Advertisement

ಪಾಕ್‌ನಿಂದ ಹೊಸ ವಿಡಿಯೋ ಡ್ರಾಮಾ

06:05 AM Jan 05, 2018 | Team Udayavani |

ನವದೆಹಲಿ: ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್‌ ಜಾಧವ್‌ರನ್ನು ಬಂಧನದಲ್ಲಿಟ್ಟಿರುವ ಪಾಕಿಸ್ತಾನ ಸರ್ಕಾರ ಈಗ ಮತ್ತೂಂದು ನಾಟಕವಾಡಿದೆ. ತನ್ನ ಬಂಧನದಲ್ಲಿರುವ ಜಾಧವ್‌ಗೆ ಯಾವುದೇ ಚಿತ್ರ ಹಿಂಸೆಯನ್ನು ನೀಡಿಲ್ಲವೆಂದು ಜಾಧವ್‌ ಕಡೆಯಿಂದಲೇ ಹೇಳಿಸಿರುವ ವಿಡಿಯೋವೊಂದನ್ನು ಗುರುವಾರ ಬಿಡುಗಡೆ ಮಾಡಿರುವ ಪಾಕಿಸ್ತಾನ, ಪುಕ್ಕಟೆ ಘನತೆ ಪಡೆಯುವ ಮತ್ತೂಂದು ಕೀಳು ಪ್ರಯತ್ನಕ್ಕೆ ಕೈಹಾಕಿದೆ. 

Advertisement

ಕಳೆದ ತಿಂಗಳ 25ರಂದು ತನ್ನ ತಾಯಿ, ಪತ್ನಿಯನ್ನು ಜಾಧವ್‌ ಭೇಟಿ ಮಾಡಿದ ವಿಡಿಯೋಗಳು ಬಹಿರಂಗವಾದಾಗ ಜಾಧವ್‌ಗೆ ಹಿಂಸೆ ನೀಡಿರಬಹುದೆಂದೂ, ಭೇಟಿ ವೇಳೆ ಪಾಕಿಸ್ತಾನದ ರಾಜತಾಂತ್ರಿಕ ಸಿಬ್ಬಂದಿ ಇವರಿಗೆ ತಮ್ಮ ಮಾತೃಭಾಷೆ ಮರಾಠಿಯಲ್ಲಿ ಮಾತನಾಡಲು ಅವಕಾಶ ಕೊಡದೇ ಬೈದರೆಂಬ ವರದಿಗಳು ಬಂದಿದ್ದವು. ಈ ವರದಿಗಳನ್ನು ಅಲ್ಲಗಳೆಯುವ ಉದ್ದೇಶದಿಂದಲೇ ಜಾಧವ್‌ ಅವರ ಹೊಸ ವಿಡಿಯೋವನ್ನು ಪಾಕಿಸ್ತಾನ ಸರ್ಕಾರ ಬಿಡುಗಡೆ ಮಾಡಿದೆ. 

ವಿಡಿಯೋದಲ್ಲೇನಿದೆ? ವಿಡಿಯೋದಲ್ಲಿ ಮಾತನಾಡಿರುವ ಜಾಧವ್‌, “”ನಾನು ನನ್ನ ತಾಯಿ, ಪತ್ನಿಯೊಂದಿಗೆ ಮಾತನಾಡುವಾಗ ಆಕೆಯ ಕಣ್ಣಲ್ಲಿ ಭಯವನ್ನು ನೋಡಿದೆ. ಅವರೇಕೆ ಭಯಪಡಬೇಕು? ಅವರು ಆಲೋಚಿಸಿದಂತೆ ಇಲ್ಲಿ ಯಾರೂ ನನ್ನನ್ನು ಹಿಂಸಿಸಿಲ್ಲ. ಆಗಿದ್ದು ಆಗಿ ಹೋಯಿತು. ಭಯಪಡುವ ಅಗತ್ಯವಿಲ್ಲ. ಆದರೆ, ನನ್ನ ತಾಯಿ, ಪತ್ನಿಯ ಜತೆ ಬಂದಿದ್ದ ಭಾರತದ ರಾಜತಾಂತ್ರಿಕರೊಬ್ಬರು ಅವರಿಬ್ಬರ ಮೇಲೆ ಆಗಾಗ ರೇಗುತ್ತಿದ್ದ” ಎಂದಿದ್ದಾರೆ. “”ತನ್ನ ತಾಯಿ, ಪತ್ನಿಯನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟ ಪಾಕಿಸ್ತಾನಕ್ಕೆ ನಾನು ಕೃತಜ್ಞ” ಎಂದು ತಿಳಿಸಿದ್ದಾರೆ. 

