Advertisement

ಏಳು ತಿಂಗಳಲ್ಲಿ ಎರಡನೇ ದುರ್ಘ‌ಟನೆ; ಸುರಕತೆಯತ್ತ ನಿರ್ಲಕ್ಷ್ಯ 

10:59 AM Mar 28, 2019 | Team Udayavani |
ಮಹಾನಗರ : ನಗರದ ಚಿಲಿಂಬಿಯಲ್ಲಿ ಲಿಫ್ಟ್‌ನೊಳಗೆ ಸಿಲುಕಿ ಎಂಟು ವರ್ಷದ ಬಾಲಕನೋರ್ವ ಬುಧವಾರ ಮೃತಪಟ್ಟಿದ್ದಾನೆ. ಇದು ಏಳು ತಿಂಗಳುಗಳ ಅಂತರದಲ್ಲಿ ನಗರದಲ್ಲಿ ಸಂಭವಿಸಿದ ಎರಡನೇ ದುರ್ಘ‌ಟನೆ. ಚಿಲಿಂಬಿಯ ಭಾರತಿ ಹೈಟ್ಸ್‌ ಅಪಾರ್ಟ್‌ಮೆಂಟ್‌ ನಲ್ಲಿ ವಾಸವಿರುವ ಬಾಗಲಕೋಟೆ ಹೂವಿನಹಳ್ಳಿಯ ನೀಲಪ್ಪ-ಪಾರ್ವತಿ ದಂಪತಿಯ ಪುತ್ರ ಮಂಜುನಾಥ ಮೃತಪಟ್ಟಾತ. ನೀಲಪ್ಪ ಅವರು ಅಪಾರ್ಟ್‌ಮೆಂಟ್‌ನ ವಾಚ್‌ಮನ್‌ ಆಗಿದ್ದರೆ, ಪಾರ್ವತಿ ಅಪಾರ್ಟ್‌ಮೆಂಟ್‌ ನಲ್ಲೇ ಶುಚಿತ್ವದ ಕೆಲಸ ಮಾಡುತ್ತಿದ್ದಾರೆ.
ಅಪಾರ್ಟ್‌ಮೆಂಟ್‌ನ ತಳಮಹಡಿಯಲ್ಲಿ ನೀಲಪ್ಪ ಅವರ ಮನೆ ಇದ್ದು, ಬುಧವಾರ ಪಾರ್ವತಿ ಮೇಲಿನ ಮಹಡಿಗಳಲ್ಲಿ ಶುಚಿತ್ವ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ, ಬಾಲಕ ತಾಯಿ ಇದ್ದಲ್ಲಿಗೆ ತೆರಳಲು ಲಿಫ್ಟ್‌ ಹತ್ತಿದ್ದು, ಲಿಫ್ಟ್‌ ಜಾಮ್‌ ಆಗಿದೆ. ಸನಿಹದಲ್ಲೇ ಇದ್ದ ಸಹೋದರಿ ಭಾಗ್ಯಾ ತತ್‌ಕ್ಷಣ ತಾಯಿ ಮತ್ತಿತರರಿಗೆ ವಿಷಯ ತಿಳಿಸಿದ್ದಾರೆ. ಬಾಲಕ ಹೊರಬರಲು ಪ್ರಯತ್ನಿಸಿದ್ದನಾದರೂ ಸಾಧ್ಯವಾಗಿಲ್ಲ. ಲಿಫ್ಟ್‌ನ ಬಾಗಿಲುಗಳ ನಡುವೆ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ಅಪಾರ್ಟ್‌ಮೆಂಟ್‌ ನಿವಾಸಿಗಳು ಹೇಳುತ್ತಾರೆ. ಆದರೆ, ಘಟನೆ ಹೇಗಾಯಿತು ಎಂಬ ಬಗ್ಗೆ ಯಾರಿಗೂ ಸ್ಪಷ್ಟ ಮಾಹಿತಿ ಇಲ್ಲ. ನೀಲಪ್ಪ ಅವರ ತಾಯಿ ಅನಾರೋಗ್ಯದ ಹಿನ್ನೆಲೆಯಲ್ಲಿ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಾಗಿದ್ದು, ಘಟನೆ ವೇಳೆ ನೀಲಪ್ಪ ಆಸ್ಪತ್ರೆಗೆ ಹೋಗಿದ್ದರು.
