ಹಾಸನ: ಕೋವಿಡ್ ಸೋಂಕಿತರಿಗೆ ಹಾಸನದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್) ಆಸ್ಪತ್ರೆಯಲ್ಲಿ 400 ಹಾಸಿಗೆಗಳ ಸೌಲಭ್ಯ ಕಲ್ಪಿಸಿರುವ ಹಾಸನ ಜಿಲ್ಲಾಡಳಿತವು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಮತ್ತೂಂದು ಅತ್ಯಾಧುನಿಕ ಸೌಲಭ್ಯಗಳುಳ್ಳ ಆಸ್ಪತ್ರೆಯನ್ನು ಜಿಲ್ಲಾಡಳಿತ ಪ್ರಾರಂಭಿಸಿದೆ.
ನಗರದ ತಣ್ಣೀರುಹಳ್ಳದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್‌ಡಿಎಂ) ಆಯುರ್ವೇದ ಕಾಲೇಜಿನಲ್ಲಿ ಕಟ್ಟಡವೊಂದರಲ್ಲಿ ಸುಮಾರು 300 ಹಾಸಿಗೆಯುಳ್ಳ ಸೌಲಭ್ಯ ವನ್ನು ಕಲ್ಪಿಸಲಾಗಿದ್ದು, ಯಾವುದೇ ರೋಗಲಕ್ಷಣಗಳಿಲ್ಲದ ಕೊರೊನಾ ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ
ನೀಡುವ ಸಲುವಾಗಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಮಾಹಿತಿ ನೀಡಿದ್ದಾರೆ.
ಶ್ರೀ ಧರ್ಮಸ್ಥಳ ವೈದ್ಯಕೀಯ ಆಸ್ಪತ್ರೆಯಲ್ಲಿ ಹೊಸದಾಗಿ ಸ್ಥಾಪಿಸಿರುವ ಕೋವಿಡ್ ಕೇರ್ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿದ ನಂತರ ಮಾತನಾಡಿದ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು, ಧರ್ಮಸ್ಥಳ ಆಯುರ್ವೇದ ಕಾಲೇಜು ಸಂಸ್ಥೆ ತನ್ನ ವೈದ್ಯಕೀಯ ವಿದ್ಯಾರ್ಥಿ ಗಳ ಹಾಸ್ಟೆಲ್‌ನ್ನು ಈ ಸೌಲಭ್ಯಕ್ಕಾಗಿ ಜಿಲ್ಲಾಡಳಿತಕ್ಕೆ ಬಿಟ್ಟುಕೊಟ್ಟಿದೆ. ಈ ಹೆಚ್ಚುವರಿ 300 ಬೆಡ್‌ಗಳ ಆಸ್ಪತ್ರೆ ಜಿಲ್ಲೆಯ ಕೊರೊನಾ ಸೋಂಕಿತರ ಚಿಕಿತ್ಸೆಗೆ ಸಾಕಾಗಬಹುದು ಎಂದರು. ಈ ಆಸ್ಪತ್ರೆಗೆ ಅಗತ್ಯವಿರುವ ಸೌಲಭ್ಯ ಹಾಗೂ ತಜ್ಞವೈದ್ಯರ ಸೇವೆ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಸೋಂಕಿತರಿಗಾಗಿ ಪ್ರತ್ಯೇಕ ಕೊಠಡಿಗಳನ್ನು ಮಾಡಲಾಗಿದ್ದು, ಒಂದು ಕೊಠಡಿಯಲ್ಲಿ ಇಬ್ಬರಿಂದ ಮೂವರು ಚಿಕಿತ್ಸೆ ಪಡೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಶ್ರೀ ಧರ್ಮಸ್ಥಳ ಆಯುರ್ವೇದ ಕಾಲೇಜು ಆಸ್ಪತ್ರೆಯ ಸಿಬ್ಬಂದಿ ಚಿಕಿತ್ಸೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಜಿಪಂ ಸಿಇಒ ಬಿ.ಎ.ಪರಮೇಶ್, ಡಿಎಚ್‌ಒ ಡಾ. ಸತೀಶ್‌ಕುಮಾರ್, ತಾಲೂಕು ವೈದ್ಯಾಧಿಕಾರಿ ಡಾ. ವಿಜಯ್ ಕುಮಾರ್, ಶ್ರೀ ಧರ್ಮಸ್ಥಳ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಸನ್ನ ನರಸಿಂಹರಾವ್, ವೈದ್ಯಕೀಯ ಅಧೀಕ್ಷಕರಾದ ಡಾ.ಮುರಳೀಧರ್ ಪೂಜಾರ್, ನೋಡಲ್ ಆಫಿಸರ್ ಡಾ. ಶಿವಶಂಕರ್, ಸಿ.ಸಿ.ಸಿ ನೋಡಲ್ ಆಫಿಸರ್ ಡಾ. ಉಜ್ವಲ್ ಗುಪ್ತ, ಡಾ. ಆದರ್ಶ, ಡಾ. ರಮೇಶ್ ಮತ್ತಿತರರು ಹಾಜರಿದ್ದರು.