Advertisement

ಮೃತಪಟ್ಟ ಹಾನಾಪುರ ತಾಂಡಾ ಯುವಕನಿಗೆ ಸೋಂಕು ದೃಢ: ಬಾಗಲಕೋಟೆಯಲ್ಲಿ ಸೋಂಕಿಗೆ 9ನೇ ಬಲಿ

02:52 PM Jul 07, 2020 | keerthan |

ಬಾಗಲಕೋಟೆ: ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹಾನಾಪುರ ತಾಂಡಾದಲ್ಲಿ ಮೃತಪಟ್ಟಿದ್ದ ಯುವಕನಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

Advertisement

ಮೃತಪಟ್ಟಿದ್ದ ಯುವಕನ ರಿಪೋರ್ಟ್ ನಲ್ಲಿ ಕೋವಿಡ್-19 ಸೋಂಕು ದೃಢವಾಗಿದ್ದು, ಕೋವಿಡ್ ನಿಯಮಾವಳಿಯಂತೆ ಅಂತ್ಯಕ್ರಿಯೆ ನಡೆಸಲಾಗಿದೆ.

ಗುಳೇದಗುಡ್ಡ ತಾಲೂಕಿನ ಹಾನಾಪೂರ ಎಲ್ ಟಿಯ 30ವರ್ಷದ ಯುವಕ ಜುಲೈ 05ರಂದು ಮೃತಪಟ್ಟಿದ್ದ. ಈತ ಜುಲೈ 2ರಂದು ಗೋವಾದಿಂದ ಸ್ವಗ್ರಾಮಕ್ಕೆ ಬಂದಿದ್ದ. ಸೋಂಕಿರುವುದು ನಿರ್ಲಕ್ಷಿಸಿ, ತನಗೆ ಭೂತದ (ದೆವ್ವ) ಸಮಸ್ಯೆ ಇದೆ ಎಂದು, ಇಳಕಲ್ಲ ತಾಲೂಕಿನ ಗುಡೂರ ಎಸ್.ಸಿ ಗ್ರಾಮಕ್ಕೆ ಹೋಗಿ ದೆವ್ವ ಬಿಡಿಸುವವರನ್ನು ಭೇಟಿ ಮಾಡಿ ಬಂದಿದ್ದ ಎನ್ನಲಾಗಿದೆ.

ಜುಲೈ 5ರಂದು ಆತ ಮೃತಪಟ್ಟಿದ್ದು, ಬಳಿಕ ಗಂಟಲು ಮಾದರಿ ಪರೀಕ್ಷೆಗೆ ಕಳುಹಿಸಿ, ಅಂತ್ಯಕ್ರಿಯೆ ಮಾಡಲಾಗಿತ್ತು.

ಗ್ರಾಮದಲ್ಲಿ ಮೃತ ಯುವಕನ ಸಂಪರ್ಕಕ್ಕೆ ಬಂದಿದ್ದ 42 ಮಂದಿಗೆ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Advertisement

ಜಿಲ್ಲೆಯಲ್ಲಿ ಸೋಂಕಿನಿಂದ ಈವರೆಗೆ 9 ಜನ ಬಲಿಯಾಗಿದ್ದಾರೆ. ಕಲಾದಗಿಯ ವೈದ್ಯ ಬೆಂಗಳೂರಿನಲ್ಲಿ, ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿಯ ವೃದ್ಧೆ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಎರಡು ಪ್ರಕರಣ ಸಹಿತ ಜಿಲ್ಲೆಯಲ್ಲಿ ಒಟ್ಟು 9 ಜನರು ಕೋವಿಡ್-19ಗೆ ಬಲಿಯಾಗಿದ್ದಾರೆ.

ಸಕ್ಕರೆ ಕಾರ್ಖಾನೆ ನಿರ್ದೇಶಕನಿಗೆ ಸೋಂಕು: ಜಿಲ್ಲೆಯಲ್ಲಿ ಕೋವಿಡ್-19 ರಣಕೇಕೆ ಮುಂದುವರೆದಿದ್ದು, ಬಾಗಲಕೋಟೆ ನವನಗರದ ನಿವಾಸಿ, ಸಕ್ಕರೆ ಕಾರ್ಖಾನೆಯ ನಿರ್ದೇಶಕರೊಬ್ಬರಿಗೆ ಜಿಲ್ಲಾ ಕೋವಿಡ್ ಲ್ಯಾಬ್ ನಲ್ಲಿ ಸೋಂಕು ದೃಢಪಟ್ಟಿದೆ.

ಬಾಗಲಕೋಟೆ ಜಿಲ್ಲೆಯಲ್ಲಿಂದು ಮತ್ತೆ 20 ಹೊಸ ಕೇಸ್ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಬಾಗಲಕೋಟೆ ನಗರದ ರೈಲ್ವೆ ನಿಲ್ದಾಣ ಎದುರಿನ ಪ್ರದೇಶ, ಕಲಾದಗಿ, ಚಿಕ್ಕಮ್ಯಾಗೇರಿ, ಮುಡಪಲಜೀವಿ, ಮಲ್ಲಾಪೂರ, ಮುಧೋಳದಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next