ಬೆಂಗಳೂರು: ಸಂಪನ್ಮೂಲ ಕ್ರೋಡೀಕರಣ ದೃಷ್ಟಿಯಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಇದೀಗ ಮತ್ತೂಂದು ಸುತ್ತಿನ ಮೂಲೆ ಮತ್ತು ಮಧ್ಯಂತರ ಮೂಲೆ ನಿವೇಶನಗಳ ಇ-ಹರಾಜು ಮಾರಾಟಕ್ಕೆ ಮುಂದಾಗಿದೆ. ಬನಶಂಕರಿ 6ನೇ ಹಂತ, ಅಂಜನಾಪುರ, ಜೆ.ಪಿ.ನಗರ, ಅರ್ಕಾವತಿ ಲೇಔಟ್, ಎಚ್‌ಬಿಆರ್ ಲೇಔಟ್, ನಾಗರಬಾವಿ, ನಾಡಪ್ರಭು ಕೆಂಪೇಗೌಡ ಲೇಔಟ್, ಸರ್. ಎಂ. ವಿಶ್ವೇಶ್ವರಯ್ಯ ಲೇಔಟ್ ಸೇರಿದಂತೆ ಮತ್ತಿತರರ ಬಡಾವಣೆಗಳಲ್ಲಿರುವ ಮೂಲೆ ಮತ್ತು ಮಧ್ಯಂತರ ಮೂಲೆ ನಿವೇಶನಗಳನ್ನು ಇ-ಹರಾಜು ಪ್ರಕ್ರಿಯೆಯಲ್ಲಿ ಮಾರಾಟ ಮಾಡಲು ಬಿಡಿಎ ಈಗಾಗಲೇ ಸಿದ್ಧತೆ ನಡೆಸಿದೆ.
ಬೆಂಗಳೂರಿನ ವಿವಿಧ ಕಡೆಗಳಲ್ಲಿ ಒತ್ತುವರಿಯಾಗಿದ್ದ ಮೂಲೆ ನಿವೇಶನ ಮತ್ತು ಮಧ್ಯಂತರ ಮೂಲೆ ನಿವೇಶನಗಳನ್ನು ತೆರವುಗೊಳಿಸಿದ್ದು ಅವು ಸೇರಿದಂತೆ 500 ಮೂಲೆ ನಿವೇಶನಗಳು ಹಾಗೂ 500 ಮಧ್ಯಂತರನಿವೇಶನಗಳ ಇ-ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಬಿಡಿಎ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿವೇಶನಗಳ ಬಹಿರಂಗ ಇ-ಹರಾಜು ಕುರಿತಂತೆ ಬಿಡಿಎ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು ಜನವರಿ ಮೊದಲ ವಾರ ಇಲ್ಲವೆ, ಎರಡನೇ ವಾರ ಈ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ ಎಂದಿದ್ದಾರೆ. ಬಿಡಿಎ ಕಳೆದ ಡಿಸೆಂಬರ್ ತಿಂಗಳಲ್ಲಿ ಇ-ಹರಾಜುಪ್ರಕ್ರಿಯೆ ನಡೆಸಿತ್ತು. ಒಟ್ಟು 372 ನಿವೇಶನಗಳನ್ನು ಇ-ಹರಾಜಿನಲ್ಲಿ ಅಳವಡಿಸಿದ್ದು, 296 ನಿವೇಶನಗಳು ಮಾರಾಟವಾಗಿತ್ತು. ಸುಮಾರು 72 ನಿವೇಶನಗಳು ಮಾರಾಟವಾಗದೇ ಹಾಗೆ ಉಳಿದಿತ್ತು. ಅವುಗಳೂ ಮುಂದೆ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಮಾರಾಟ ಮಾಡಲಾಗುವುದು ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ. ಕಳೆದ ತಿಂಗಳು ಅಂತ್ಯಗೊಂಡ ಇ-ಹರಾಜು ಪ್ರಕ್ರಿಯೆಯಲ್ಲಿ ಬಿಡಿಎ ಸೈಟ್‌ಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಕಂಡು ಬಂತು. ಯಾವ ಯಾವ ಪ್ರದೇಶಗಳಲ್ಲಿ ನಿವೇಶನಗಳು ಹೇಗಿ ಎಂಬುವುದನ್ನು ಜನರು ಪರಿಶೀಲನೆ ಮಾಡುತ್ತಾರೆ. ನಾಲೆ ಸೇರಿದಂತೆ ಇನ್ನಿತರ ಪ್ರದೇಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ಹೀಗಾಗಿ ಕೆಲವೇ ಕೆಲವು ಸೈಟ್‌ಗಳು ಮಾರಾಟವಾಗದೇ ಉಳಿದಿದೆ ಎಂದು ಬಿಡಿಎ ಆಯುಕ್ತ ರಾಜೇಶ್ ಗೌಡ ಹೇಳಿದ್ದಾರೆ.
