Advertisement

ಅನುಷ್ಠಾನಕ್ಕೆ ಬೇಕು ಬದ್ಧತೆ ಕನ್ನಡ ಉಳಿಸಲು ಇನ್ನೊಂದು ನಿರ್ಧಾರ

07:46 AM Jul 15, 2017 | Team Udayavani |

ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಬದ್ಧತೆಯನ್ನೂ ತೋರಿಸಬೇಕು. ಇಲ್ಲದಿದ್ದರೆ ಕೆಲವು ಶಾಲೆಗಳು ನೆಪ ಮಾತ್ರಕ್ಕೆ ಕನ್ನಡ ಕಲಿಸುವ ನಾಟಕವಾಡುವ ಸಾಧ್ಯತೆಯಿದೆ.

Advertisement

ಕೆಲ ದಿನಗಳ ಹಿಂದೆಯಷ್ಟೇ ಕನಿಷ್ಠ 10ನೇ ತರಗತಿ ತನಕ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಸರಕಾರಿ ನೌಕರಿಗಳಲ್ಲಿ ಶೇ.5 ಮೀಸಲಾತಿ ಪ್ರಕಟಿಸಿದ್ದ ಸರಕಾರ ಇದೀಗ ರಾಜ್ಯದ ಎಲ್ಲ ಶಾಲೆಗಳಲ್ಲಿ ಕನ್ನಡವನ್ನು ಒಂದು ಪಠ್ಯ ವಿಷಯವಾಗಿ ಬೋಧಿಸುವುದನ್ನು ಕಡ್ಡಾಯ ಮಾಡಿರುವುದು ಅತ್ಯಂತ ಸಮುಚಿತವಾದ ನಿರ್ಧಾರವಾಗಿದೆ. ಎರಡೂ ನಿರ್ಧಾರಗಳ ಹಿಂದಿನ ಕಾಳಜಿ ನಾಡಿನ ಭಾಷೆಯನ್ನು ಮತ್ತು ಆ ಮೂಲಕ ಸಂಸ್ಕೃತಿಯನ್ನು ಉಳಿಸುವುದಾಗಿದೆ. ಈ ಆದೇಶ ಕೇಂದ್ರೀಯ ಪಠ್ಯಕ್ರಮ ಅಳವಡಿಸಿಕೊಂಡಿರುವ ಎಲ್ಲ ಖಾಸಗಿ ಸಿಬಿಎಸ್‌ಇ, ಐಸಿಎಸ್‌ಇ, ಆಂಗ್ಲಮಾಧ್ಯಮ ಶಾಲೆಗಳು ಮಾತ್ರವಲ್ಲದೆ ತಮಿಳು, ಉರ್ದು ಸೇರಿದಂತೆ ವಿವಿಧ ಅಲ್ಪಸಂಖ್ಯಾಕ ಶಾಲೆಗಳಿಗೂ ಅನ್ವಯಿಸಲಿದೆ. ಮಕ್ಕಳು ಯಾವ ಮಾಧ್ಯಮದಲ್ಲೇ ಕಲಿತರೂ ಕನಿಷ್ಠ ಕನ್ನಡ ಓದಿ ಬರೆಯಲು ಸಾಧ್ಯವಾಗುವಂತೆ ಮಾಡುವ ನಿರ್ಧಾರವಿದು. ಒಂದು ವೇಳೆ ಶಾಲೆಗಳು ಈ ಆದೇಶವನ್ನು ಪಾಲಿಸದಿದ್ದರೆ ಮಾನ್ಯತೆ ಕಳೆದುಕೊಳ್ಳಬೇಕಾಗುತ್ತದೆ ಎಂದು ಶಿಕ್ಷಣ ಸಚಿವ ತನ್ವೀರ್‌ ಸೇs… ಎಚ್ಚರಿಸಿದ್ದಾರೆ. 

