ರಾಮನಗರ: ಹಣ ದುರುಪಯೋಗ ಹಿನ್ನೆಲೆ ಬಿಡದಿ ಇನ್ಸ್‌ಪೆಕ್ಟರ್ ವೊಬ್ಬರ ಮೇಲೆ ಎಫ್ಐಆರ್ ಪ್ರಕರಣ ದಾಖಲಾಗಿದೆ.
ಬಿಡದಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಂಕರ್ ನಾಯಕ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದ್ದು, ಇವರು ರೈಸ್ ಪುಲ್ಲಿಂಗ್, ಇಸ್ಪೀಟ್ ದಂಧೆ ಮಾಡುತ್ತಿದ್ದರು ಎಂದು ಮಾಗಡಿ ಮಾಜಿ ಶಾಸಕ ಎ.ಮಂಜು ಆರೋಪಿಸಿದ್ದಾರೆ.
ರಾಮನಗರದಲ್ಲಿ ಮಾಜಿ ಶಾಸಕ ಎ.ಮಂಜು ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿ, ಎಫ್ ಐಆರ್ ದಾಖಲು ಆಗಿದ್ರೂ ಅಧಿಕಾರಿ ಇನ್ನೂ ಕರ್ತವ್ಯದಲ್ಲೇ ಇದ್ದಾನೆ. ಒಬ್ಬ ಅಧಿಕಾರಿ ವಿರುದ್ಧ ಎಫ್ಐಆರ್ ಆದ್ರೂ ಸಸ್ಪೆಂಡ್ ಮಾಡಿಲ್ಲ ಎಂದು ಹೇಳಿದರು.
ಈ ಅಧಿಕಾರಿ ಸಾಮಾನ್ಯ ವ್ಯಕ್ತಿತ್ವ ಇರುವ ಅಧಿಕಾರಿ ಅಲ್ಲ. ಇವರು ಎಲ್ಲೆಲ್ಲಿ ಕೆಲಸ ನಿರ್ವಹಿಸಿದ್ದಾರೆ ಎಲ್ಲಾ ಕಡೆ ಭ್ರಷ್ಟಾಚಾರ ಆರೋಪ ಇದೆ. ಈ ಹಿಂದೆ ಕುದೂರಿನಲ್ಲಿ ಕೆಲಸ ಮಾಡುವಾಗ ಮೇಲಾಧಿಕಾರಿ ತನಿಖೆ ನಡೆಸಿದ್ದಾರೆ. ಬಿಡದಿಗೆ ಬಂದು ಎರಡು ತಿಂಗಳು ಆಗಿದೆ. ಆಗಲೇ ಆತನ ಆಟ ಶುರು ಮಾಡಿದ್ದಾನೆ ಎಂದು ಆರೋಪಿಸಿದರು.
ಕುದೂರಿನಲ್ಲಿ ಲೋಕನಾಥ್ ಸಿಂಗ್ ಜೊತೆ ಸೇರಿಕೊಂಡಿದ್ದಾನೆ, ರೈಸ್ ಪುಲ್ಲಿಂಗ್ ದಂಧೆ ನಡೆಸಿದ್ದಾನೆ. ಈತನದ್ದೇ ಆದ ಒಂದು ತಂಡ ಕಟ್ಟಿಕೊಂಡಿದ್ದಾನೆ. ಗೃಹ ಮಂತ್ರಿಗಳಿಗಳು ಗೊತ್ತು ಎಂದು ದರ್ಪ ತೋರ್ತಿದ್ದಾನೆ ಎಂದರು.
ಮುಂದುವೆರದು ಮಾತನಾಡಿ, 80 ಲಕ್ಷ ಹಣ ಕೊಟ್ಟು ಬಿಡದಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ನಾಗರಭಾವಿ, ರಾಜರಾಜೇಶ್ವರಿ ನಗರದಲ್ಲಿ ಜಮೀನು ಮಾಡಿದ್ದಾನೆ. 15 ಕೋಟಿ ವೆಚ್ಚದಲ್ಲಿ ಬೃಹತ್ ಬಂಗಲೆ ಕಟ್ಟಿಸುತ್ತಿದ್ದಾನೆ. ಈ ಕೂಡಲೇ ಆತನನ್ನು ಸಸ್ಪೆಂಡ್ ಮಾಡಬೇಕು. ಡಿಜಿ, ಐಜಿ ಅವರಿಗೆ ಈಗಲೇ ಒತ್ತಾಯ ಮಾಡ್ತಿದ್ದೀನಿ. ಕ್ರಮ ಕೈಗೊಳ್ಳದಿದ್ದರೆ ನಮ್ಮ ಪಕ್ಷದಿಂದ ಉಗ್ರ ಹೋರಾಟ ಮಾಡುತ್ತೇವೆ, ಲೋಕಾಯುಕ್ತಕ್ಕೆ ದೂರು ಕೊಡುತ್ತೇನೆ ಎಂದು ಆಗ್ರಹಿಸಿದರು.