ಮಂಡ್ಯ/ಮದ್ದೂರು: ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಶವವನ್ನು ಆ್ಯಂಬುಲೆನ್ಸ್‌ನಲ್ಲಿ ಅಂತ್ಯಕ್ರಿಯೆಗಾಗಿ ಮದ್ದೂರು ತಾಲೂಕಿಗೆ ತಂದಾಗ ಕೊರೊನಾ ಪರೀಕ್ಷೆ ವರದಿ ಇಲ್ಲವೆಂಬ ಕಾರಣಕ್ಕೆ ತಾಲೂಕು ಆಡಳಿತ ಮತ್ತು ಪೊಲೀಸರು ಶವವನ್ನು ವಾಪಸ್ ಕಳುಹಿಸಿದ್ದಾರೆ.
ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿ ಆ್ಯಂಬುಲೆನ್ಸ್‌ನಲ್ಲಿ ಶವವನ್ನು ಬೆಂಗಳೂರಿನಿಂದ ಹಳ್ಳಿಗಳ ಮೂಲಕ ತಾಲೂಕಿನ ವಳಗೆರೆ ದೊಡ್ಡಿ ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನಡೆಸಲು ಪ್ರಯತ್ನಿಸಿದ್ದರು. ಈ ಬಗ್ಗೆ ಮಾಹಿತಿ ಅರಿತ ತಾಲೂಕು ಆಡಳಿತ ಹಾಗೂ ಪೊಲೀಸರು, ಜಿಲ್ಲೆಯ ಗಡಿ ಭಾಗದಲ್ಲಿ ವಾಹನ ತಡೆದು ಶವ ಸಮೇತ ಆ್ಯಂಬುಲೆನ್ಸ್‌ನು° ವಾಪಸ್ ಕಳುಹಿಸಿದ್ದಾರೆ.
ಮೂಲತಃ ವಳಗೆರೆದೊಡ್ಡಿ ಗ್ರಾಮದ ಜಗದೀಶ್(42) ಬೆಂಗಳೂರಿನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಮದ್ಯವ್ಯಸನಿ ಜಗದೀಶ್ ಮೇ 13ರಂದು ರಾತ್ರಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು. ಜಗದೀಶನ ಪುತ್ರಿ ಮತ್ತು ಆತನ ತಂದೆ ವಳಗೆರೆ ದೊಡ್ಡಿಯಲ್ಲಿದ್ದ ಕಾರಣ ಶವವನ್ನು ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲು ಆ್ಯಂಬುಲೆನ್ಸ್‌ನಲ್ಲಿ ತಂದಿದ್ದರು.
ಜಗದೀಶನ ಶವಕ್ಕೆ ಕೋವಿಡ್-19 ಪ್ರಮಾಣ ಪತ್ರ ಇಲ್ಲವೆಂಬ ಬಗ್ಗೆ ಮಾಹಿತಿ ಅರಿತ ತಹಶೀಲ್ದಾರ್ ವಿಜಯ ಕುಮಾರ್ ಶವವನ್ನು ವಳಗೆರೆದೊಡ್ಡಿಗೆ ತರ ದಂತೆ ತಡೆಯಲು ಕೆಸ್ತೂರು ಪೊಲೀಸರಿಗೆ ಮಾಹಿತಿ ನೀಡಿದರು. ಕೆಸ್ತೂರು ಠಾಣೆ ಪಿಎಸ್‌ಐ ಪ್ರಭಾ, ಗ್ರಾಪಂ ಪಿಡಿಒ ಮಂಜುನಾಥ್, ವೈದ್ಯಕೀಯ ಮತ್ತು ಕಂದಾಯ ಅಧಿಕಾರಿಗಳು ಆ್ಯಂಬುಲೆನ್ಸ್ ನ್ನು ಮಲ್ಲನಕುಪ್ಪೆ ಚೆಕ್‌ಪೋಸ್ಟ್ ಬಳಿ ತಡೆದು ವಾಪಸ್ ಕಳುಹಿಸಿದರು.
ಬಳಿಕ ಆ್ಯಂಬುಲೆನ್ಸ್ ಚಾಲಕ, ಮೃತ ಜಗದೀಶನ ಪತ್ನಿ ಲಕ್ಷ್ಮಮ್ಮ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಹೆದ್ದಾರಿ ಬಿಟ್ಟು ಹಳ್ಳಿಗಳ ಮೂಲಕ ವಳಗೆರೆದೊಡ್ಡಿಗೆ ಸಾಗಿಸಲು ಪ್ರಯತ್ನಿಸಿದರು. ಕಾರ್ಯಾಚರಣೆ ನಡೆಸಿದ ಕೆಸ್ತೂರು ಠಾಣೆ ಪಿಎಸ್‌ಐ ಪ್ರಭಾ, ಕುಂದನಕುಪ್ಪೆ ಗೇಟ್ ಬಳಿ ಪತ್ತೆಹಚ್ಚಿ ಆ್ಯಂಬುಲೆನ್ಸ್‌ನು° ಮತ್ತೆ ಗಡಿ ದಾಟಿಸಿ ವಾಪಸಾಗಿದ್ದಾರೆ.