ಅರ್ಕಾವತಿ ಲೇಔಟ್ ನಿವೇಶನಗಳಿಗೆ ಹೆಚ್ಚಿನ ಬೇಡಿಕೆ :
ಕಳೆದ ಬಾರಿ ನಡೆದ ಇ-ಹರಾಜು ಪ್ರಕ್ರಿಯೆಯಲ್ಲಿ ಅರ್ಕಾವತಿ ಲೇಔಟ್‌ನ ನಿವೇಶನಗಳಿಗೆ ಗ್ರಾಹಕರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗಿತ್ತು. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಗರಿಷ್ಠ 6,608 ರೂ.ಗೆ ಪ್ರತಿ ಚದರ ಅಡಿ ಮಾರಾಟವಾದರೆ ಅರ್ಕಾವತಿ ಬಡಾವಣೆಗಳಲ್ಲಿ ನಿವೇಶನಕ್ಕೆ ಅಧಿಕ ಬೇಡಿಕೆ ಉಂಟಾದ ಹಿನ್ನೆಲೆಯಲ್ಲಿ ಗರಿಷ್ಠ 14,368 ರೂ.ಗೆ ಪ್ರತಿ ಚದರ ಅಡಿಗೆ ಮಾರಾಟವಾಯಿತು. ಹೀಗಾಗಿಯೇ ಮುಂದಿನ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಮತ್ತಷ್ಟು ಬೇಡಿಕೆ ಬರುವನಿರೀಕ್ಷೆಯನ್ನು ಬಿಡಿಎ ಇಟ್ಟುಕೊಂಡಿದೆ. ಡಿಸೆಂಬರ್ ಮಾಹೆಯಲ್ಲಿ ನಡೆದ ಒಟ್ಟಾರೆ 296 ನಿವೇಶನಗಳ ಪ್ರಾರಂಭಿಕ ಮೊತ್ತ 215 ಕೋಟಿ ರೂ.ಗಳಾಗಿದ್ದು, ಹರಾಜು ಪ್ರಕ್ರಿಯೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸುಮಾರು 133 ಕೋಟಿ.ರೂ.ಆದಾಯ ಸಂಗ್ರಹವಾಗಿದೆ.
ಮೂಲೆ ಹಾಗೂ ಮಧ್ಯಂತರ ನಿವೇಶನಗಳ ಇ -ಹರಾಜು ಪ್ರಕ್ರಿಯೆ ಸಂಬಂಧ ಬಿಡಿಎ ಸಿದ್ಧತೆ ನಡೆಸಿದೆ. ಜನವರಿಮೊದಲ ವಾರದ ಅಂತ್ಯದಲ್ಲಿ ಇಲ್ಲವೆ 2ನೇ ವಾರದಲ್ಲಿ ಹರಾಜು ಪ್ರಕ್ರಿಯೆ ನಡೆಸಲಾಗುವುದು. ಮುಂದಿನ ಹರಾಜು ಪ್ರಕ್ರಿಯೆಯಲ್ಲೂ ಉತ್ತಮ ಬೆಲೆಗಳಿಗೆ ಸೈಟ್‌ಗಳು ಮಾರಾಟವಾಗುವ ನಿರೀಕ್ಷೆಯಿದೆ.
–ಎಂ.ರಾಜೇಶಗೌಡ, ಬಿಡಿಎ ಆಯುಕ್ತ
-ದೇವೇಶ ಸೂರಗುಪ್ಪ