Advertisement
ಮಂಗಳೂರಿನಲ್ಲಿ ಸಂಜೆ ವೇಳೆಗೆ ನಿರಂತರ ಮಳೆ ಸುರಿಯಿತು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಉತ್ಸವದ ಸಂದರ್ಭ ಮಳೆಯಿಂದಾಗಿ ಭಕ್ತರಿಗೆ ಸ್ವಲ್ಪ ತೊಂದರೆಯಾಯಿತು. ಬೀದಿ ಮಡೆಸ್ನಾನ ನಡೆಸುವ ಭಕ್ತರಿಗೂ ಸಮಸ್ಯೆಯಾಯಿತು.
ಕಾಸರಗೋಡು: ರವಿವಾರ ಅಪರಾಹ್ನ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಅನಿರೀಕ್ಷಿತವಾಗಿ ಭಾರೀ ಗುಡುಗು-ಸಿಡಿಲು ಸಹಿತ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು.
Related Articles
Advertisement
ಕೆಸರು ರಸ್ತೆ: ಸಂಚಾರ ಸ್ಥಗಿತಉಳ್ಳಾಲ: ಮುಡಿಪುವಿನಿಂದ ಇರಾ ಸಂಪರ್ಕಿಸುವ ಮೂಳೂರು ಕೈಗಾರಿಕಾ ವಲಯ ಪ್ರದೇಶಕ್ಕೆ ಸಂಪರ್ಕಿಸುವ ಕಾಮಗಾರಿ ಪ್ರಗತಿ ಯಲ್ಲಿರುವ ರಸ್ತೆಯಲ್ಲಿ ಕೆಸರುಮಣ್ಣು ತುಂಬಿದ ಕಾರಣ ಬಸ್ ಸೇರಿದಂತೆ ಎಲ್ಲ ವಾಹನಗಳ ಸಂಚಾರ ಸ್ಥಗಿತಗೊಳಿಸಿದ್ದು, ಪ್ರಯಾಣಿಕರು ಪರದಾಡುವಂತಾಯಿತು. ಮುಡಿಪು ಇರಾ ಮೂಲಕ ಪಣೋಲಿಬೈಲ್ ಮೆಲ್ಕಾರ್ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು ಮಂದಗತಿಯ ಕಾಮಗಾರಿಯಿಂದಾಗಿ ಈ ಸಮಸ್ಯೆ ಎದುರಾಗಿದೆ ಎಂದು ಸ್ಥಳೀಯರು ಕೆಐಡಿಬಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿ ಪ್ರತಿಭಟನೆ ನಡೆಸಿದರು. ತೋಟದ ಬೆಳೆಗಳಿಗೆ ಹಾನಿ
ಕಾಸರಗೋಡು, ಕಾಂಞಂಗಾಡ್, ಬೇಕಲ, ಪಳ್ಳಿಕೆರೆ, ಬದಿಯಡ್ಕ, ನೀರ್ಚಾಲು, ಮುಳ್ಳೇರಿಯ, ಅಡೂರು, ಕುಂಬಳೆ, ಉಪ್ಪಳ ಮೊದಲಾದೆಡೆ ಭಾರೀ ಮಳೆಯಾಗಿದೆ. ಅಕಾಲಿಕ ಮಳೆಯಿಂದ ಹಲವರ ಅಂಗಳದಲ್ಲಿ ಒಣಗಲು ಹಾಕಿದ್ದ ಮೊದಲ ಕೊಯ್ಲಿನ ಅಪಾರ ಪ್ರಮಾಣದ ಅಡಿಕೆ ಫಸಲು ಒದ್ದೆಯಾಗಿದೆ. ಇದು ಕೃಷಿಕರಿಗೆ ಭಾರೀ ನಷ್ಟಕ್ಕೆ ಕಾರಣವಾಗಲಿದೆ ಎಂದು ಅಂದಾಜಿಸಿದ್ದಾರೆ. ಹವಾಮಾನ ಇಲಾಖೆ ಮಂಗಳವಾರದ ವೇಳೆಗೆ ಮಳೆಯ ಸಾಧ್ಯತೆಯ ಬಗ್ಗೆ ಮುನ್ಸೂಚನೆ ನೀಡಿತ್ತು. ಕೇರಳ ರಾಜ್ಯ ಶಾಲಾ ಕಲೋತ್ಸವ ನಡೆಯುವ ಕಾಂಞಂಗಾಡ್ ಪ್ರದೇಶದಲ್ಲಿ ಶಾಲಾ ಕಲೋತ್ಸವದ ಸ್ಪರ್ಧೆ ಮುಗಿದ ಬಳಿಕ ಮಳೆ ಸುರಿಯಲಾರಂಭಿಸಿತು. ಕಾಟುಕುಕ್ಕೆ ಶ್ರೀ ಸುಬ್ರಾಯ ದೇಗುಲದಲ್ಲಿ ಷಷ್ಠಿ ಮಹೋತ್ಸವ ನಡೆಯುತ್ತಿದ್ದು ಭಾರೀ ಜನಸಂದಣಿ ಇತ್ತು. ಅಪರಾಹ್ನ ಆರಂಭವಾದ ಮಳೆಯಿಂದಾಗಿ ಜನರಿಗೆ ಜನರು ಮನೆಗೆ ತೆರಳಲು ತೊಂದರೆಯಾಯಿತು. ಕೊಡಗಿನಲ್ಲಿ ಉತ್ತಮ ಮಳೆ
