Advertisement

ಮೊಹಮ್ಮದ್‌ ವಿರುದ್ಧ ಮತ್ತೊಂದು ಆರೋಪ

12:44 PM Feb 21, 2018 | Team Udayavani |

ಬೆಂಗಳೂರು: ನಗರದ ಪೂರ್ಣಿಮಾ ದಾಸ್‌ ಎಂಬ ಮಹಿಳೆಯೊಬ್ಬರು ಶಾಸಕ ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ಹ್ಯಾರಿಸ್‌ ವಿರುದ್ಧ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ  ಹರಿಹಾಯ್ದಿದ್ದಾರೆ.

Advertisement

ಮೂರು ವರ್ಷದ ಹಿಂದೆ ಪೂರ್ಣಿಮಾ ದಾಸ್‌ ಮೇಲೂ ಮೊಹಮ್ಮದ್‌ ಹಾಗೂ ಸಹಚರರು ಗೂಂಡಾಗಿರಿ ಮಾಡಿದ್ದು, ಈಗ ಪೂರ್ಣಿಮಾ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟಿದ್ದಾರೆ. ಹ್ಯಾರಿಸ್‌ ಪುತ್ರನ ಗುಂಡಾವರ್ತನೆ ಕುರಿತು ಪೊಲೀಸರಿಗೆ ದೂರು ನೀಡಲು ಹೋಗಿದ್ದೆ. ಆಗ ಪೊಲೀಸರು ದೂರು ಸ್ವೀಕರಸದೇ ತಮ್ಮನ್ನು ಒಂದು ಠಾಣೆಯಿಂದ ಒಂದು ಠಾಣೆಗೆ ಅಲೆದಾಡಿಸಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎನ್‌ಜಿಒ ಒಂದರಲ್ಲಿ ಕೆಲಸ ಮಾಡುತ್ತಿದ್ದಾಗ ದಕ್ಷಿಣ ಭಾರತದ ಎನ್‌ಜಿಒ ಕಾನ್ಫರೆನ್ಸ್‌ಗೆ ಹೋಗಿದ್ದೆ. ಅಲ್ಲಿ ಧರ್ಮವೊಂದರ ಪ್ರಚಾರ ಕಾರ್ಯ ಮಾಡಲು ಮುಂದಾಗಿದ್ದರು. ಅನುಮಾನಗೊಂಡು ಪ್ರಶ್ನಿಸಿದ್ದಾಗ ನನ್ನ ಜತೆ ಅಲ್ಲಿದ್ದವರು ಅಸಭ್ಯವಾಗಿ ವರ್ತಿಸಿದರು. ಅಲ್ಲದೆ, ಈ ಕಾರ್ಯಕ್ರಮದಲ್ಲಿ  ಅನ್ಯ ಧರ್ಮದವರಾರೂ ಕುಳಿತುಕೊಳ್ಳಲಾಗದ ಸ್ಥಿತಿ ನಿರ್ಮಾಣವಾಗಿತ್ತು.

ಈ ಬಗ್ಗೆ ನಾನು ದೂರು ನೀಡಲು ಕಬ್ಬನ್‌ ಪಾರ್ಕ್‌ ಮತ್ತು ಹಲಸೂರು ಠಾಣೆಗೆ ಹೋದಾಗ ಅಧಿಕಾರಿಗಳು ಹ್ಯಾರಿಸ್‌ ಮತ್ತು ಮೊಹಮ್ಮದ್‌ ವಿರುದ್ಧ ದೂರು ಸ್ವೀಕರಿಸದೆ ನಿರ್ಲಕ್ಷ್ಯ ತೋರಿದರು ಹಾಗೇ ದೂರಿನ ಪ್ರತಿಯನ್ನು ಹರಿದು ಹಾಕಿದ್ದರು. 

ಅನ್ಯಾಯಕ್ಕೊಳಗಾದ ಮಹಿಳೆಯೊಬ್ಬರು ಠಾಣೆಗೆ ದೂರು ನೀಡಲು ಹೋದಾಗ ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ಅಲೆದಾಡಿಸಿದ ಪೊಲೀಸ್‌ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಪ್ರಶ್ನಿಸಿರುವ ಪೂರ್ಣಿಮಾ, ನಿಮಗೆ ನೈತಿಕತೆ ಇದೆಯಾ ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ. ಅಲ್ಲದೆ ಆ ಸಂದರ್ಭದಲ್ಲಿ ನೆರವಿಗೆ ಬಾರದ ಮಾಧ್ಯಮ ಹಾಗೂ ಹಿಂದೂಪರ ಸಂಘಟನೆಗಳ ವಿರುದ್ಧವೂ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

Advertisement

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ, ವಿಡಿಯೋ ಮೂಲಕ ಪೂರ್ಣಿಮಾ ದಾಸ್‌ ಆರೋಪ ಮಾಡುತ್ತಿದ್ದಾರೆ. ಮೂರು ವರ್ಷದ ಹಿಂದಿನ ಪ್ರಕರಣದ ಬಗ್ಗೆ ನನಗೆ ಮಾಹಿತಿಯಿಲ್ಲ. ಈ ಪ್ರಕರಣದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಲು ಸಾಧ್ಯವಿಲ್ಲ. ನೇರವಾಗಿ ಬಂದು ಪೂರ್ಣಿಮಾ ಅವರೇ ದೂರು ನೀಡಬಹುದು. ದೂರು ಸ್ವೀಕರಿಸುತ್ತೇವೆ. ಅವರು ಮಾತ್ರವಲ್ಲ ನೊಂದ ಯಾವುದೇ ವ್ಯಕ್ತಿ ದೂರು ನೀಡಿದರೂ ಠಾಣೆಯಲ್ಲಿ ದಾಖಲಿಸಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next