Advertisement

CM Siddaramaiah ವಿರುದ್ಧ ಇನ್ನೊಂದು ದೂರು: ಮುಡಾ ಬೆನ್ನಲ್ಲೇ ಇನ್ನೊಂದು ಸಂಕಷ್ಟ

01:01 AM Aug 07, 2024 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ವಕ್ಷೇತ್ರದಲ್ಲಿ ಅಕ್ರಮವಾಗಿ ಭೂ ಡಿನೋಟಿಫಿಕೇಶನ್‌ ಮಾಡಿಸಿರುವ ಆರೋಪ ಎದುರಾಗಿದ್ದು, ಮೈಸೂರು ಜಿಲ್ಲಾಧಿಕಾರಿ ಹಾಗೂ ರಾಜ್ಯಪಾಲರಿಗೆ ಈ ಬಗ್ಗೆ ದೂರು ಸಲ್ಲಿಕೆಯಾಗಿದೆ.

Advertisement

ಮೈಸೂರಿನ ಸ್ನೇಹಮಯಿ ಕೃಷ್ಣ ಎಂಬವರು ಈ ಕುರಿತ ದಾಖಲೆಗಳೊಂದಿಗೆ ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್ ಅವರಿಗೆ ಆ. 2ರಂದು 7 ಪುಟ ಗಳ ಪತ್ರ ಬರೆದಿದ್ದು, ತನಿಖೆ ನಡೆಸಿ 15 ದಿನಗಳಲ್ಲಿ ವರದಿ ನೀಡುವಂತೆ ಮೈಸೂರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ, ಸೂಕ್ತ ಕ್ರಮ ಕೈಗೊಂಡು ಅನ್ಯಾಯಕ್ಕೆ ಒಳಗಾಗಿರುವ ನೈಜ ಫ‌ಲಾನುಭವಿಗಳಿಗೆ ನ್ಯಾಯ ಒದಗಿಸಬೇಕು. ಒಂದು ವೇಳೆ ಜಿಲ್ಲಾಧಿಕಾರಿ ವಿಫ‌ಲರಾದರೆ ಸೂಕ್ತ ಕಾನೂನು ಕ್ರಮ ಜರಗಿಸುವಂತೆಯೂ ಕೋರಿದ್ದಾರೆ.ಈಗಾಗಲೇ ಸಿಎಂ ವಿರುದ್ಧ ಮುಡಾ ಆರೋಪವಿದೆ. ಜತೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಗಳ ಹಗರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದರ ನಡುವೆ ಡಿನೋಟಿಫಿಕೇಶನ್‌ ಆರೋಪವೂ ಕೇಳಿ ಬಂದಿದ್ದು, ಸಿಎಂ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿದ್ದಾರೆ.

ಮೂಲ ಮಾಲಕರು, ಫ‌ಲಾನುಭವಿಗಳಿಗೆ ಅನ್ಯಾಯ
ಮೈಸೂರು ಜಿಲ್ಲೆ ವರುಣ ಹೋಬಳಿ ಎಸ್‌. ಉತ್ತನಹಳ್ಳಿ ಗ್ರಾಮದ ಸರ್ವೇ ನಂಬರ್‌ 42/3, 44/1, 44/2 ಹಾಗೂ 205/2ರಲ್ಲಿ ಒಟ್ಟು 7.01 ಎಕರೆಯನ್ನು ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆಗಾಗಿ 1979ರ ನ. 24ರಂದು ಸ್ವಾಧೀನಪಡಿಸಿಕೊಳ್ಳಲು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಅನಂತರ ನಿವೇಶನ ಅಭಿವೃದ್ಧಿಪಡಿಸಿ ಕೆಲವರಿಗೆ ಹಕ್ಕುಪತ್ರ ಕೂಡ ಹಂಚಿಕೆ ಮಾಡಲಾಗಿತ್ತು. ಆದರೆ ಮೌಲಸೌಕರ್ಯ ಕೊರತೆ ಹಿನ್ನೆಲೆಯಲ್ಲಿ ಫ‌ಲಾನುಭವಿಗಳು ಮನೆ ಕಟ್ಟಿಕೊಂಡಿರಲಿಲ್ಲ. ಅದರಲ್ಲೂ ಮೂಲ ದಾಖಲೆಗಳ ಪ್ರಕಾರ ಬೀರಯ್ಯ ಮತ್ತು ಕಾಳಪ್ಪ ಎಂಬುವರ ಹೆಸರಿನಲ್ಲಿದ್ದ ಸರ್ವೇ ನಂಬರ್‌ 205/2ರ 1.39 ಎಕರೆಯನ್ನು ಅಭಿವೃದ್ಧಿಪಡಿಸಿ ಫ‌ಲಾನುಭವಿಗಳಿಗೆ ಅನುಕೂಲ ಮಾಡಿಕೊಡುವುದಾಗಿ ಹಕ್ಕುಪತ್ರಗಳನ್ನು ಪಡೆದ ಡಿ. ಸಾಲುಂಡಿ ಗ್ರಾಮದ ರಾಮೇಗೌಡರ ಮಗ ಮರಪ್ಪ ಎಂಬವರು ಮೂಲ ದಾಖಲೆಗಳನ್ನು ನಾಶಪಡಿಸಿ, ತಮ್ಮ ಹೆಸರಿಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದರು. ಅಲ್ಲಿದ್ದ ಮಣ್ಣು ತೆಗೆದು ಇಟ್ಟಿಗೆ ತಯಾರಿಕೆಗೆ ಬಳಸಿದ್ದರು. ಇದರಿಂದ ಜಮೀನಿನ ಮೂಲ ಮಾಲಕರಾದ ಬೀರಯ್ಯ, ಕಾಳಪ್ಪ ಅವರಿಗೆ ಅನ್ಯಾಯ ಆಗಿತ್ತು. ಆಶ್ರಯ ಯೋಜನೆಯಡಿ ನಿವೇಶನ ಪಡೆದವರಿಗೂ ಅನ್ಯಾಯ ಆಗಿತ್ತು ಎಂದು ಆರೋಪಿಸಲಾಗಿದೆ.

