Advertisement

ಮತ್ತೂಬ್ಬ “ಕಮ್ಮನಹಳ್ಳಿ ಕೀಚಕ’ನ ಬಂಧನ

11:25 AM Jan 07, 2017 | |

ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ನಗರದ ಕಮ್ಮನಹಳ್ಳಿಯಲ್ಲಿ ನಡೆದಿದ್ದ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಮತ್ತೂಬ್ಬ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಚಿಕ್ಕಬಾಣಸವಾಡಿಯ ನಿವಾಸಿ ಜೇಮ್ಸ್‌ ಬಂಧಿತನಾಗಿದ್ದು, ಆನ್‌ಲೈನ್‌ ಮಾರ್ಕೆಟಿಂಗ್‌ ಸಂಸ್ಥೆಯಲ್ಲಿ ಆತ ಕೂಡ ಡೆಲಿವರಿ ಬಾಯ್‌ ಆಗಿದ್ದಾನೆ.

Advertisement

ಈ ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದ ಅವನನ್ನು ರಾಮಮೂರ್ತಿ ಹತ್ತಿರದ ಬಿ.ಚನ್ನಸಂದ್ರದಲ್ಲಿ ಗುರುವಾರ ರಾತ್ರಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೂಬ್ಬ ಆರೋಪಿ ಅಪ್ಪಿ ಪತ್ತೆಗೆ ಪೊಲೀಸರ ಕಾರ್ಯಾಚರಣೆ ಮುಂದುವರೆದಿದೆ. ಡಿ.31 ರಂದು ರಾತ್ರಿ ಹೊಸ ವರ್ಷಾಚರಣೆ ಮುಗಿಸಿ ಮನೆ ಮರಳುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ಲೈಂಗಿಕ ದೌರ್ಜನ್ಯ ನಡೆಸಿದ್ದರು. ಈ ಪ್ರಕರಣ ಸಂಬಂಧ ಈಗಾಗಲೇ ಜೇಮ್ಸ್‌ನ ನಾಲ್ವರು ಗೆಳೆಯರು ಪೊಲೀಸರಿಗೆ ಸೆರೆಯಾಗಿದ್ದರು.

ಸಂತ್ರಸ್ತೆಯ ಅಸಹಕಾರ: ಇನ್ನು ಈ ಪ್ರಕರಣದ ತನಿಖೆ ಸಂತ್ರಸ್ತೆಯಿಂದ ಅಸಹಕಾರ ಮುಂದುವರಿದಿದ್ದು, ಗುರುವಾರ ಹೇಳಿಕೆ ಪಡೆಯುವ ಪೊಲೀಸರ ಯತ್ನ ಮತ್ತೂಮ್ಮೆ ವಿಫ‌ಲವಾಗಿದೆ. ಈ ಘಟನೆ ಕುರಿತು ಹೇಳಿಕೆ ಪಡೆಯಲು ಶೋಷಿತ ಯುವತಿಯನ್ನು ಮಹಿಳಾ ಪಿಎಸ್‌ಐ ಸಂಪರ್ಕಿಸಿದ್ದರು. ಆ ವೇಳೆ ತಾವು ಯಾವುದೇ ಕಾರಣಕ್ಕೂ ಏನೂ ಹೇಳುವುದಿಲ್ಲ. ಘಟನೆಯಿಂದ ಸಾಮಾಜಿಕವಾಗಿ ತನ್ನ ಘನತೆಗೆ ಕುಂದುಂಟಾಗಿದೆ. ಅಲ್ಲದೆ ಜೀವ ಭೀತಿ ಸಹ ಎದುರಾಗಿದೆ ಎಂದು ಪೊಲೀಸರಿಗೆ ಸಂತ್ರಸ್ತೆ ಪ್ರತಿಕ್ರಿಯಿಸಿರುವುದಾಗಿ ತಿಳಿದು ಬಂದಿದೆ.

ಫ್ರಾನ್ಸಿಸ್‌ಗೆ ಪೊಲೀಸ್‌ ಭದ್ರತೆ: ಕುಮ್ಮನಹಳ್ಳಿ ಯುವತಿ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಕೃತ್ಯ ಬೆಳಕಿಗೆ ತಂದ ಸ್ಥಳೀಯ ನಿವಾಸಿ ಪ್ರಶಾಂತ್‌ ಫ್ರಾನ್ಸಿಸ್‌ ಅವರಿಗೆ ಈಗ ಜೀವ ಭೀತಿ ಎದುರಾಗಿದ್ದು, ತಮಗೆ ರಕ್ಷಣೆ ನೀಡುವಂತೆ  ಕೋರಿ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ಅವರಿಗೆ ಮನವಿ ಮಾಡಿದ್ದಾರೆ. ನನಗೆ ಬಂಧಿತ ಆರೋಪಿಗಳು ಪರಿಚಯವಿಲ್ಲ. ತಾನು ಪೊಲೀಸರಿಗೆ ಒದಗಿಸಿದ ಸಾಕ್ಷ್ಯ ಆಧರಿಸಿ ಆರೋಪಿಗಳ ಬಂಧನವಾಗಿದೆ. ಹೀಗಾಗಿ ನನ್ನ ಅಥವಾ ನನ್ನ ಕುಟುಂಬದ ಮೇಲೆ ಅವರ ಸಹಚರರು ಹಗೆತನ ತೀರಿಸಬಹುದು ಎಂಬ ಆತಂಕವಾಗಿದೆ. ಆಯುಕ್ತರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಮಹಿಳಾ ಸುರಕ್ಷೆಯ ಜವಾಬ್ದಾರಿ ಇರುವುದು ಕೇವಲ ಪೊಲೀಸರು, ಸರಕಾರಕ್ಕೆ ಮಾತ್ರವಲ್ಲ. ಇಡೀ ಸಮಾಜಕ್ಕೆ ಇದೆ. ಅತ್ಯಾಚಾರದಂತಹ ಪ್ರಕರಣ ಬೆಂಗಳೂರು, ದಿಲ್ಲಿಯಲ್ಲಿ ಮಾತ್ರ ನಡೆಯುತ್ತಿಲ್ಲ. ಗ್ರಾಮಗಳಲ್ಲಿಯೂ ನಡೆಯುತ್ತವೆ. ಇದರಲ್ಲಿ ನಮ್ಮ ಜವಾಬ್ದಾರಿಯೂ ಇದೆ. ನಾವೆಲ್ಲರೂ ಒಂದುಗೂಡಿ ಚಿಂತನೆ ನಡೆಸಬೇಕು. ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಬೇಕು.
-ಸುಮಿತ್ರಾ ಮಹಾಜನ್‌, ಲೋಕಸಭೆ ಸ್ಪೀಕರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next