ಬೆಂಗಳೂರು: ಕರ್ನಾಟಕ ಸೇರಿ ದಕ್ಷಿಣ ಭಾರತದ ಯುವಕರನ್ನು ಐಸಿಸ್‌ಗೆ ನೇಮಿಸಿ ಸಿರಿಯಾಗೆ ಕಳುಹಿಸಿ ಉಗ್ರ ಸಂಘಟನೆಯನ್ನು ವಿಸ್ತರಿಸುತ್ತಿದ್ದ ಬೆಂಗಳೂರಿನ ಮತ್ತೊಬ್ಬ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.
ನಗರದ ಜುಹಾಬ್ ಹಮೀದ್ ಶಕೀಲ್ ಮನ್ನಾ ಅಲಿಯಾಸ್ ಜುಹೀಬ್ ಮನ್ನಾ (32) ಬಂಧಿತ. ಆರೋಪಿ ನಗರದಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿದ್ದು, ಆರೋಪಿ ಈ ಹಿಂದೆ ಬಂಧನಕ್ಕೊಳಗಾದ ಇರ್ಫಾನ್ ನಾಸೀರ್, ಮೊಹಮ್ಮದ್ ಶಹೀಬ್, ಮೊಹಮ್ಮದ್ ತೌಕೀರ್ ಜತೆ ಸೇರಿ ಐಸಿಸ್ ಸಂಘಟನೆ ಸದಸ್ಯರ ಜತೆ ಸಂಪರ್ಕ ಹೊಂದಿದ್ದ.
ಅಲ್ಲದೆ, ಮೊಹಮ್ಮದ್ ತೌಕೀರ್ ಸೂಚನೆ ಮೇರೆಗೆ ಉಗ್ರ ಸಂಘಟನೆಗೆ ಯುವಕರ ನೇಮಕ, ಹಣ ಸಂಗ್ರಹ ಹಾಗೂ ಇತರೆ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ. ಜತೆಗೆ ಮುನ್ನಾ, ತನಗೆ ಪರಿಚಯವಿರುವ ಯುವಕರ ಗುಂಪೊಂದನ್ನು ರಚಿಸಿಕೊಂಡು ದಕ್ಷಿಣ ಭಾರತದ ಮುಸ್ಲಿಂ ಯುವಕರಿಗೆ ಪ್ರಚೋದನೆ ನೀಡಿ ಐಸಿಸ್ ಸಂಘಟನೆಗೆ ನೇಮಕ ಮಾಡುತ್ತಿದ್ದ. ನಂತರ ಅವರನ್ನು ಸಂಘಟನೆಗೆ ಸೇರಿಕೊಳ್ಳುವಂತೆ ಸಿರಿಯಾಗೆ ಕಳುಹಿಸುತ್ತಿದ್ದ. ಅಲ್ಲದೆ, ಸಿರಿಯಾದಲ್ಲಿ ಮುಸ್ಲಿಂರ ಮೇಲಿನ ದೌರ್ಜನ್ಯದ ವಿಡಿಯೋಗಳನ್ನು ಯುವಕರಿಗೆ ತೋರಿಸಿ ಪ್ರಚೋದನೆ ನೀಡಿ ಸಂಘಟನೆಗೆ ಸೇರುವಂತೆ ಪ್ರೇರೆಪಿಸುತ್ತಿದ್ದ. ಈತ ಸುಮಾರು 10ಕ್ಕೂ ಅಧಿಕ ಮಂದಿ ಯುವಕನ್ನು ಸಿರಿಯಾಗೆ ಕಳುಹಿಸಿದ್ದಾನೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ತ್ರಿಪುರ ಹಿಂಸಾಚಾರ: ಎಫ್ಐಆರ್ ತೆಗೆಯಲು ಸುಪ್ರೀಂ ಸೂಚನೆ
2020ರ ಆ.17ರಂದು ಬೆಂಗಳೂರು ಮೂಲದ ವೈದ್ಯ ಡಾ.ಅಬ್ದರ್ ರೆಹಮಾನ್ ಐಸಿಸ್ ಜತೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ಎನ್‌ಐಗೆ ಸಿಕ್ಕಿ ಬಿದ್ದಿದ್ದ. ಈತನ ತಂಡದಲ್ಲಿ ಅಹಮ್ಮದ್ ಅಬ್ದುಲ್ ಖಾದರ್ ಮತ್ತು ಇರ್ಫಾನ್ ನಾಸೀರ್‌ನನ್ನು ಹತ್ತು ತಿಂಗಳ ಹಿಂದೆ ಬಂಧಿಸಲಾಗಿತ್ತು. 2021ರ ಏಪ್ರಿಲ್ 1ರಂದು ಈ ಇಬ್ಬರು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಕಳೆದ ತಿಂಗಳಷ್ಟೇ ಮೊಹಮ್ಮದ್ ತೌಕೀರ್‌ನನ್ನು ಬಂಧಿಸಲಾಗಿತ್ತು. ಈತನ ಮಾಹಿತಿ ಮೇರೆಗೆ ಮುನ್ನಾನನ್ನು ಬಂಧಿಸಲಾಗಿದೆ.