ಮಡಿಕೇರಿ: ವಾಯುಭಾರ ಕುಸಿತದ ಪರಿಣಾಮ ಕೊಡಗು ಜಿಲ್ಲೆಯ ಮೇಲೂ ಆಗಿದ್ದು, ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ರವಿವಾರ ಅಪರಾಹ್ನದಿಂದ ಮಳೆಯಾಗುತ್ತಿದೆ. ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದ್ದರೆ, ದಕ್ಷಿಣ ಕೊಡಗಿನ ವೀರಾಜಪೇಟೆ, ಗೋಣಿಕೊಪ್ಪ ಮತ್ತಿತರ ಪ್ರದೇಶಗಳಲ್ಲಿ ಮಧ್ಯಾಹ್ನ ತುಂತುರು ಮಳೆಯಾಗತೊಡಗಿತ್ತು. ಸಂಜೆ ವೇಳೆಗೆ ತೀವ್ರತೆ ಪಡೆದುಕೊಂಡಿತು. ಕೆಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗಿದೆ. ಸುಂಟಿಕೊಪ್ಪದಲ್ಲಿ ರವಿವಾರ ವಾರದ ಸಂತೆಗಾಗಿ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿಕರು, ಸಂತೆಯ ವ್ಯಾಪಾರಿಗಳು ಸಂಜೆ ಸುರಿದ ಭಾರೀ ಮಳೆಯಲ್ಲಿ ಪರದಾಡುವಂತಾಯಿತು. ಕಾಫಿ ಫಸಲಿಗೆ ಮಾರಕ
ಜಿಲ್ಲೆಯ ಕಾಫಿ ತೋಟಗಳಲ್ಲಿ ಕೊಯ್ಲು ನಡೆಯುತ್ತಿದ್ದು ಬೆಳೆಗಾರರು ಕೊಯ್ದು ಕಾಫಿಯನ್ನು ಒಣಗಿಸಲು ಪರದಾಡುವಂತಾಗಿದೆ. ಬಿಸಿಲಿನ ಅಭಾವದಿಂದ ಒಣಗಿಸುವುದು ಹೇಗೆಂಬ ಬೆಳೆಗಾರರ ಚಿಂತೆಯನ್ನು ಇಂದು ಸುರಿದ ಮಳೆ ಮತ್ತಷ್ಟು ಉಲ್ಬಣಿಸುವಂತೆ ಮಾಡಿದೆ.
ಭತ್ತದ ತೆನೆ ಬಿಡುವ ಕಾಲದಲ್ಲಿ ಸುರಿದ ಮಳೆಯಿಂದ ಭತ್ತ ಜಳ್ಳಾಗುವ ಭೀತಿಯೂ ಎದುರಾಗಿದೆ. ಪ್ರಸಕ್ತ ಸಾಲಿನ ಮಹಾಮಳೆಯಿಂದಾಗಿ ಈಗಾಗಲೇ ಕಾಫಿ, ಕರಿಮೆಣಸು ಸೇರಿದಂತೆ ವಾಣಿಜ್ಯ ಬೆಳೆಗಳು ಕೈಕೊಟ್ಟಿದ್ದು, ಅದೃಷ್ಟವಶಾತ್ ಉಳಿದಿದ್ದ ಅಲ್ಪಸ್ವಲ್ಪ ಬೆಳೆಯೂ ಅಕಾಲಿಕ ಮಳೆಯಿಂದಾಗಿ ಕೈತಪ್ಪುವುದರೊಂದಿಗೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬ ಭೀತಿ ಎದುರಾಗಿದೆ. ಅರಬೀ ಸಮುದ್ರದಲ್ಲಿ
ಉಂಟಾಗಿರುವ ವಾಯುಭಾರ ಕುಸಿತ ಬಲಗೊಳ್ಳುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಮಳೆ ಯಾಗುತ್ತಿದೆ. ಮುಂದಿನ ಎರಡು ದಿನಗಳ ಕಾಲ ಹಗುರದಿಂದ ಕೂಡಿದ ಮಳೆ ಮುಂದುವರಿಯುವ ಸಾಧ್ಯತೆ ಇದೆ.
– ಸುನಿಲ್ ಗವಾಸ್ಕರ್,
ಕರ್ನಾಟಕ ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರದ ವಿಜ್ಞಾನಿ