Advertisement

ಕೊಲೆಯ ಜಾಡು ಹಿಡಿದು …

07:44 PM Jul 25, 2019 | mahesh |

ಕನ್ನಡ, ಹಿಂದಿ, ತೆಲುಗು, ಇಂಗ್ಲೀಷ್‌ ಹೀಗೆ ಹಲವು ಭಾಷೆಗಳಲ್ಲಿ “ಮರ್ಡರ್‌’ ಎನ್ನುವ ಹೆಸರಿನಲ್ಲಿ ಚಿತ್ರಗಳು ಬಂದಿದ್ದು ನಿಮಗೆ ನೆನಪಿರಬಹುದು. ಹೀಗೆ ಬಂದ ಎಲ್ಲಾ ಕ್ರೈಂ-ಥ್ರಿಲ್ಲರ್‌ ಕಥಾಹಂದರ ಚಿತ್ರಗಳು ಬಾಕ್ಸಾಫೀಸ್‌ನಲ್ಲೂ ಗೆಲುವಿನ ನಗೆ ಬೀರಿದ್ದವು. ಈಗ “ಮರ್ಡರ್‌-2′ ಸರಣಿ ಚಿತ್ರಗಳು ತೆರೆಗೆ ಬರುತ್ತಿವೆ. ಈಗಾಗಲೇ ಹಿಂದಿಯಲ್ಲಿ “ಮರ್ಡರ್‌-2′ ಹೆಸರಿನ ಚಿತ್ರ ತೆರೆಗೆ ಬಂದು ಯಶಸ್ವಿಯಾಗಿದೆ. ಈಗ ಕನ್ನಡದಲ್ಲಿ “ಮರ್ಡರ್‌-2′ ಹೆಸರಿನಲ್ಲಿ ಚಿತ್ರ ತೆರೆಗೆ ಬರುತ್ತಿದೆ.

Advertisement

ಅಂದಹಾಗೆ, ಹಿಂದಿಯಲ್ಲಿ ಬಂದ “ಮರ್ಡರ್‌-2′ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಚಿತ್ರದ ಟೈಟಲ್‌ ಮಾತ್ರ ಒಂದೇ ಅನ್ನುವುದನ್ನು ಬಿಟ್ಟರೆ, ಅದೇ ಬೇರೆ ಇದೇ ಬೇರೆ ಎನ್ನುತ್ತದೆ ಚಿತ್ರತಂಡ. ಈ ಹಿಂದೆ ಸುರೇಶ್‌ ಹೆಬ್ಳೀಕರ್‌, ಪ್ರಕಾಶ್‌ ರಾಜ್‌ ನಟಿಸಿದ್ದ “ಮರ್ಡರ್‌’ ಚಿತ್ರವನ್ನು ನಿರ್ದೇಶಿಸಿದ್ದ ಮಂಡ್ಯ ನಾಗರಾಜ್‌ “ಮರ್ಡರ್‌-2′ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ. ಇಲ್ಲಿಯವರೆಗೆ “ತಾಯಿಯ ಋಣ’, “ರಕ್ಷಕ’, “ಪೊಲೀಸ್‌ ಬೇಟೆ’, “ಒಲವಿನ ಗೆಳತಿ’, “ಈ ಜನ್ಮ ನಿನಗಾಗಿ’ ಹೀಗೆ ಸುಮಾರು ಹದಿಮೂರು ಚಿತ್ರಗಳನ್ನು ನಿರ್ದೇಶಿಸಿರುವ ಮಂಡ್ಯ ನಾಗರಾಜ್‌ “ಮರ್ಡರ್‌-2′ ಮೂಲಕ ಮತ್ತೂಂದು ಕ್ರೈಂ ಸ್ಟೋರಿಯನ್ನು ಪ್ರೇಕ್ಷಕರ ಮುಂದೆ ಹೇಳುತ್ತಿದ್ದಾರೆ.

ಸುಮಾರು ಒಂದೂವರೆ ವರ್ಷಗಳ ಹಿಂದೆ ಸೆಟ್ಟೇರಿದ್ದ ಈ ಚಿತ್ರ, ಸದ್ಯ ತನ್ನೆಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ ಈ ವಾರ ತೆರೆಗೆ ಬರುತ್ತಿದೆ. ಚಿತ್ರದ ಬಿಡುಗಡೆಗೂ ಮುನ್ನ ಮಾತಿಗೆ ಸಿಕ್ಕ ಚಿತ್ರತಂಡ “ಮರ್ಡರ್‌-2′ ಚಿತ್ರದ ಬಗ್ಗೆ ಒಂದಷ್ಟು ವಿಶೇಷತೆಗಳನ್ನು ಹಂಚಿಕೊಂಡಿತು.

