ಬೆಂಗಳೂರು: ಯುನೈಟೆಡ್ ಬ್ರಿವರೀಸ್ ಹೋಲ್ಡಿಂಗ್ ಲಿಮಿಟೆಡ್ (ಯುಬಿಎಚ್‌ಎಲ್) ಕಂಪನಿಗೆ ಸಂಬಂಧಿಸಿದ ಕಾನೂನು ಹೋರಾಟದಲ್ಲಿವವ ಉದ್ಯಮಿ
ವಿಜಯ್ ಮಲ್ಯಗೆ ಮತ್ತೆ ಹಿನ್ನಡೆಯಾಗಿದೆ.
ಕಂಪನಿ ಮುಚ್ಚುವಂತೆ 2017ರಲ್ಲಿ ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ನ್ಯಾ.ಆಲೋಕ್ ಆರಾಧೆ ನೇತ್ವದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ.
ಬ್ಯಾಂಕುಗಳು ಮತ್ತು ಇತರೆ ಸಾಲಗಾರರಿಗೆ ಸಾಲ ಮರುಪಾವತಿ ಮಾಡುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಕಿಂಗ್ ಫಿಷರ್ ಏರ್‌ಲೈನ್ಸ್ ಕಂಪನಿ ಪಡೆದಿದ್ದ ಸಾಲಕ್ಕೆ ಖಾತ್ರಿ ನೀಡಿದ್ದ ಯುಬಿಎಚ್‌ಎಲ್ ಕಂಪನಿ ಮುಚ್ಚುವಂತೆ ಏಕಸದಸ್ಯ ನ್ಯಾಯಪೀಠ ನೀಡಿರುವ ಆದೇಶ ಹಾಗೂ ಅಧಿಕೃತ ಲಿಕ್ವಿಡೇಟರ್ ನೇಮಕ ಮಾಡಿರುವ ಆದೇಶ ಸರಿ ಇದೆ. ಅದರಲ್ಲಿ ಮಧ್ಯಪ್ರವೇಶ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಮರುಪಾವತಿ ಮಾಡಬೇಕಾದ ಸಾಲದ ಮೊತ್ತಕ್ಕಿಂತ ಕಂಪನಿಯ ಆಸ್ತಿ ಮೌಲ್ಯ ಹೆಚ್ಚಿದೆ ಎಂಬ ಕಂಪನಿಯ ವಾದವನ್ನು ಒಪ್ಪಲಾಗದು. ಇನ್ನು ಕಂಪನಿ ಸಾಲವನ್ನು ಮರುಪಾವತಿಸುವಲ್ಲಿ ವಿಫಲವಾಗಿರುವುದರಿಂದ ಕಂಪನಿಯನ್ನು ಮುಚ್ಚಲು ಆದೇಶಿಸಲಾಗಿದ್ದು, ಮತ್ತೆ ಆ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅವಶ್ಯಕತೆ ಇಲ್ಲ ಎಂದು ನ್ಯಾಯಾಲಯ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ.
ಯುಬಿಎಚ್‌ಎಲ್ 2020ರ ಜ.17ರ ವೇಳೆಗೆ ಆಸ್ತಿಯ ಮೌಲ್ಯ 8667.86 ಕೋಟಿ ರೂ. ಮತ್ತು ಇತರೆ ಸಂಸ್ಥೆಗಳ ಆಸ್ತಿ 3051ಕೋಟಿ. ರೂ. ಕಂಪನಿಯ ಬಹುತೇಕ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಜಫ್ತಿ ಮಾಡಿದೆ ಅಥವಾ ಡಿಆರ್‌ಟಿ ವಶದಲ್ಲಿದೆ. ಅದರಿಂದಾಗಿ ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲೂ ಕೂಡ ಸಾಧ್ಯವಾಗುತ್ತಿಲ್ಲ ಎಂದು ಕಂಪನಿ ನ್ಯಾಯಪೀಠಕ್ಕೆ ತಿಳಿಸಿತ್ತು.
ಆದರೆ, ಈ ವಾದವನ್ನು ಒಪ್ಪಲು ನಿರಾಕರಿಸಿರುವ ನ್ಯಾಯಪೀಠ, ಆಸ್ತಿಯ ಮಾರುಕಟ್ಟೆ ಮೌಲ್ಯವನ್ನು ಖಚಿತವಾಗಿ ತೋರಿಸುವ ಯಾವುದೇ ಪ್ರಮಾಣಪತ್ರ ಅಥವಾ ದಾಖಲೆಗಳನ್ನು ಸಲ್ಲಿಸಿಲ್ಲ. ಎಂದು ಹೇಳಿದೆ. ಆಸ್ತಿಗಳ ಜಫ್ತಿಗೆ ಸಂಬಂಸಿದಂತೆ ನ್ಯಾಯಪೀಠ, ಸುಪ್ರೀಂಕೋರ್ಟ್‌ನ ಆದೇಶದಂತೆ ಹೈಕೋರ್ಟ್ ಕಂಪನಿ ಕಾಯ್ದೆಯ ಸೆಕ್ಷನ್ 483 ರಡಿಯಲ್ಲಿ ತನ್ನ ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸಿದೆ. ಅದರಿಂದ ಪಿಎಂಎಲ್‌ಎ ಕಾಯ್ದೆ 2002 ಮತ್ತು ರಿಕವರಿ ಅಬಕಾರಿ ಕ್ರಮ ಕೈಗೊಳ್ಳುವುದನ್ನು ನಿರ್ಬಂಧಿಸಲಾಗದು ಎಂದು ಆದೇಶಿಸಿದೆ.