ಕಲಬುರಗಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಹಬ್ಬುತ್ತಲೇ ಇದ್ದು, ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ. ರವಿವಾರ ಮತ್ತೂಬ್ಬ ವೃದ್ಧ ಮಹಾಮಾರಿ ಸೋಂಕಿಗೆ ಬಲಿಯಾಗಿದ್ದು, ಮೃತರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.
ಇದೇ ವೇಳೆ ವಾರಿಯರ್ಸ್ ಗೂ ಕಂಟಕ ಶುರುವಾಗಿದ್ದು, ಭೀತಿ ಹೆಚ್ಚಿಸಿದೆ. ನಗರದ ಗಂಜ್ ಪ್ರದೇಶದ 65 ವರ್ಷದ ವೃದ್ಧ (ಪಿ-12,306) ಸೋಂಕಿನಿಂದ ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಜೂ.25ರಂದು ಜಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ವೃದ್ಧ ದಾಖಲಾಗಿದ್ದರು. ಜತೆಗೆ ಅಧಿ ಕ ರಕ್ತದೊತ್ತಡ, ಹೃದ್ರೋಗ ಹಾಗೂ ಪಾಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದ ಇವರು ಜೂ.26ರಂದು ಮೃತಪಟ್ಟಿದ್ದಾರೆ. ರವಿವಾರ ವೃದ್ಧನ ಗಂಟಲು ದ್ರಾವಣ ಮಾದರಿ ಪರೀಕ್ಷೆ ವರದಿ ಬಂದಿದ್ದು, ಸೋಂಕು ತಗುಲಿರುವುದು ದೃಢವಾಗಿದೆ.
ಇನ್ಸ್‌ಪೆಕ್ಟರ್, ಪೇದೆಗೂ ಸೋಂಕು: ಮಹಾಮಾರಿ ಹಾವಳಿಯಿಂದ ಜನತೆ ತತ್ತರಿಸಿರುವ ಬೆನ್ನಲ್ಲೇ ಕೋವಿಡ್ ವಾರಿಯರ್ಸ್‌ಗೂ ಕಂಟಕವಾಗಿ ಪರಿಣಮಿಸಿದೆ. ಗ್ರಾಮೀಣ ಠಾಣೆ ಇನ್ಸ್‌ಪೆಕ್ಟರ್, ಓರ್ವ ಪೇದೆ ಹಾಗೂ ಫರತಾಬಾದ್ ಠಾಣೆಯ ಪೇದೆಗೂ ಸೋಂಕು ಪತ್ತೆಯಾಗಿದೆ. ನಾಲ್ಕು ದಿನಗಳ ಹಿಂದೆ ಗುಲಬರ್ಗಾ ವಿವಿ ಠಾಣೆಯ ಪೇದೆಗೆ ಕೋವಿಡ್ ಕಾಣಿಸಿಕೊಂಡಿದೆ. ಆದ್ದರಿಂದ ನಗರ ಆಯುಕ್ತಾಲಯದ ಎಲ್ಲ ಸಿಬ್ಬಂದಿಗೂ ರ್‍ಯಾಂಡಮ್ ಆಗಿ ಕೋವಿಡ್ ತಪಾಸಣೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಇನ್ಸ್‌ಪೆಕ್ಟರ್ ಹಾಗೂ ಪೇದೆಗೂ ಸೋಂಕು ಪತ್ತೆಯಾಗಿದೆ.
ಇತ್ತ, ಆಳಂದ ತಾಲೂಕಿನ ಖಜೂರಿ ಗ್ರಾಮದ ಆಶಾ ಕಾರ್ಯಕರ್ತೆಗೂ ಸೋಂಕು ದೃಢವಾಗಿದೆ. ಹಲವು ದಿನಗಳಿಂದ ಕೊರೊನಾ ಬಗ್ಗೆ ಮಾಹಿತಿ ಸಂಗ್ರಹಿಸಲು ಗ್ರಾಮದಲ್ಲೆಲ್ಲ ಓಡಾಡಿದ್ದರು. ಇತ್ತೀಚೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಹೋದಾಗ ಸೋಂಕು ಪತ್ತೆಯಾಗಿದೆ. ಆದರೆ, ಆಶಾ ಕಾರ್ಯಕರ್ತೆಗೆ ಸೋಂಕು ಹೇಗೆ ತಗಲಿತು ತಿಳಿದು ಬಂದಿಲ್ಲ.
ರವಿವಾರ 34 ಜನರಿಗೆ ಕೊರೊನಾ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,398ಕ್ಕೆ ಏರಿಕೆಯಾಗಿದೆ. ಇದೇ ವೇಳೆ 50 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಗೊಂಡವರ ಸಂಖ್ಯೆ ಸಹ 1,009ಕ್ಕೆ ಏರಿಕೆಯಾಗಿದ್ದು, ನೆಮ್ಮದಿ ತರಿಸುವಂತೆ ಆಗಿದೆ.