Advertisement

ಮಂಗನ ಕಾಯಿಲೆಗೆ ಮತ್ತೋರ್ವ ಬಲಿ

01:05 AM Jan 04, 2019 | |

ಸಾಗರ: ಮಂಗನ ಕಾಯಿಲೆಗೆ ಮತ್ತೋರ್ವ ವ್ಯಕ್ತಿ ಬಲಿಯಾಗಿದ್ದು, ತಾಲೂಕಿನ ಅರಳಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಈ ಕಾಯಿಲೆ ಗಂಭೀರ ಸ್ವರೂಪ ತಾಳುತ್ತಿದೆ. ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮರಬಿಡಿ ಗ್ರಾಮದ ಲೋಕರಾಜ್‌ ಜೈನ್‌ (28) ಬುಧವಾರ ರಾತ್ರಿ ಮೃತಪಟ್ಟಿದ್ದು, ಕಳೆದ ವಾರದಲ್ಲಿ ಒಟ್ಟೂ ನಾಲ್ಕು ಮಂದಿ ಈ ಕಾಯಲೆಗೆ ಮೃತರಾಗಿದ್ದಾರೆ.

Advertisement

ವಾರದ ಹಿಂದೆ ಜ್ವರ ಕಾಣಿಸಿಕೊಂಡಾಗ ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ನಂತರ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಜ್ವರ ನಿಯಂತ್ರಣಕ್ಕೆ ಬಾರದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಲೋಕರಾಜ್‌ ಬುಧವಾರ ಅಸುನೀಗಿದರು.

ಅರಳಗೋಡು ಗ್ರಾಪಂ ವ್ಯಾಪ್ತಿ ಮಂಗನ ಕಾಯಿಲೆಗೆ ಮಂಡವಳ್ಳಿಯ ಪಾರ್ಶ್ವನಾಥ ಜೈನ್‌, ವಾಟೆಮಕ್ಕಿ ಕೃಷ್ಣಪ್ಪ, ಕಂಚಿಕೈ ಮಂಜುನಾಥ್‌ ಮತ್ತು ಮರಬಿಡಿ ಗ್ರಾಮದ ಲೋಕರಾಜ್‌ ಬಲಿಯಾಗಿದ್ದಾರೆ. ಇಲ್ಲಿಯ ಕಾಡುಗಳಲ್ಲಿ ಮೃತ ಮಂಗಗಳು ಪತ್ತೆಯಾಗುತ್ತಲೇ ಇದ್ದು ಇನ್ನೂ ಹಲವು ಮಂದಿಗೆ ಸೋಂಕು ತಗುಲಿರುವ ಶಂಕೆ ಇದೆ.  ಕಾಲೇಜು ವಿದ್ಯಾರ್ಥಿನಿ ಜೀಗಳದ ಶ್ವೇತಾ ಜೈನ್‌ ಗೆ ಕೂಡ ವೈರಸ್‌ ತಗುಲಿರುವ ಶಂಕೆಯಿದ್ದು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅಲ್ಲದೆ ಇದೇ ಸೋಂಕಿನಿಂದ ಮೃತಪಟ್ಟ ಮಂಜುನಾಥ್‌ ಅವರ ತಾಯಿ ವೀರಮ್ಮ ಅವರ ದೇಹ ಸ್ಥಿತಿ ಕೂಡ ಗಂಭೀರವಾಗಿದ್ದು, ಮೆಗ್ಗಾನ್‌ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಮೊಗ್ಗದಲ್ಲಿ ಒಟ್ಟು ಆರು ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ನಾಲ್ವರು ಗುಣಮುಖರಾಗುತ್ತಿದ್ದಾರೆ ಎಂದು ಕೆಎಫ್‌ಡಿ ಚಿಕಿತ್ಸಾ ವಿಭಾಗದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next