹುದು.
1952ರಲ್ಲಿ ರಚನೆಯಾಗಿರುವ ಈ ಲೋಕಸಭಾ ಕ್ಷೇತ್ರದಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿವೆ. ಇದುವರೆಗಿನ ಚುನಾವಣಾ ಇತಿಹಾಸ ಗಮನಿಸಿದರೆ ಕಾಂಗ್ರೆಸ್, ಸಿಪಿಐ, ಆರ್‌ಎಲ್‌ಡಿ, ಜನತಾ ದಳ, ಬಿಜೆಪಿಯ ಅಭ್ಯರ್ಥಿಗಳು ಗೆದ್ದಿದ್ದಾರೆ.
2014ರ ಚುನಾವಣೆ
ಕನ್ವರ್ ಸಿಂಗ್ ತನ್ವರ್ (ಬಿಜೆಪಿ) 5,28, 880
ಹುಮೇರಾ ಅಖ್ತರ್ (ಎಸ್‌ಪಿ) 3,70, 666