ಸಿಬಿಎಸ್‌ಇ ಪಠ್ಯಕ್ರಮ ಅನುಸರಿಸುವ ಶಾಲೆಗಳಲ್ಲಿ ತೃತೀಯ ಭಾಷೆಯಾಗಿ ಕನ್ನಡ ಕಲಿಸುವ ವ್ಯವಸ್ಥೆ ಈಗಾಗಲೇ ಇದೆ. ಎಂಟನೇ ತರಗತಿ ತನಕ ಮಕ್ಕಳಿಗೆ ಕನ್ನಡ ಕಲಿಸಲಾಗುತ್ತಿದೆ. ಆದರೆ ಐಸಿಎಸ್‌ಇ ಮತ್ತು ಭಾಷಾ ಅಲ್ಪಸಂಖ್ಯಾಕ ಶಾಲೆಗಳಲ್ಲಿ ಮಾತ್ರ ಕನ್ನಡವನ್ನು ಕಡ್ಡಾಯವಾಗಿ ಕಲಿಸಲಾಗುತ್ತಿಲ್ಲ. ಇದರಿಂದಾಗಿ ಕರ್ನಾಟಕದಲ್ಲೇ ಕಲಿತರೂ ಅನೇಕ ಮಕ್ಕಳಿಗೆ ಕನ್ನಡದ ಗಂಧಗಾಳಿ ಇರುವುದಿಲ್ಲ. ಸಚಿವರು ಹೇಳಿರುವ ಪ್ರಕಾರ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಕನ್ನಡ ಬೋಧನೆ ಮಾಡಬೇಕು. ಆದರೆ ಈಗಾಗಲೇ ಶಾಲೆಗಳು ಶುರುವಾಗಿ ಒಂದೂವರೆ ತಿಂಗಳಾಗುತ್ತಾ ಬಂದಿದೆ. ಸಿಬಿಎಸ್‌, ಐಸಿಎಸ್‌ಇಯಂತಹ ಕೇಂದ್ರೀಯ ಪಠ್ಯ ಕ್ರಮ ಅನುಸರಿಸುವ ಶಾಲೆಗಳು ಪ್ರತಿವರ್ಷ ಜೂನ್‌ ಒಂದರಂದೇ ಕರಾರುವಾಕ್ಕಾಗಿ ಶುರುವಾಗುತ್ತವೆ. ಎಲ್ಲ ಶಾಲೆಗಳಲ್ಲಿ ಈ ವರ್ಷ ಶೈಕ್ಷಣಿಕ ಚಟುವಟಿಕೆಗಳ ವೇಳಾಪಟ್ಟಿಯೂ ತಯಾರಾಗಿದೆ. ಶಾಲೆಗಳು ಪ್ರಾರಂಭವಾಗಿ ಒಂದೂವರೆ ತಿಂಗಳು ಕಳೆದ ಬಳಿಕ ಈ ಆದೇಶ ಹೊರಡಿಸಿರುವುದರಿಂದ ಕೆಲವು ಶಾಲೆಗಳಿಗೆ ಅದನ್ನು ಪಾಲಿಸುವುದು ಕಷ್ಟವಾಗಬಹುದು.  ಹಿಂದೆ ಕನ್ನಡ ಮಾಧ್ಯದಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಕಡ್ಡಾಯಗೊಳಿಸಲು ಸರಕಾರ ಮುಂದಾಗಿತ್ತು. ಆದರೆ ಸುಪ್ರೀಂ ಕೋರ್ಟ್‌ ಕಲಿಕಾ ಮಾಧ್ಯಮ ಹೆತ್ತವರ ಆಯ್ಕೆಗೆ ಬಿಟ್ಟದ್ದು ಎಂದು ತೀರ್ಪು ನೀಡಿದ ಬಳಿಕ ಈ ಪ್ರಸ್ತಾವವನ್ನು ಹಿಂದೆಗೆದುಕೊಳ್ಳಲಾಗಿದೆ. ಕಲಿಕಾ ಮಾಧ್ಯಮ  ವಿಚಾರದಲ್ಲಿ ಸರಕಾರ ಯಾವುದೇ ಆದೇಶ ಹೊರಡಿಸಿದರೂ ಅದು ಒಂದಲ್ಲ ಒಂದು ವಿವಾದವನ್ನು ಸೃಷ್ಟಿಸುತ್ತದೆ. ಇಂಗ್ಲಿಷ್‌ ಅನ್ನ ಕೊಡುವ ಭಾಷೆ ಎಂಬ ಭಾವನೆ ದಟ್ಟವಾಗಿರುವ ಕಾರಣ ಪೋಷಕರೆಲ್ಲ ಎಷ್ಟೇ ಕಷ್ಟವಾದರೂ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಾರೆ. ಜನರ ಈ ಭಾವನೆಯೇ ಶಿಕ್ಷಣ ಎನ್ನುವುದು ಈಗ ವ್ಯಾಪಾರವಾಗಲು ಮೂಲಕಾರಣ. ಪ್ರತಿ ವರ್ಷ ಆಂಗ್ಲ ಮಾಧ್ಯಮ ಶಾಲೆಗಳ ಸಂಖ್ಯೆ ಹೆಚ್ಚುತ್ತಿದೆ. ಇದೇ ವೇಳೆ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಎಲ್ಲ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷಾ ವಿಷಯವಾಗಿ ಕಲಿಸುವುದು ಅತ್ಯಂತ ಅಗತ್ಯ. ಈ ನಿರ್ಧಾರವನ್ನು ಬಹಳ ಹಿಂದೆಯೇ ಕೈಗೊಳ್ಳಬೇಕಿತ್ತು.  ಇದೀಗ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಬದ್ಧತೆಯನ್ನೂ ತೋರಿಸಬೇಕು. ಇಲ್ಲದಿದ್ದರೆ ಕೆಲವು ಶಾಲೆಗಳು ನೆಪ ಮಾತ್ರಕ್ಕೆ ಕನ್ನಡ ಕಲಿಸುವ ನಾಟಕವಾಡಿ ಕಣ್ಣಿಗೆ ಮಣ್ಣೆರಚುವ ಸಾಧ್ಯತೆಯಿದೆ. ಹಾಗೆಂದು ಈ ರೀತಿಯ ಆದೇಶ ಹೊರಡಿಸಿದ ಮೊದಲ ರಾಜ್ಯ ಕರ್ನಾಟಕವಲ್ಲ. ಪಕ್ಕದ ಕೇರಳದಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ ಮಲಯಾಳಂ ಕಡ್ಡಾಯಗೊಳಿಸಲಾಗಿದೆ ಹಾಗೂ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಮರೋಪಾದಿಯಲ್ಲಿ ವ್ಯವಸ್ಥೆಗಳನ್ನು ಮಾಡ ಲಾಗಿದೆ. ಅಚ್ಚ ಕನ್ನಡದ ಕಾಸರಗೋಡಿನಲ್ಲಿ ಕನ್ನಡಿಗರ ಪ್ರಬಲ ಪ್ರತಿಭಟನೆಯ ನಡುವೆಯೂ ಅಲ್ಲಿನ ಸರಕಾರ ಮಲಯಾಳಂ ಬೋಧಿಸಲು ವ್ಯವಸ್ಥೆಗಳನ್ನು ಮಾಡಿದೆ. ಕನ್ನಡಿಗರ ಹಿತದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆ ಅಲ್ಲದಿದ್ದರೂ ಅಲ್ಲಿನ ಸರಕಾರ ತನ್ನ ಆದೇಶವನ್ನು ಕಾರ್ಯಗತಗೊಳಿಸಲು ತೋರಿಸಿರುವ ಬದ್ಧತೆ ಮಾತ್ರ ಅನುಕರಣೀಯ.

Advertisement

Udayavani is now on Telegram. Click here to join our channel and stay updated with the latest news.

Next