ಕಲಬುರಗಿ: ವಕ್ಫ್ ಹಟಾವೋ – ಅನ್ನದಾತ ಬಚಾವೋ ಆಂದೋಲನ ಅಂಗವಾಗಿ ಮೂರು ದಿನಗಳ ನಗರದ ಜಗತ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಮಠಾಧೀಶರ ಹಾಗೂ ವಿವಿಧ ಸಂಘಟನೆಗಳ ಮುಖಂಡರ ಧರಣಿ ಸತ್ಯಾಗ್ರಹ ಶನಿವಾರವಷ್ಟೇ ಮುಕ್ತಾಯವಾಗಿದ್ದು, ಈಗ ವಕ್ಫ್ ಭೂಕಬಳಿಕೆ ವಿರೋಧಿ ಜನ ಜಾಗೃತಿ ಹೋರಾಟ ಸಮಿತಿ ನೇತೃತ್ವದಲ್ಲಿ ಮತ್ತೊಂದು ನಿಟ್ಟಿನ ಹೋರಾಟ ಕೈಗೆತ್ತಿಕೊಳ್ಳಲಾಗಿದೆ.
ನಾಡಿನ ವಿವಿಧ ಮಠಾಧೀಶರು, ವಿವಿಧ ನಾಯಕರು ಅದರಲ್ಲೂ ವಕ್ಫ್ ವಿರುದ್ಧ ಗಟ್ಟಿಯಾದ ಧ್ವನಿ ಎತ್ತಿರುವ ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಪ್ರತಾಪ ಸಿಂಹ ಸೇರಿದಂತೆ ಇತರರು ಪಾಲ್ಗೊಳ್ಳುವರು.
ಜಮೀರ ಹಟಾವೋ- ಜಮೀನು ಬಚಾವೋ, ವಕ್ಫ್ ರದ್ದುಪಡಿಸುವಂತೆ ಆಗ್ರಹಿಸಿ ಮಠಾಧೀಶರ, ರೈತರ ಹಾಗೂ ಗಣ್ಯರೊಂದಿಗೆ ಜಗತ್ ವೃತ್ತದಿಂದ ನವ್ಹೆಂಬರ್ 26 ರಂದು ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಮೂಲಕ ಪಾದಯಾತ್ರೆ ಹೊರಟು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದು ಸಮಿತಿ ಪರವಾಗಿ ಮುಖಂಡ ಶಿವಕಾಂತ ಮಹಾಜನ್ ತಿಳಿಸಿದ್ದಾರೆ.
ಮಠ ಮಂದಿರಗಳ ಹಾಗೂ ರೈತರ ಜಮೀನಿನಲ್ಲಿ ವಕ್ಫ್ ಎಂಬುದಾಗಿ ನಮೂದನೆಯಾಗುತ್ತಿರುವ ಬಗ್ಗೆ ಮಠಾಧೀಶರು ಹಾಗೂ ರೈತರು ಬೀದಿಗಿಳಿದು ಹೋರಾಟ ಮಾಡಲಾಗುತ್ತಿದ್ದರೂ ಸರ್ಕಾರ ದಾಖಲೆಗಳಲ್ಲಿ ವಕ್ಫ್ ಹೆಸರು ತೆಗೆದು ಹಾಕುತ್ತಿಲ್ಲ ಜತೆಗೇ ವಕ್ಫ್ ರದ್ದತಿ ಬಗ್ಗೆ ಒಂದೇ ಒಂದು ಶಬ್ದ ಚಕಾರ ಎತ್ತುತ್ತಿಲ್ಲ.ಹೀಗಾಗಿ ಆಂದೋಲನವೊಂದೇ ರೂಪಿಸುವ ನಿಟ್ಟಿನಲ್ಲಿ ಪ್ರಬಲ ಹೋರಾಟ ರೂಪಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನ.26 ರಂದು ನಡೆಯುವ ವಕ್ಫ್ ವಿರುದ್ಧದ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ಮೂಲಕ ಚಳವಳಿ ಮತ್ತಷ್ಟು ಬಲಪಡಿಸಬೇಕೆಂದಿದ್ದಾರೆ.