Advertisement

ಮಂಗಳೂರು ಬೈಸಿಕಲ್‌ ಕ್ಲಬ್‌ನಿಂದ ಮತ್ತೊಂದು ಮೈಲಿಗಲ್ಲು 

10:23 AM May 23, 2018 | Team Udayavani |

ಮಹಾನಗರ: ನಗರದ ಬೈಸಿಕಲ್‌ ಕ್ಲಬ್‌ನ ಸದಸ್ಯರು ಸೈಕಲ್‌ ಯಾನದಲ್ಲಿ ಮತ್ತೊಂದು ಮೈಲಿಗಲ್ಲು ನೆಟ್ಟಿದ್ದು, ಈ ಬಾರಿ 12 ಜನ ಸದಸ್ಯರ ತಂಡ ಒಟ್ಟು ಸುಮಾರು 170 ಕಿ.ಮೀ. ಕ್ರಮಿಸಿ ಇಡೀ ರಾತ್ರಿ ಸೈಕಲ್‌ ಯಾನ ನಡೆಸಿದೆ. ಒಟ್ಟು 200 ಕಿ.ಮೀ. ಕ್ರಮಿಸುವ ಗುರಿ ತಂಡದ ಸದಸ್ಯರಿಗಿತ್ತಾದರೂ ಅತೀವ ಮಳೆಯಿಂದಾಗಿ ಯಾನವನ್ನು ಮೊಟಕುಗೊಳಿಸಬೇಕಾಗಿ ಬಂದರೂ, ಇದೇ ಮೊದಲ ಬಾರಿ ಇಡೀ ರಾತ್ರಿ ಸೈಕಲ್‌ ತುಳಿದು ಯಶಸ್ವಿಯಾಗಿ ಗುರಿ ತಲುಪಿದೆ.

Advertisement

ತಂಡದ ಸದಸ್ಯರಾದ ಶ್ರೀಕಾಂತ್‌ ರಾಜ್‌, ಹರಿಪ್ರಸಾದ್‌ ಬಿ., ಸುನಿಲ್‌ ಮೆಂಡಿಸ್‌, ಗಣೇಶ್‌ ನಾಯಕ್‌, ಚಿನ್ಮಯ ದೇಲಂಪಾಡಿ ಸೈಕಲ್‌ಯಾನದಲ್ಲಿ ಪರಿಣತರಾದರೆ ಆಕಾಶ್‌ ಅಗ್ನಿಹೋತ್ರಿ, ಗುರುರಾಜ್‌ ಪಾಟೀಲ್‌, ಸೂರಜ್‌ ಶರ್ಮ, ವಿಲ್ಫ್ರೆಡ್ ಇದೇ ಮೊದಲ ಬಾರಿಗೆ ಇಷ್ಟೊಂದು ದೂರದ ಯಾನದಲ್ಲಿ ಭಾಗವಹಿಸಿದ್ದರು. 

ಹತ್ತನೇ ತರಗತಿಯ 16ರ ತರುಣ ಶಾನ್‌ ಮೆಂಡೋನ್ಸಾ ಎಂಬ ಬಾಲಕ ಕೂಡ ಸೈಕಲ್‌ಯಾನದಲ್ಲಿ ಜತೆಯಾಗಿದ್ದು, ಈತ ತಂಡದ ಅತೀ ಕಿರಿಯ ಸದಸ್ಯ. ಮಧುರಾ ಜೈನ್‌ ಹಾಗೂ ಸುನೀತಾ ಮಿನೇಜಸ್‌ ಎಂಬ ಈರ್ವರು ಮಹಿಳೆಯರೂ ತಂಡದಲ್ಲಿದ್ದರು. ಮೇ 19ರ ರಾತ್ರಿ ಸುಮಾರು 9ಕ್ಕೆ ನಗರದ ಲೇಡಿಹಿಲ್‌ ಬಳಿಯಿಂದ ಪ್ರಾರಂಭಗೊಂಡ ಸೈಕಲ್‌ ಯಾನ 100 ಕಿ.ಮೀ. ದೂರದ ಕುಂದಾಪುರದ ತ್ರಾಸಿಯವರೆಗೆ ಪ್ರಯಾಣ ಬೆಳೆಸಿ, ಅಲ್ಲಿಂದ ಮರುದಿನ ಬೆಳಗ್ಗೆ ಮತ್ತೆ ನಗರಕ್ಕೆ ಆಗಮಿಸುವ ಗುರಿಯನ್ನು ಹೊಂದಿತ್ತು.

