ಕೊಪ್ಪಳ: ಮಹಾರಾಷ್ಟ್ರದ ಮುಂಬೈನ ದಿವಾ ಪ್ರದೇಶದಿಂದ ಆಗಮಿಸಿದ ಕೊಪ್ಪಳ ಜಿಲ್ಲೆಯ 28 ವರ್ಷದ ಯುವಕನಿಗೆ ಕೋವಿಡ್-19 ಸೋಂಕು ಇರುವುದು ಶುಕ್ರವಾರ ದೃಢಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆಯಾದಂತಾಗಿದೆ.
ತನ್ನ ತಂದೆ ತಾಯಿ ಜೊತೆ ಖಾಸಗಿ ವಾಹನ ಚಾಲಕನ ಜೊತೆ ದಿವಾ ಪ್ರದೇಶದಿಂದ ಮೇ.30 ರಂದು ಪ್ರಯಾಣ ಬೆಳಸಿ ಮೇ.31ಕ್ಕೆ ಕೊಪ್ಪಳಕ್ಕೆ ಆಗಮಿಸಿದ್ದಾನೆ. ಈತನ ಈ ಮಾಹಿತಿ ಜಿಲ್ಲಾಡಳಿತಕ್ಕೆ ಗೊತ್ತಾಗುತ್ತಿದ್ದಂತೆ ಎಲ್ಲನ್ನೂ ಕ್ವಾರೆಂಟೈನ್ ಮಾಡಿದೆ. ಮೇ 2ರಂದು ಗಂಗಾವತಿಯಲ್ಲಿ ಆತನ ಗಂಟಲು ದ್ರವ ಪಡೆದು ಪರೀಕ್ಷೆ ಮಾಡಿದ್ದು ಮೇ.5 ರಂದು ಆತನಿಗೆ ಸೋಂಕು ಇರುವುದು ದೃಢಪಟ್ಟಿದೆ.
ಹಾಗಾಗಿ ಜಿಲ್ಲಾಡಳಿತ ಆತನನ್ನು ಕೂಡಲೇ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದೆ. ಈತನಿಗೆ ಪ್ರಾಥಮಿಕ ಸಂಪರ್ಕಕ್ಕೆ ನಾಲ್ವರು ಬಂದಿದ್ದು ಐದು ಜನ ದ್ವಿತೀಯ ಸಂಪರ್ಕಕ್ಕೆ ಬಂದ ಮಾಹಿತಿ ಜಿಲ್ಲಾಡಳಿತಕ್ಕೆ ಲಭ್ಯವಾಗಿದೆ. ಇನ್ನೂ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯ ನಡೆದಿದೆ.
ಜಿಲ್ಲೆಯಲ್ಲಿ ಈವರೆಗೂ 4 ಜನರಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿತ್ತು. ಇವರಲ್ಲಿ ಮೂರು ಜನ ಗುಣಮುಖರಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಓರ್ವ ವ್ಯಕ್ತಿಗೆ ಚಿಕಿತ್ಸೆ ಮುಂದುವರೆದಿದೆ.
ಈ ವ್ಯಕ್ತಿ ಸೇರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆಯಾದಂತಾಗಿದೆ. ಇಂದು ಸಂಜೆ ಹೆಲ್ತ್ ಬುಲೆಟಿನ್ ನಲ್ಲಿ ಈ ವ್ಯಕ್ತಿಯ ಸೋಂಕಿನ ಬಗ್ಗೆ ಘೋಷಣೆಯಾಗಲಿದೆ