ಮಂಗಳೂರು: ಕರಾವಳಿ ಭಾಗದಿಂದ ಮೈಸೂರಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮೈಸೂರು- ಮಂಗಳೂರು -ಕಾರವಾರ ಮಧ್ಯೆ ನೇರ ರೈಲು ಸೇವೆ ಕೆಲವೇ ದಿನಗಳಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಇದು ಸದ್ಯ ವಾರದಲ್ಲಿ ಒಂದು ದಿನ ಮಾತ್ರ ಸಂಚರಿಸಲಿದ್ದು, ಮುಂದೆ ನಾಲ್ಕು ದಿನ ಓಡುವ ಸಾಧ್ಯತೆಯಿದೆ.
ಈ ಬಗ್ಗೆ ನೈಋತ್ಯ ರೈಲ್ವೇ ತಾತ್ಕಾಲಿಕ ವೇಳಾಪಟ್ಟಿ ಸಿದ್ಧಪಡಿಸಿ, ದಕ್ಷಿಣ ರೈಲ್ವೇ ಮತ್ತು ಕೊಂಕಣ ರೈಲ್ವೇಗೆ ಅನುಮತಿ ಗಾಗಿ ಪತ್ರ ಬರೆದಿದೆ. ಎರಡೂ ವಿಭಾಗಗಳಿಂದ ಅನುಮತಿ ದೊರೆತ ತತ್‌ಕ್ಷಣ ನೈಋತ್ಯ ರೈಲ್ವೇಯವರು ರೈಲ್ವೇ ಮಂಡಳಿಗೆ ಅನುಮೋದನೆಗೆ ಸಲ್ಲಿಸಲಿದ್ದಾರೆ. ಅಲ್ಲಿಂದ ಒಪ್ಪಿಗೆ ದೊರೆತ ಕೂಡಲೇ ರೈಲು ಓಡಾಟ ನಡೆಸಲಿದೆ.
ಪ್ರಸ್ತಾವಿತ ವೇಳಾಪಟ್ಟಿ ಯಂತೆ ಶನಿವಾರ ರಾತ್ರಿ 11.30ಕ್ಕೆ ಮೈಸೂರಿನಿಂದ ಹೊರಡುವ ರೈಲು 1.30ಕ್ಕೆ ಹಾಸನ, ರವಿವಾರ ಬೆಳಗ್ಗೆ 8.05ಕ್ಕೆ ಮಂಗಳೂರು ಜಂಕ್ಷನ್ ಮತ್ತು ಮಧ್ಯಾಹ್ನ 3.30ಕ್ಕೆ ಕಾರವಾರ ತಲುಪಲಿದೆ. ಬಳಿಕ ರವಿವಾರ ಸಂಜೆ 4.45ಕ್ಕೆ ಕಾರವಾರದಿಂದ ಹೊರಟು ರಾತ್ರಿ 11.45ಕ್ಕೆ ಮಂಗಳೂರು ಜಂಕ್ಷನ್, ಸೋಮವಾರ ಬೆಳಗ್ಗೆ 4.55ಕ್ಕೆ ಹಾಸನ ಮತ್ತು ಬೆಳಗ್ಗೆ 7.30ಕ್ಕೆ ಮೈಸೂರು ತಲುಪಲಿದೆ.
ನಾಲ್ಕು ದಿನ ಓಡಾಟ ಸದ್ಯಕ್ಕಿಲ್ಲ?
ಮೈಸೂರು-ಕಾರವಾರ ಮಧ್ಯೆ ವಾರದಲ್ಲಿ ನಾಲ್ಕು ದಿನ ಹೊಸ ರೈಲು ಓಡಾಟಕ್ಕೆ ಅವಕಾಶ ನೀಡುವಂತೆ ಸಂಸದ ಪ್ರತಾಪ್‌ಸಿಂಹ ಮನವಿ ಸಲ್ಲಿಸಿದ್ದರು. ಅದರಂತೆ ಮೈಸೂರು ರೈಲ್ವೇ ವಿಭಾಗವು ನೈಋತ್ಯ ರೈಲ್ವೇ ವಿಭಾಗದಿಂದ ಅನುಮತಿ ಕೇಳಿತ್ತು. ಆದರೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ರೈಲು ಯಾನ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಇದಕ್ಕೆ ಸದ್ಯ ಅವಕಾಶ ಅಸಾಧ್ಯ ಎಂದು ನೈಋತ್ಯ ರೈಲ್ವೇ ತಿಳಿಸಿದೆ.
ಸುಬ್ರಹ್ಮಣ್ಯ-ಸಕಲೇಶಪುರ ರೈಲು ಮಾರ್ಗವು ಹಲವು ಪರಿಸರ ಸೂಕ್ಷ್ಮ ವಿಷಯಗಳ ಕಾರಣ ನಿರ್ಬಂಧಗಳನ್ನು ಹೊಂದಿದೆ. ಸುಬ್ರಹ್ಮಣ್ಯದಿಂದ ಸಕಲೇಶಪುರಕ್ಕೆ ಘಾಟಿಯಲ್ಲಿ ಸಂಚರಿಸಲು ರೈಲಿಗೆ ಸುಮಾರು 2.30 ತಾಸು (ಗಂಟೆಗೆ 35 ಮೀ.) ಅಗತ್ಯವಿದೆ. ಸದ್ಯ ಮೂರು ರೈಲುಗಳು ಈ ಮಾರ್ಗವಾಗಿ ಸಂಚರಿಸುತ್ತಿದ್ದು, ಹೆಚ್ಚುವರಿ ಓಡಾಟಕ್ಕೆ ರೈಲ್ವೇ ಇಲಾಖೆ ಒಪ್ಪಿಗೆ ನೀಡುವುದಿಲ್ಲ.
– ದಿನೇಶ್ ಇರಾ