ತಂಡದಲ್ಲಿ ಇದೇ ಮೊದಲ ಬಾರಿಗೆ ದೂರದ ಸೈಕಲ್‌ಯಾನವನ್ನು ಮಾಡುವವರು ಇದ್ದ ಕಾರಣ ದಾರಿಯ ಮಧ್ಯೆ ಮೂಲ್ಕಿ, ಉಚ್ಚಿಲ, ಉಡುಪಿ, ಸಾಲಿಗ್ರಾಮ, ಕುಂದಾಪುರ ಹೀಗೆ ಕೆಲವೆಡೆ ತುಸು ವಿಶ್ರಮಿಸಿ ಸಾಗುವ ಯೋಜನೆಯನ್ನೂ ತಂಡ ಮಾಡಿಕೊಂಡಿತ್ತು

ಲೇಡಿಹಿಲ್‌ನಿಂದ ಸೈಕಲ್‌ ಯಾನ
ಪೂರ್ವ ನಿರ್ಧರಿಸಿದಂತೆ ಮೇ 19ರ ರಾತ್ರಿ 9ಕ್ಕೆ ಲೇಡಿಹಿಲ್‌ನಿಂದ ಹೊರಟ ಸೈಕಲ್‌ ಯಾನ ಯೋಜನೆಯಂತೆ ಸರಿಯಾಗಿಯೇ ಸಾಗಿತು. ನಡುನಡುವೆ ಸೆಲ್ಫಿಗೆ ಮುಖವೊಡ್ಡುತ್ತಾ, ಮೊದಲೇ ನಿರ್ಧರಿಸಿದ ಜಾಗದಲ್ಲಿ ತುಸು ವಿಶ್ರಮಿಸುತ್ತಾ ಸಾಗಿ, ಒಟ್ಟು 85 ಕಿ.ಮೀ. ಕ್ರಮಿಸಿ, ಕುಂದಾಪುರದ ಕೋಟೇಶ್ವರ ತಲುಪುತ್ತಲೇ ತಂಡದ ಸದಸ್ಯರಿಗೆ ಮಳೆರಾಯ ಇದಿರಾದ.

Advertisement

ಗುಡುಗು, ಮಿಂಚಿನಿಂದ ಕೂಡಿದ ಭಾರೀ ಮಳೆ ಸುರಿದ ಪರಿಣಾಮ ತಂಡದ ಸದಸ್ಯರು ಅನಿವಾರ್ಯವಾಗಿ ಸುಮಾರು ಒಂದೂವರೆ ಗಂಟೆಯವರೆಗೆ ಸೈಕಲ್‌ ಯಾನವನ್ನು ಮೊಟಕುಗೊಳಿಸಬೇಕಾಯಿತು. ಕೋಟೇಶ್ವರದಿಂದ ತ್ರಾಸಿಯವರೆಗೆ ರಸ್ತೆ ಕಾಮಗಾರಿಯೂ ನಡೆಯುತ್ತಿದ್ದ ಕಾರಣ ಹಾಗೂ ರಸ್ತೆಯಿಡೀ ನೀರು ನಿಂತ ಪರಿಣಾಮ ಮುಂದಿನ ಯಾನ ಸುಗಮವಲ್ಲ ಎಂದು ತಂಡದ ಸದಸ್ಯರಿಗೆ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ ಡಾ| ಪ್ರೀತಮ್‌ ಹಾಗೂ ಮಧುಕರ್‌ ಸಲಹೆ ನೀಡಿದ ಬಳಿಕ ಮುಂಜಾವಿನ ನಾಲ್ಕರ ಸುಮಾರಿಗೆ ತಂಡ ಕೋಟೇಶ್ವರದಿಂದ ಹಿಂದಿರುಗಿತು. ಬಳಿಕೆ ಉಡುಪಿ ಕೃಷ್ಣ ಮಠದ ಬಳಿಯ ಹೊಟೇಲ್‌ ಒಂದರಲ್ಲಿ ಬೆಳಗ್ಗಿನ ಉಪಾಹಾರ ಮುಗಿಸಿ ಬೆಳಗ್ಗೆ 11ರ ಸುಮಾರಿಗೆ ಮಂಗಳೂರು ತಲುಪಿದೆ. 

ಸ್ಮರಣೀಯ ಸೈಕಲ್‌ ಯಾನ
ಇದೊಂದು ಸ್ಮರಣೀಯ ಸೈಕಲ್‌ಯಾನವಾಗಿದ್ದು, ಈರ್ವರು ಮಹಿಳೆಯರೂ ಸೇರಿದಂತೆ 12 ಜನರ ತಂಡ ಇಡೀ ರಾತ್ರಿ ಸೈಕಲ್‌ ತುಳಿದು 170 ಕಿ.ಮೀ. ಕ್ರಮಿಸಿದ್ದು ಇದೇ ಮೊದಲು. ಮಳೆ ಬರದೇ ಇರುತ್ತಿದ್ದರೆ, ಖಂಡಿತವಾಗಿಯೂ ಮೊದಲೇ ನಿರ್ಧರಿಸಿದಂತೆ ಕುಂದಾಪುರದ ತ್ರಾಸಿಯವರೆಗೆ ಸಾಗಿ 200
ಕಿ.ಮೀ. ಪೂರ್ತಿಗೊಳಿಸುತ್ತಿದ್ದೆವು.
– ಶ್ರೀಕಾಂತ್‌ ರಾಜ್‌,
ತಂಡದ ಹಿರಿಯ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next