ಸುಳ್ಳು ದಾಖಲೆ ಸೃಷ್ಟಿಸಿದ್ದವರ ಹೆಸರಿಗೆ ಡಿ ನೋಟಿಫೈ
2008ರ ಆ. 10ರಂದು ಅಂದಿನ ಮೈಸೂರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದ ಸಿದ್ದರಾಮಯ್ಯ, ಸರ್ವೇ ನಂಬರ್‌ 205/2ರಲ್ಲಿ 1.39 ಎಕರೆಯು ಡಿ. ಸಾಲುಂಡಿ ಗ್ರಾಮದ ರಾಮೇಗೌಡರ ಮಗ ಮರಪ್ಪ ಎಂಬವರಿಗೆ ಸೇರಿದ್ದು, ಅವರು ಬಹುಕಾಲದಿಂದ ಆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಬಂದಿದ್ದಾರೆ. ಕುಟುಂಬ ನಿರ್ವಹಣೆಗೆ ಸೂಕ್ತ ಆದಾಯವಿಲ್ಲದ ಕಾರಣ ಈ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಒತ್ತಡ ಹೇರಿದ್ದರು. ಈ ಒತ್ತಡಕ್ಕೆ ಮಣಿದ ಅಧಿಕಾರಿಗಳು ಡಿ ನೋಟಿಫಿಕೇಶನ್‌ ಮಾಡಿದ್ದು, ಸಿದ್ದರಾಮಯ್ಯ ಅವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಆಗಬೇಕು ಎಂದು ದಾಖಲೆ ಸಮೇತ ಪತ್ರದಲ್ಲಿ ಉಲ್ಲೇಖೀಸಲಾಗಿದೆ.

Advertisement

ಬಿಜೆಪಿಯಿಂದ ರಾಜಭವನ
ದುರುಪಯೋಗ: ಕೃಷ್ಣಭೈರೇಗೌಡ
ಜನರಿಂದ ಆಯ್ಕೆಯಾದ ಸಂವಿಧಾನಬದ್ಧವಾದ ಸರಕಾರವನ್ನು ಬುಡಮೇಲು ಮಾಡಲು ಹೊಸದಿಲ್ಲಿ ಯಲ್ಲಿ ಸಂಚು ರೂಪಿಸಲಾಗುತ್ತಿದೆ. ಬಿಜೆಪಿಯಿಂದ ರಾಜಭವನ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಆರೋಪಿಸಿದರು. ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, ಏನೇ ತಪ್ಪು ಆಗದ ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರನ್ನು ಸಿಲುಕಿಸಲು ಸಂಚು ಹೂಡುತ್ತಿದ್ದಾರೆ ಎಂದು ದೂರಿದರು.

ರಾಜ್ಯಪಾಲರನ್ನು ಭೇಟಿಯಾದ ಅಬ್ರಹಾಂ
ಬೆಂಗಳೂರು: ಮುಡಾ ಪ್ರಕರಣ ಸಂಬಂಧ ದೂರುದಾರ ಟಿ.ಜೆ. ಅಬ್ರಹಾಂ ಮಂಗಳವಾರ ರಾಜ್ಯಪಾಲರೊಂದಿಗೆ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ಈ ವೇಳೆ ತಮ್ಮ ಮೇಲಿನ ರಾಜ್ಯ ಸರಕಾರದ ಆರೋಪಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ. ತಮ್ಮ ದೂರನ್ನು ಮರು ಪರಿಶೀಲನೆ ನಡೆಸುವಂತೆಯೂ ಮನವಿ ಮಾಡಿದ್ದಾರೆ. ಸಿಎಂ ವಿರುದ್ಧ ಅಭಿಯೋಜನೆಗೆ ರಾಜ್ಯಪಾಲರು ಅನುಮತಿ ಕೊಟ್ಟೇ ಕೊಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next