ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನೀಡಿದ್ದ ಭರವಸೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿ ತಿಂಗಳು ಜಿಲ್ಲಾವಾರು ಶಾಸಕರ ಕುಂದುಕೊರತೆಗಳನ್ನು ಆಲಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ. ಈ ಮೂಲಕ ಸಚಿವರು ಮತ್ತು ಶಾಸಕರ ನಡುವೆ ಮತ್ತೂಂದು ಸುತ್ತಿನ ಸಮನ್ವಯದ ಸೂತ್ರ ಹೆಣೆಯುವ ಕಸರತ್ತು ನಡೆಸಲಿದ್ದಾರೆ.
ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ (ಆ.7) ಇಡೀ ದಿನ 6 ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು, ಸಚಿವರು ಹಾಗೂ ಶಾಸಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಭೆ ನಡೆಸಲಿದ್ದಾರೆ.
ಈ ಸಂದರ್ಭದಲ್ಲಿ ಸಿಎಲ್‌ಪಿ ಸಭೆಯ ನಂತರ ಸಚಿವರ ವರ್ತನೆಯಲ್ಲಾದ ಬದಲಾವಣೆಗಳು, ಶಾಸಕರ ಮನವಿಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ಸಿಗುತ್ತಿದೆಯೇ? ಮುಖ್ಯವಾಗಿ ವರ್ಗಾವಣೆ, ಅಭಿವೃದ್ಧಿ ಕಾಮಗಾರಿಗಳ ವಿಚಾರಗಳು ಚರ್ಚೆಗೆ ಬರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ಸಮಸ್ಯೆಗಳಿಗೆ ಸ್ಪಂದನೆ ಸಿಕ್ಕಿಲ್ಲ ಎಂದಾದರೆ, ಅವುಗಳ ಸೂಕ್ತ ಪರಿಹಾರ ಕಲ್ಪಿಸಲು ಸೂಚನೆ, ಅದಕ್ಕಿರುವ ಅಡತಡೆಗಳ ನಿವಾರಣೆ, ಇಬ್ಬರ ನಡುವೆ (ಸಚಿವರು-ಶಾಸಕರು) ಸಮನ್ವಯ ಸಾಧಿಸುವುದು ಸೇರಿ ಹಲವು ವಿಷಯಗಳು ಚರ್ಚೆಗೆ ಬರಲಿವೆ ಎನ್ನಲಾಗಿದೆ. ಇಂದು ಬೆಳಗ್ಗೆ 11ರಿಂದ ಮಧ್ಯಾಹ್ನ 2 ಹಾಗೂ ಸಂಜೆ 4ರಿಂದ 7ರವರೆಗೆ ಎರಡು ಹಂತಗಳಲ್ಲಿ ತುಮಕೂರು, ಯಾದಗಿರಿ, ಚಿತ್ರದುರ್ಗ, ಬಾಗಲಕೋಟೆ, ಬಳ್ಳಾರಿ ಹಾಗೂ ಧಾರವಾಡ ಜಿಲ್ಲೆಗಳ ಉಸ್ತುವಾರಿ ಸಚಿವರು, ಸಚಿವರು ಹಾಗೂ ಶಾಸಕರೊಂದಿಗೆ ಸಭೆ ನಡೆಯಲಿದೆ.
ಒಟ್ಟು ಆರೇಳು ದಿನಗಳಲ್ಲಿ ನಿತ್ಯ ನಾಲ್ಕೈದು ಜಿಲ್ಲೆಗಳ ಉಸ್ತುವಾರಿಗಳು, ಸಚಿವರು, ಶಾಸಕರೊಂದಿಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸಭೆ ನಡೆಸಲಿದ್ದಾರೆ. ಅದರ ಮುನ್ನುಡಿಯಾಗಿ ಸೋಮವಾರ ಮೊದಲ ಸಭೆ ಏರ್ಪಾಡಾಗಿದೆ. ಅಲ್ಲಿ ಶಾಸಕರು ತಮ್ಮ ಕೆಲಸಗಳು ಆಗಿರುವ ಅಥವಾ ಆಗಿಲ್ಲದಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಬಹುದು ಎಂದು ಕಾಂಗ್ರೆಸ್ ಶಾಸಕರೊಬ್ಬರು ತಿಳಿಸಿದ್ದಾರೆ.
ಈಚೆಗೆ ಸಿಎಲ್‌ಪಿ ಸಭೆ ನಡೆಸುವಂತೆ ಹಲವು ಶಾಸಕರು ಪತ್ರ ಬರೆದಿದ್ದರು. ಅದರಲ್ಲಿ ಹಲವು ಸಚಿವರ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ವರ್ಗಾವಣೆ, ಅನುದಾನ ಬಿಡುಗಡೆ ಸೇರಿದಂತೆ ಹಲವು ವಿಚಾರದಗಳಲ್ಲಿ ಅಸಮಾಧಾನ ಹೊರಹಾಕಿದ್ದರು. ಸರ್ಕಾರ ಅಸ್ತಿತ್ವಕ್ಕೆ ಬಂದ ಕೇವಲ ಎರಡು ತಿಂಗಳ ಅಂತರದಲ್ಲಿ ಉಂಟಾದ ಈ ಅಸಮಾಧಾನದ ಹೊಗೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಎಲ್‌ಪಿ ಸಭೆ ಕರೆದು ಶಮನಗೊಳಿಸುವ ಪ್ರಯತ್ನ ನಡೆಸಿದ್ದರು.
ಅಷ್ಟೇ ಅಲ್ಲ, ಸಿಎಲ್‌ಪಿ ಸಭೆ ತಡವಾಗಿದ್ದಕ್ಕೆ ಸಮಜಾಯಿಷಿ ನೀಡುವುದರ ಜತೆಗೆ ಪ್ರತಿ ತಿಂಗಳು ಜಿಲ್ಲಾವಾರು ಶಾಸಕರು ಮತ್ತು ಸಚಿವರ ಸಭೆ ನಡೆಸುವುದಾಗಿ ಭರವಸೆ ನೀಡಿದ್ದರು. ಅದಕ್ಕೆ ಈಗ ಚಾಲನೆ ನೀಡಲಾಗುತ್ತಿದೆ.
ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, “ಮುಖ್ಯಮಂತ್ರಿಗಳು ಹಾಗೂ ನಾನು ನಮ್ಮ ಪಕ್ಷದ ಶಾಸಕರ ಜತೆ ಚರ್ಚೆ ಮಾಡುವುದಾಗಿ ಈಗಾಗಲೇ ಹೇಳಿದ್ದೇವೆ. ಅದಕ್ಕಾಗಿ ಕೆಲವು ಜಿಲ್ಲೆಗಳ ಶಾಸಕರ ಸಭೆ ನಾಳೆ ಕರೆದಿದ್ದೇವೆ. ಅಲ್ಲಿ ಶಾಸಕರ ಜತೆ ಚರ್ಚೆ ಮಾಡುತ್ತೇವೆ’ ಎಂದು ತಿಳಿಸಿದರು.