ಬೆಳಗಾವಿ: ನಗರದಲ್ಲಿ ಮಟ್ಕಾ, ಓಸಿ ಆಡಲು ಜನರನ್ನು ಪ್ರೇರೇಪಿಸುತ್ತಿದ್ದ ಬುಕ್ಕಿಯನ್ನು ಬೆಳಗಾವಿ ಜಿಲ್ಲೆಯಿಂದ ಗಡಿಪಾರು ಮಾಡುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾದಿ ಜೂಜುಕೋರರಿಗೆ ಬಿಸಿ ಮುಟ್ಟಿಸಿದ್ದಾರೆ.
ಇಲ್ಲಿಯ ಅನಗೋಳದ ಪರುಶರಾಮ ಬಾಬು ಮೇತ್ರಿ ಎಂಬಾತನನ್ನು ಒಂದು ವರ್ಷಗಳ ಕಾಲ 2023 ಸೆ. 18ರ ವರೆಗೆ ಗಡಿಪಾರು ಮಾಡಲಾಗಿದೆ. ಬೆಳಗಾವಿಯಿಂದ ಬಳ್ಳಾರಿ ಜಿಲ್ಲೆಗೆ ಗಡಿಪಾರು ಮಾಡಿ ಗಡಾದಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಮೊದಲ ತ್ರಿವಳಿ ತಲಾಖ್ ಕೇಸ್ ದಾಖಲು
ಪರುಶರಾಮ ಮೇತ್ರಿ ವಿರುದ್ಧ ಏಳು ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ ಪ್ರಕರಣಗಳು ನ್ಯಾಯಾಲಯದಲ್ಲಿ ಶಿಕ್ಷೆಯಾಗಿವೆ. ಆದರೂ ಸಾರ್ವಜನಿಕವಾಗಿ ಓಸಿ, ಮಟ್ಕಾ ಆಡಲು ಜನರನ್ನು ಪ್ರೇರೇಪಿಸುತ್ತಿದ್ದನು. ಈ ಬಗ್ಗೆ ಪೊಲೀಸರು ಈತನನ್ನು ಕರೆಯಿಸಿ ವಿಚಾರಣೆ ನಡೆಸಿ ಅನೇಕ ಸಲ ಎಚ್ಚರಿಕೆ ನೀಡಿದ್ದರೂ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದನು. ಇನ್ನೂ ಓಸಿ, ಮಟ್ಕಾ ದಂಧೆಯಲ್ಲಿ ತೊಡಗಿದ್ದನು.
ಹೀಗಾಗಿ ಡಿಸಿಪಿ ಗಡಾದಿ ಅವರು ಆರೋಪಿ ಪರುಶರಾಮನಿಗೆ ಗಡಿಪಾರು ಮಾಡುವ ಮೂಲಕ ಸಮಾಜಘಾತುಕರಿಗೆ ಎಚ್ಚರಿಕೆ ನೀಡಿದ್ದಾರೆ.
ಮೂರು ತಿಂಗಳ ಹಿಂದೆಯೂ ಇದೇ ರೀತಿಯಾಗಿ ಓಸಿ, ಮಟ್ಕಾ ಆಡುತ್ತ ಜನರನ್ನು ಪ್ರೇರೇಪಿಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬೆಳಗಾವಿ ಜಿಲ್ಲೆಯಿಂದ ಡಿಸಿಪಿ ಗಡಾದಿ ಗಡಿಪಾರು ಮಾಡಿದ್ದರು.
ಮಾರೀಹಾಳ ಪೊಲೀಸ್ ಠಾಣೆ ವ್ಯಾಪ್ತಿಯ ಮಹೇಶ ಯಲ್ಲಪ್ಪ ಯಲ್ಲಾರಿ, ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ವಿಲಾಶ ಶಂಕರ ಬಾಳೆಕುಂದ್ರಿ ಎಂಬವರನ್ನು ಗಡಿಪಾರು ಮಾಡಿದ್ದರು. ಈಗ ಮತ್ತೊಬ್ಬ ಆರೋಪಿಯನ್ನು ಗಡಿಪಾರು ಮಾಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.