ಬೆಂಗಳೂರು: ಸಚಿವರ ಹೆಸರಿನಲ್ಲಿ ನಕಲಿ ನೇಮಕಾತಿ ಅಧಿಸೂಚನೆ ಪ್ರಕರಣ ಸಂಬಂಧ ಸಚಿವ ಪ್ರಭು ಚೌಹಾಣ್ ಅವರ ಕನ್ನಡ ಶಿಕ್ಷಕ ಜ್ಞಾನದೇವ್ ಜಾಧವ್ ಎಂಬುವರನ್ನು ಸಂಜಯನಗರ ಪೊಲೀಸರು ಬಂಧಿಸಿರುವುದು ಈಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ಪಶುಸಂಗೋಪನೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಸಚಿವ ಚೌಹಾಣ್ ಹೆಸರಿನಲ್ಲಿ ಈತ ನಕಲಿ ಅಧಿಸೂಚನೆ ಹೊರಡಿಸಿ ವಂಚನೆ ಮಾಡಿದ್ದ ಎಂಬ ಆರೋಪ ವ್ಯಕ್ತವಾಗಿದೆ. 2019ರಿಂದ ಈತನನ್ನು ಕನ್ನಡ ಶಿಕ್ಷಕರಾಗಿ ಪ್ರಭು ಚೌಹಾಣ್ ನೇಮಿಸಿಕೊಂಡಿದ್ದರು.
ಸಚಿವರು ನನಗೆ ಆಪ್ತರೆಂದು ಹೇಳಿ ಹಲವು ಅಭ್ಯರ್ಥಿಗಳಿಗೆ ವಂಚನೆ ಮಾಡಿದ್ದು, ಇಲಾಖೆಯ ಎಫ್ ಡಿಎ, ಎಸ್ ಡಿಎ ಹುದ್ದೆಗಳಿಗೆ ನಕಲಿ ಆದೇಶ ಪ್ರತಿ ಸೃಷ್ಟಿ ಮಾಡಲಾಗಿದೆ. ಹುದ್ದೆಗೆ ಅರ್ಜಿ ಸಲ್ಲಿಸಿದ 63 ಜನರನ್ನು ಆರೋಪಿ ಆಯ್ಕೆ ಮಾಡಿದ್ದ. 2 ರಿಂದ 4 ಲಕ್ಷ ರೂ.ಯಂತೆ 25 ಲಕ್ಷ ಹಣ ಪಡೆದು ವಂಚಿಸಿದ್ದ ಎಂಬ ಆರೋಪ ವ್ಯಕ್ತವಾಗಿದೆ.
ಇದನ್ನೂ ಓದಿ:ಬಾಯ್ತೆರದ ಭೂಮಿ… ಚಿಲಿಯಲ್ಲಿ ಭಾರೀ ಗಾತ್ರದ ನಿಗೂಢ ಕಂದಕ ಸೃಷ್ಟಿ: ವಿಡಿಯೋ ನೋಡಿ
ಸರ್ಕಾರಿ ನೇಮಕಾತಿ ಪ್ರಕ್ರಿಯೆ ಮಾದರಿಯಲ್ಲೇ ನಕಲಿ ನೇಮಕಾತಿ ಮಾಡಿದ್ದು, ಜುಲೈ 30ರೊಳಗೆ ಆಕ್ಷೇಪಗಳಿದ್ದರೆ ಅರ್ಜಿ ಸಲ್ಲಿಸುವಂತೆ ಇಲಾಖೆ ಹೆಸರಿನಲ್ಲಿ ನಕಲಿ ಅಧಿಸೂಚನೆ ಹೊರಡಿಸಿದ್ದ. ಈ ಪ್ರಕರಣ ಈಗ ಬಿಜೆಪಿ ಸರಕಾರಕ್ಕೆ ಮತ್ತೊಂದು ಮುಜುಗರ ತಂದೊಡ್ಡಿದೆ.