ಸುಬ್ರಹ್ಮಣ್ಯ: ಬಾಳುಗೋಡು ಮೀಸಲು ಅರಣ್ಯದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಕಾಡಾನೆಗೆ ಮೇಲೆ ರವಿವಾರ ಇನ್ನೊಂದು ಸಲಗ ದಾಳಿ ಮಾಡಿ ಗಾಯಗೊಳಿದ ಬೆನ್ನಲ್ಲೇ ಸೋಮವಾರ ಮತ್ತೂಂದು ಕಾಡಾನೆಯು ಗಾಯಾಳು ಆನೆಯ ಪಕ್ಕದಲ್ಲಿ ಕಾಣಿಸಿಕೊಂಡು ಭೀತಿ ಹುಟ್ಟಿಸಿದೆ.
ಗಾಯಾಳು ಸಲಗಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮೇ 10ರಂದು ನಾಗರಹೊಳೆ ವನ್ಯಜೀವಿ ವಿಭಾಗದ ವೈದ್ಯರ ಮೂಲಕ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಆನೆ ಚೇರಿಸಿಕೊಳ್ಳುವ ಹಂತದಲ್ಲಿತ್ತು. ಅದೇ ಹೊತ್ತಿಗೆ ಮತ್ತೂಂದು ಆನೆ ಬಂದು ದಂತದಿಂದ ತಿವಿದು ಗಾಯಗೊಳಿಸಿತ್ತು. ಇದರಿಂದ ರಕ್ತ ಸೋರಿಕೆಯಾಗಿ ಆನೆಯ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು.
ಆನೆ ಕಾಡಿನೊಳಕ್ಕೆ ತೆರಳದೆ ಚಿಕಿತ್ಸೆ ನೀಡಿದ ಸ್ಥಳದ ಪಕ್ಕದ ಕಾಡಿನಲ್ಲಿ ಜನವಸತಿ ಇರುವ ಪ್ರದೇಶದಲ್ಲಿ ಸುತ್ತಾಡುತ್ತಿದೆ. ಸೋಮವಾರ ಕಂಡುಬಂದಿರುವ ಆನೆ ಈ ಹಿಂದೆ ತಿವಿದು ಗಾಯಗೊಳಿಸಿದ್ದ ಸಲಗವಲ್ಲ ಎಂದು ಸ್ಥಳೀಯರು ಗುರುತಿಸಿದ್ದಾರೆ. ಸೋಮವಾರ ಕೂಡ ಸ್ಥಳೀಯರು ಗಾಯಾಳು ಆನೆಗೆ ಆಹಾರ ಪೂರೈಸಿದ್ದಾರೆ. ಅದು ಆಹಾರ ಸೇವಿಸುತ್ತಿದೆಯಾದರೂ ಬಳಲಿ ನಿತ್ರಾಣದಲ್ಲಿರುವಂತೆ ತೋರುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕಾಡಿನಲ್ಲಿ ಆನೆಗಳು ಗುಂಪಾಗಿ ವಾಸಿಸುತ್ತವೆ. ಗುಂಪಿನಿಂದ ಒಂದು ಆನೆ ಬೇರ್ಪಟ್ಟಾಗ ಉಳಿದ ಆನೆಗಳು ಹುಡುಕಿಕೊಂಡು ಬರುತ್ತವೆ. ಇದು ಪ್ರಕೃತಿ ಸಹಜ ಪ್ರಕ್ರಿಯೆ. ಆದ್ದರಿಂದ ಸ್ಥಳಿಯರು ಇದನ್ನು ವಿಶೇಷವಾಗಿ ಪರಿಗಣಿಸುವ ಆವಶ್ಯಕತೆ ಇಲ್ಲ. ಜನತೆ ಕಾಡಿನತ್ತ ತೆರಳದೆ ಆನೆಯ ಪಾಡಿಗೆ ಇರುವುದಕ್ಕೆ ಅವಕಾಶ ನೀಡಬೇಕು
-ಡಾ| ಕರಿಕ್ಕಲನ್ ಪಿ.,
ಮಂಗಳೂರು ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