ಚಿಕ್ಕೋಡಿ: ನಗರ-ಪಟ್ಟಣ ಪ್ರದೇಶಕ್ಕಿಂತ ಹಳ್ಳಿಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ಹೆಚ್ಚಾಗಿ ಕಂಡುಬರುತ್ತಿದೆ. ಕೊರೊನಾ ಚೈನ್ ಕಟ್ ಮಾಡಲು, ಜೀವ ಹಾನಿ ತಡೆಯಲು ಇನ್ನೊಂದು ವಾರ ಕಠಿಣ ಲಾಕ್‌ಡೌನ್ ಅವಶ್ಯಕತೆ ಇದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಇಲ್ಲಿನ ಲೋಕೋಪಯೋಗಿ ಇಲಾಖೆಯ ಸಂಸದರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ನಗರ ಹಾಗೂ ಹಳ್ಳಿಗಳಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಕೊರೊನಾ ಚೈನ್ ಕಟ್ ಮಾಡಲು, ಜೀವ ಹಾನಿ ತಡೆಯಲು ಇನ್ನೊಂದು ವಾರ ಕಠಿಣ ಲಾಕ್‌ಡೌನ್ ಅವಶ್ಯಕತೆ ಇದೆ. ಮುಖ್ಯಮಂತ್ರಿಗಳು ಹಿರಿಯ ಸಚಿವರೊಂದಿಗೆ ಚರ್ಚಿಸಿ ಲಾಕ್‌ಡೌನ್ ಕುರಿತು ನಿರ್ಧರಿಸಲಿದ್ದಾರೆ ಎಂದರು.
ಕೊರೊನಾ ಮೂರನೆ ಅಲೆ ಪ್ರಾರಂಭವಾಗುತ್ತದೆ ಎನ್ನುವ ತಜ್ಞರ ಅಭಿಪ್ರಾಯದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಮಕ್ಕಳ ಆರೈಕೆಗೆ ಮುಂದಾಗಿದೆ. ಮಕ್ಕಳಿಗೆ ಅನುಕೂಲವಾಗುವಂತೆ ಮಕ್ಕಳ ಕೋವಿಡ್ ಕೇಂದ್ರ ಸ್ಥಾಪನೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ಪಾಸಿಟಿವ್ ಬಂದಿರುವ ಮಕ್ಕಳಿಗಾಗಿ ರಾಜ್ಯದ ಮೂವತ್ತು ಜಿಲ್ಲೆಯಲ್ಲಿ ಮಕ್ಕಳ ಕೋವಿಡ್ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆಂದು ಮುಖ್ಯಮಂತ್ರಿ ಯಡಿಯೂರಪ್ಪ ರೊಂದಿಗೆ ಚರ್ಚಿಸಲಾಗಿದೆ ಎಂದರು.
ಕೊರೊನಾದಿಂದಾಗಿ ತಂದೆ ತಾಯಿ ಕಳೆದುಕೊಂಡ ಮಕ್ಕಳ ಜವಾಬ್ದಾರಿಗೆ ಸರ್ಕಾರ ಚಿಂತನೆ ನಡೆಸಿದೆ. ಮಕ್ಕಳ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಲು ಸರಕಾರ ಬದ್ಧವಿದೆ. ಬೇರೆ ರಾಜ್ಯದ ಮಾದರಿಯಲ್ಲಿ ಪೊಷಕರನ್ನು ಕಳೆದುಕೊಂಡ ಮಕ್ಕಳಿಗೆ ಪರಿಹಾರ ಕೊಡುವ ಜತೆಗೆ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಬೇಕೆಂಬ ಸಲಹೆಗಳು ಕೇಳಿ ಬಂದಿವೆ. ಮುಖ್ಯಮಂತ್ರಿಗಳು ಈ ಕುರಿತು ನನ್ನ ಜೊತೆಗೆ ಚರ್ಚೆ ನಡೆಸಿದ್ದಾರೆ. ಈ ವಾರ ಅಥವಾ ಮುಂದಿನ ವಾರದಲ್ಲಿ ಈ ಕುರಿತು ಮುಖ್ಯಮಂತ್ರಿಗಳು ಘೋಷಣೆ ಮಾಡಲಿದ್ದಾರೆ ಎಂದರು.
ಕೋವಿಡ್ ಎರಡನೆ ಅಲೆಯಲ್ಲಿ ತಂದೆ-ತಾಯಿ ಕಳೆದುಕೊಂಡ ಮಕ್ಕಳನ್ನು ದತ್ತು ಪಡೆಯುತ್ತೇವೆ ಎಂಬ ಫೇಕ್ ಸಮದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿದೆ. ಇಂತಹ ಸಂದೇಶ ಬಂದರೆ ತಕ್ಷಣಾ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ 1098 ನಂಬರ್‌ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಅನಾಥ ಮಕ್ಕಳ ಕುರಿತು ವ್ಯಾಟ್ಸ್ ಆ್ಯಪ್‌ಗೆ ಬರುವ ಸಂದೇಶಗಳನ್ನು ಬೇರೆಯವರಿಗೆ ಕಳಿಸಬಾರದು. ಅನಾಥ ಮಕ್ಕಳ ಪೋಷಣೆಗೆ ಸರಕಾರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ ಎಂದರು. ಸಂಸದ ಅಣ್ಣಾಸಾಹೇಬ ಜೊಲ್ಲೆ, ಬಿಜೆಪಿ ಜಿಲ್ಲಾಧ್ಯಕ್ಷ ರಾಜೇಶ ನೇರ್ಲಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷ ಶಾಂಭವಿ ಅಶ್ವತ್ಥಪೂರ, ಶಕುಂತಲಾ ಡೋಣವಾಡೆ, ಸಂಜಯ ಅರಗೆ ಮುಂತಾದವರು ಇದ್ದರು.