ಚಿತ್ರದ ಬಗ್ಗೆ ಮಾತಿಗಿಳಿದ ನಿರ್ದೇಶಕ ಮಂಡ್ಯ ನಾಗರಾಜ್‌, “ಹೆಸರೇ ಹೇಳುವಂತೆ ಇದೊಂದು ಮರ್ಡರ್‌ ಸುತ್ತ ನಡೆಯುವ ಚಿತ್ರ. ಒಂದು ಪತ್ತೆಧಾರಿ ಕಥೆ ಈ ಚಿತ್ರದಲ್ಲಿದೆ. ಒಂದು ಕೊಲೆಯನ್ನ ಪೊಲೀಸ್‌ ಅಧಿಕಾರಿಯೊಬ್ಬ ಹೇಗೆ ಚಾಣಾಕ್ಷ ತನದಿಂದ ಭೇದಿಸುತ್ತಾನೆ ಅನ್ನೋದು ಚಿತ್ರದ ಒನ್‌ಲೈನ್‌ ಸ್ಟೋರಿ. ಇಡೀ ಚಿತ್ರ ಕ್ರೈಂ-ಸಸ್ಪೆನ್ಸ್‌ ಶೈಲಿಯಲ್ಲಿದೆ. ಚಿತ್ರದ ಪ್ರತಿ ಸನ್ನಿವೇಶಗಳನ್ನು, ತಿರುವುಗಳ ಮೂಲಕ ನೋಡುಗರಿಗೆ ರೋಚಕವಾಗಿ ಹೇಳಲಾಗಿದೆ’ ಎಂದು ವಿವರಣೆ ನೀಡಿದರು.

ಚಿತ್ರದಲ್ಲಿ ಇಬ್ಬರು ನಾಯಕರಿದ್ದು, ಈ ಹಿಂದೆ “ಕಾಲೇಜ್‌ ಕುಮಾರ್‌’ ಚಿತ್ರದಲ್ಲಿ ವಿಲನ್‌ ಆಗಿ ಕಾಣಿಸಿಕೊಂಡಿದ್ದ, ಆ ನಂತರ “ಭೂತಕಾಲ’ ಚಿತ್ರದಲ್ಲಿ ನಾಯಕನಾಗಿ ಪರಿಚಯವಾಗಿದ್ದ ಆನಂದ್‌ ಗಣೇಶ್‌ ಮತ್ತು ಅವರ ಸೋದರ ದೀಪಕ್‌ ಗಣೇಶ್‌ ಇಬ್ಬರು ಚಿತ್ರದಲ್ಲಿ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಆನಂದ್‌ ಹಳ್ಳಿಯ ಹುಡುಗನಾಗಿ ಕಾಣಿಸಿಕೊಂಡರೆ, ದೀಪಕ್‌ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

ಇಲ್ಲಿಯವರೆಗೆ ಕೆಲವು ತಮಿಳು ಚಿತ್ರಗಳು, ಜಾಹೀರಾತುಗಳಲ್ಲಿ ಅಭಿನಯಿಸಿದ್ದ ಶಾಲಿನಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಶಾಲಿನಿ, “ನನಗೆ ಕನ್ನಡದಲ್ಲಿ ಇದು ಮೊದಲನೇ ಚಿತ್ರ. ಇದರಲ್ಲಿ ಹಳ್ಳಿಯ ಶ್ರೀಮಂತ ಗೌಡರ ಮಗಳಾಗಿ, ತಂದೆಯ ವಿರೋಧ ಕಟ್ಟಿಕೊಂಡು ನಾಯಕನನ್ನು ಪ್ರೀತಿಸುವ ಹುಡುಗಿಯ ಪಾತ್ರ ಮಾಡಿದ್ದೇನೆ. ಪಾತ್ರ ಚೆನ್ನಾಗಿ ಬಂದಿದೆ’ ಎಂದು ವಿವರಣೆ ನೀಡಿದರು. ಉಳಿದಂತೆ “ಮರ್ಡರ್‌-2′ ಅಪೂರ್ವ, ಜಯರಾಮ್‌, ಕಿಲ್ಲರ್‌ ವೆಂಕಟೇಶ್‌, ನಿಂಗರಾಜ್‌ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ಎಂ.ಎನ್‌ ಮೂವೀಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಮರ್ಡರ್‌-2′ ಚಿತ್ರದ ಹಾಡುಗಳಿಗೆ ಕುಮಾರ್‌ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ರೇಣುಕಾರಾಧ್ಯ ಛಾಯಾಗ್ರಹಣ, ಬೇಬಿ ನಾಗರಾಜ್‌ ಸಂಕಲನ ಕಾರ್ಯವಿದೆ. ಮಂಡ್ಯ, ಮೈಸೂರು ಸುತ್ತಮುತ್ತ ಸುಮಾರು 35 ದಿನಗಳ ಕಾಲ “ಮರ್ಡರ್‌-2′ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಕಳೆದ ಕೆಲ ದಿನಗಳಿಂದ ಚಿತ್ರದ ಪ್ರಮೋಶನ್‌ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ, ಈ ವಾರ ಚಿತ್ರವನ್ನು ಸುಮಾರು 30ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆಗೆ ತರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next