Advertisement

ಮತ್ತೊಂದು ಸುತ್ತಿನ ರೆಸಾರ್ಟ್‌ ರಾಜಕಾರಣ

06:25 AM Aug 23, 2017 | Team Udayavani |

ಚೆನ್ನೈ: ಎಐಎಡಿಎಂಕೆಯ ಎಡಪ್ಪಾಡಿ ಪಳನಿಸ್ವಾಮಿ, ಒ. ಪನ್ನೀರ್‌ ಸೆಲ್ವಂ ಬಣ ಒಂದಾಗಿ ಎಲ್ಲವೂ ಸುಖಾಂತ್ಯವಾಯಿತು ಎಂದುಕೊಂಡಿರುವಾಗಲೇ, ಈಗ ತಮಿಳುನಾಡು ಸರಕಾರದಲ್ಲಿ ಮತ್ತೆ ಬಿರುಗಾಳಿ ಎದ್ದಿದೆ. ಎಐಎಡಿಎಂಕೆಯ 3ನೇ ಬಣ, ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್‌ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ, ಸದ್ಯ ಜೈಲಿನಲ್ಲಿರುವ ಶಶಿಕಲಾ ನಿಷ್ಠ ಶಾಸಕರು ಸರಕಾರದ ವಿರುದ್ಧ ಬಂಡಾಯ ಎದ್ದಿದ್ದಾರೆ. ಸುಮಾರು 19 ಶಾಸಕರು ದಿನಕರನ್‌ ಅವರನ್ನು ಬೆಂಬಲಿಸಿದ್ದಾರೆ ಎನ್ನಲಾಗಿದ್ದು, ಪಳನಿಸ್ವಾಮಿ ಸರಕಾರಕ್ಕೆ ತಮ್ಮ ಬೆಂಬಲವಿಲ್ಲ ಎಂದು ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್‌ ರಾವ್‌ ಅವರನ್ನು ಮಂಗಳವಾರ ಭೇಟಿ ಮಾಡಿ ತಿಳಿಸಿದ್ದಾರೆ. ಅಷ್ಟೇ ಅಲ್ಲ, ದಿನಕರನ್‌ ಬೆಂಬಲಿಸುವ ಎಲ್ಲ ಶಾಸಕರು ಈಗ ಪುದು ಚೇರಿಯ ರೆಸಾರ್ಟ್‌ಗೆ ಸ್ಥಳಾಂತರಗೊಂಡಿದ್ದಾರೆ.

Advertisement

ದಿನಕರನ್‌ ಬಣದಲ್ಲಿ ಚಟುವಟಿಕೆ ನಡೆಯುತ್ತಿರುವಂತೆಯೇ, ಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದು, ಸರಕಾರದ ಬಳಿ ವಿಶ್ವಾಸಮತ ಸಾಬೀತು ಪಡಿಸಲು ಕೇಳುವಂತೆ ಆಗ್ರಹಿಸಿದ್ದಾರೆ. ಆ ಬಳಿಕವೇ ದಿನಕರನ್‌ ಬೆಂಬಲಿಗ ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿ ಪಳನಿಸ್ವಾಮಿ ಸರಕಾರಕ್ಕೆ ತಮ್ಮ ಬೆಂಬಲ ಇಲ್ಲ ಎಂದು ತಿಳಿಸಿದ್ದಾರೆ.

ದಿನಕರನ್‌ ಬೆಂಬಲಿಗ ಶಾಸಕರು ರಾಜ್ಯಪಾಲರ ಭೇಟಿ ಮಾಡಿರುವುದನ್ನು ರಾಜಭವನ ಮೂಲಗಳು ಖಚಿತಪಡಿಸಿವೆ. ಆದರೆ ಮಾತುಕತೆ ವಿವರಗಳನ್ನು ತಿಳಿಸಿಲ್ಲ. ‘ಹೊಸ ಸಿಎಂ ಒಬ್ಬರನ್ನು ತರಲು ನಾವು ಇತರ ಶಾಸಕರ ಬೆಂಬಲದೊಂದಿಗೆ ಯತ್ನಿಸುತ್ತಿದ್ದೇವೆ’ ಎಂದು ದಿನಕರನ್‌ ಬಣದ ಆಂಡಿಪಟ್ಟಿಯ ಶಾಸಕ ತಂಗಾ ತಮಿಳ್‌ ಸೆಲ್ವನ್‌ ಹೇಳಿದ್ದಾರೆ. ಪಳನಿಸ್ವಾಮಿ, ಪನ್ನೀರ್‌ಸೆಲ್ವಂ ಬಣ ಒಂದಾಗಿರುವುದು ದಿನಕರನ್‌ ಬಣಕ್ಕೆ ಪಥ್ಯವಾಗಿಲ್ಲ. ಈ ಮೊದಲೇ ಬಣಗಳು ಸೇರುವ ವಿರುದ್ಧ ದಿನಕರನ್‌ ಪಳನಿಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದ್ದು ಸಿಎಂ ಸ್ಥಾನಕ್ಕೆ ಕುತ್ತಾಗುವುದಾಗಿ ಹೇಳಿದ್ದರು.

ಬಲಾಬಲ ಎಷ್ಟಿದೆ..?: ಲೆಕ್ಕಾಚಾರಗಳ ಪ್ರಕಾರ, ದಿನಕರನ್‌ ಬೆಂಬಲಿಗ ಶಾಸಕರ ಸಂಖ್ಯೆ ಹೆಚ್ಚಾಗಿದ್ದೇ ಆದಲ್ಲಿ ಪಳನಿಸ್ವಾಮಿ ಸಿಎಂ ಸ್ಥಾನಕ್ಕೆ ಕುತ್ತಾಗಬಹುದು.

ಸರಕಾರದ ಮೇಲೆ ತೂಗುಗತ್ತಿ
234 ಸದಸ್ಯರ ತಮಿಳುನಾಡು ವಿಧಾನಸಭೆಯಲ್ಲಿ ಎಐಎಡಿಎಂಕೆ ಸ್ಪೀಕರ್‌ ಅವರನ್ನು ಹೊರತುಪಡಿಸಿ, 134 ಶಾಸಕರನ್ನು ಹೊಂದಿದೆ. ದಿ| ಜೆ. ಜಯಲಲಿತಾ ಅವರ ಆರ್‌ಕೆ ನಗರದ ಸ್ಥಾನ ಇನ್ನೂ ಖಾಲಿಯಾಗಿದೆ. ಇನ್ನು ಡಿಎಂಕೆ 89 ಸ್ಥಾನವನ್ನು ಹೊಂದಿದ್ದು ಕಾಂಗ್ರೆಸ್‌ 8 ಮತ್ತು ಐಯುಎಮ್‌ಎಲ್‌ 1 ಸ್ಥಾನ ಹೊಂದಿದೆ. ಬಹುಮತಕ್ಕೆ 117 ಶಾಸಕರ ಬೆಂಬಲ ಬೇಕಿದೆ. ಒಂದು ವೇಳೆ ದಿನಕರನ್‌ ಬಣ 19 ಶಾಸಕರನ್ನು ಹೊಂದಿದ್ದರೂ, ಪಳನಿ ಸ್ವಾಮಿ ಬೆಂಬಲಿಗರಲ್ಲಿ 115 ಮಂದಿ ಶಾಸಕರು ಮಾತ್ರವೇ ಇರುತ್ತಾರೆ. ಇದರಿಂದ ಸರಕಾರದ ಮೇಲೆ ಈಗ ತೂಗುಗತ್ತಿ ತೂಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next