ಗದಗ: ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಕಾರೊಂದು ಮತ್ತೂಂದು ಕಾರಿನ ಮೇಲೆ ಬಿದ್ದಿದ್ದರಿಂದ ಆರು ಜನರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ನಗರದ ಹೊರವಲಯದಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದೆ.
ಧಾರವಾಡ ನಗರದ ಹೆಬ್ಬಳ್ಳಿ ಅಗಸಿಯ ಆನಂದ ಬೆಟಗೇರಿ(28), ಅರುಣ ಬೆಟಗೇರಿ(26), ಸಿದ್ದು(26), ಮನೋಜ ಕುಮಾರ್(27), ಚನ್ನು(26), ಅಮೃತ(27) ಮೃತ ದುರ್ದೈವಿಗಳು. ಗದಗ ನಿವಾಸಿಗಳಾದ ಮಂಜುನಾಥ ಹಳ್ಳಿಕೇರಿ, ವಿರೂಪಾಕ್ಷಪ್ಪ ಅಬ್ಬಿಗೇರಿ, ವಿಶ್ವನಾಥ ಕೆರೂರ ಗಾಯಗೊಂಡಿದ್ದಾರೆ.
ಆನಂದ್ ಬೆಟಗೇರಿ ಸೇರಿ ಆರು ಮಂದಿ ಸ್ನೇಹಿತರು ಗದಗಿನಲ್ಲಿ ನಡೆಯಲಿದ್ದ ಸ್ನೇಹಿತನ ಮದುವೆಗೆ ಆಗಮಿಸಿದ್ದರು. ಈ ವೇಳೆ ಭಾನವಾರ ಬೆಳಗಿನ ಜಾವ ಐ10 ಕಾರಿನಲ್ಲಿ ಕೊಪ್ಪಳ ಮಾರ್ಗವಾಗಿ ತೆರಳುತ್ತಿದ್ದರು. ಇದೇ ವೇಳೆ ಅಡವಿಸೋಮಾಪುರದಿಂದ ಗದಗ ಕಡೆ ಆಗಮಿಸುತ್ತಿದ್ದ ಐ20 ಕಾರು ಏಕಾಏಕಿ ರಿಂಗ್ ರೋಡ್‌ನಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದರಿಂದ ಸಿನಿಮೀಯ ರೀತಿಯಲ್ಲಿ ಕಾರು ಪುಟಿದು ಐ10 ಕಾರಿನ ಮೇಲೆ ಬಿದ್ದಿದೆ. ಪರಿಣಾಮ ಎರಡೂ ಕಾರುಗಳು ನಜ್ಜುಗುಜ್ಜಾಗಿದ್ದು, ಧಾರವಾಡದಿಂದ
ತೆರಳುತ್ತಿದ್ದವರೆಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಮೂವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಪೈಕಿ ಮಂಜುನಾಥ ಮತ್ತು ವಿಶ್ವನಾಥ ಅವರ ಸ್ಥಿತಿ ಚಿಂತಾಜನಕವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ. ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.