ಭಾರತದ ಪ್ರತಿಕ್ರಿಯೆ 
ಪಾಕಿಸ್ತಾನದ ಈ ವಿಡಿಯೋ ನಾಟಕವನ್ನು ಭಾರತ ಕಟು ಶಬ್ದಗಳಲ್ಲಿ ಖಂಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಇಲಾಖೆ, “”ತಾನೇ ಬರೆದ ಸಂಭಾಷಣೆಯನ್ನು ಜಾಧವ್‌ ಮೂಲಕ ಹೇಳಿಸುವ ಪಾಕಿಸ್ತಾನ ಪ್ರತಿ ಬಾರಿಯೂ ಇಂಥ ಪುಕ್ಕಟೆ ಪ್ರಚಾರಕ್ಕೆ ಕೈ ಹಾಕುತ್ತದೆ. ಇಂಥ ಪ್ರಯತ್ನಗಳಿಗೆ ಯಾವುದೇ ಬೆಲೆಯಿರುವುದಿಲ್ಲ. ಪಾಕ್‌ನಿಂದ ನಾವು ಇದನ್ನು ನಿರೀಕ್ಷಿಸಿದ್ದೆವು. ಅವರು ಎಷ್ಟು ಕೀಳುಮಟ್ಟಕ್ಕೆ ಇಳಿಯಬಲ್ಲರು ಎಂಬುದು ಇದರಿಂದ ಸಾಬೀತಾಗಿದೆ” ಎಂದಿದೆ.

ಬಂಧನವಲ್ಲ, ಅಪಹರಣ: ಭಾರತ ಪುನರುಚ್ಚಾರ
ಜಾಧವ್‌ ಅವರನ್ನು ಇರಾನ್‌ನ ಚಬಾಹರ್‌ ಬಂದರಿನಿಂದ 52 ಕಿ.ಮೀ. ದೂರವಿರುವ ಪ್ರಾಂತ್ಯವಾದ ಸರ್ಬಾಜ್‌ ನಗರದಿಂದ ಜೈಶ್‌-ಉಲ್‌-ಅದ್‌É ಎಂಬ ಉಗ್ರ ಸಂಘಟನೆಯು ಅಪಹರಿಸಿ ಆತನನ್ನು ಪಾಕಿಸ್ತಾನ ಸೇನೆಗೆ ಒಪ್ಪಿಸಿದೆ ಎಂದು ಭಾರತದ ಭದ್ರತಾ ಪಡೆಗಳ ಮೂಲಗಳು ತಿಳಿಸಿರುವುದಾಗಿ ನ್ಯೂಸ್‌ 18 ಹೇಳಿದೆ. ಪಾಕಿಸ್ತಾನದ ಸೇನೆಯೊಂದಿಗೆ ನಂಟು ಹೊಂದಿರುವ ಜೈಶ್‌-ಉಲ್‌-ಅದ್‌É ಸಂಘಟನೆಯ ಪರವಾಗಿ ಮುಲ್ಲಾ ಒಮರ್‌ ಇರಾನಿ ಎಂಬ ಉಗ್ರ ಈ ಅಪಹರಣದ ನೇತೃತ್ವ ವಹಿಸಿದ್ದ ಎಂದೂ ಹೇಳಲಾಗಿದೆ. ಆದರೆ, ಪಾಕಿಸ್ತಾನವು ಬಲೂಚಿಸ್ತಾನದಲ್ಲಿ ಭಾರತದ ಪರ ಗೂಢಚರ್ಯೆ ನಡೆಸುತ್ತಿದ್ದ ಕಾರಣಕ್ಕಾಗಿ ತಾನು ಬಲೂಚಿಸ್ತಾನದಿಂದಲೇ ಜಾಧವ್‌ರನ್ನು ಬಂಧಿಸುವುದಾಗಿ ಹೇಳುತ್ತಾ ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next