2018ರ ಆಗಸ್ಟ್‌ ತಿಂಗಳಿನಲ್ಲಿ ನಗರದ ಫಳ್ನೀರಿನ ಬಹುಮಹಡಿ ಕಟ್ಟಡವೊಂದರಲ್ಲಿ ಏಳು ವರ್ಷದ ಬಾಲಕನೋರ್ವ ಲಿಫ್ಟ್‌ ಬಾಗಿಲಿನಲ್ಲಿ ಸಿಲುಕಿ ಮೃತಪಟ್ಟಿದ್ದ. ಇದೀಗ ಚಿಲಿಂಬಿಯಲ್ಲಿ ಎಂಟು ವರ್ಷದ ಬಾಲಕ ಲಿಫ್ಟ್‌ ಬಾಗಿಲಿನಲ್ಲಿ ಸಿಲುಕಿ ಮೃತಪಟ್ಟಿರುವುದರೊಂದಿಗೆ ಏಳೇ ತಿಂಗಳಿನಲ್ಲಿ ಇಬ್ಬರು ಮಕ್ಕಳನ್ನು ಲಿಫ್ಟ್‌ ಬಲಿ ಪಡೆದುಕೊಂಡಿದೆ. ಎರಡೂ ಘಟನೆಗಳಿಗೆ ಸ್ಪಷ್ಟ ಕಾರಣವೇನು ಎಂಬುದು ತಿಳಿದು ಬಂದಿಲ್ಲವಾದರೂ ಹಳೆ ಲಿಫ್ಟ್‌ಗಳನ್ನು ಹಲವು ವರ್ಷಗಳಿಂದ ಚಾಲೂ ಮಾಡುತ್ತಿರುವುದು, ಸರಿಯಾಗಿ ತಪಾಸಣೆ ಮಾಡದಿರುವುದು, ಲಿಫ್ಟ್‌ ಆಪರೇಟರ್‌ ಗಳು ಇಲ್ಲದಿರುವುದು, ತಾಂತ್ರಿಕ ದೋಷ ಮತ್ತು ಸ್ವಯಂ ನಿರ್ಲಕ್ಷ್ಯದ ಕಾರಣಗಳಿಂದಾಗಿ ಅವಘಡಗಳು ಸಂಭವಿಸುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ. ಆದರೆ, ಬುಧವಾರ ಘಟನೆ ಸಂಭವಿಸಿದ ಲಿಫ್ಟ್‌ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ನಿರ್ವಹಣೆಯಲ್ಲೂ ಯಾವುದೇ ಲೋಪ ಇರಲಿಲ್ಲ ಎಂದು ನಿವಾಸಿಗಳು ಹೇಳುತ್ತಾರೆ.
ಈ ಹಿಂದೆ 2010ರ ಆಗಸ್ಟ್‌ 8ರಂದು ಕಂಕನಾಡಿಯ ಕಟ್ಟಡವೊಂದರಲ್ಲಿ ಸಂಭವಿಸಿದ ಲಿಫ್ಟ್‌ ಅವಘಡದಲ್ಲಿ 24 ವರ್ಷದ ಯುವಕನೋರ್ವ ಮೃತಪಟ್ಟಿದ್ದ. 2 ವರ್ಷಗಳ ಹಿಂದೆ ಕಂಕನಾಡಿಯಲ್ಲಿ ಲಿಫ್ಟ್‌ನೊಳಗೆ ಸಿಲುಕಿದ ವ್ಯಕ್ತಿಯೋರ್ವರು ಅದೃಷ್ಟವಶಾತ್‌ ಬದುಕುಳಿದಿದ್ದರು.
ಸುದಿನ’ ಎಚ್ಚರಿಸಿತ್ತು
ನಗರದ ಕೆಲವು ಮಾಲ್‌ಗ‌ಳು, ಹೊಟೇಲ್‌ಗ‌ಳು, ಬಹು ಮಹಡಿ ಕಟ್ಟಡಗಳಲ್ಲಿ ಲಿಫ್ಟ್‌ ಆಪರೇಟರ್‌ ಗಳೇ ಇಲ್ಲ. ಅಲ್ಲದೆ ಸರಿಯಾದ ನಿರ್ವಹಣೆಯೂ ಆಗುತ್ತಿಲ್ಲ. ಇದರಿಂದ ಆಗಾಗ ಇಂತಹ ಅವಘಡಗಳು ಸಂಭವಿಸತ್ತಲೇ ಇವೆ. ಈ ಬಗ್ಗೆ ಉದಯವಾಣಿ-ಸುದಿನ ಈ ಹಿಂದೆಯೇ ವರದಿ ಪ್ರಕಟಿಸಿ ಎಚ್ಚರಿಸಿತ್ತು.
ಕಾನೂನು ಪ್ರಕಾರ ಅಪಾರ್ಟ್‌ಮೆಂಟ್‌ಗಳಲ್ಲಿ ಲಿಫ್ಟ್‌ ಆಪರೇಟರ್‌ಗಳು ಇರಬೇಕಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಅದೆಷ್ಟೋ ಮಂದಿಗೆ ಲಿಫ್ಟ್‌ನಲ್ಲಿ ತೆರಳುವುದು ಹೇಗೆ, ಅಪಾಯ ಎದುರಾದಾಗ ಏನು ಮಾಡಬೇಕೆಂದು ತಿಳಿದಿರುವುದಿಲ್ಲ. ಹೀಗಾಗಿ ಲಿಫ್ಟ್‌ ಆಪರೇಟರ್‌ ಗಳನ್ನು ನೇಮಿಸುವುದು ಅವಶ್ಯ ಎನ್ನುತ್ತಾರೆ ಅಪಾರ್ಟ್ ಮೆಂಟ್‌ ನಿವಾಸಿಗಳು.
ಗುರುವಾರ ಕೊನೆಯ ಪರೀಕ್ಷೆ!
ಗುರುವಾರ ಎಂಟನೇ ತರಗತಿಯ ಕೊನೆಯ ವಾರ್ಷಿಕ ಪರೀಕ್ಷೆಯಾಗಿತ್ತು. ಅದಕ್ಕಾಗಿ ಅವಘಡಕ್ಕೆ ಸ್ವಲ್ಪ ಮುಂಚೆ ತನ್ನ ಮನೆಯ ಬಳಿ ಹುಡುಗ ಓದುವುದರಲ್ಲಿ ಮಗ್ನನಾಗಿದ್ದ. ಈ ವೇಳೆ ಪರಿಚಿತರೋರ್ವರು ಓದಿನ ಬಗ್ಗೆ ವಿಚಾರಿಸಿದಾಗ ನಾಳೆ ಕೊನೆಯ ಪರೀಕ್ಷೆ ಎಂದಿದ್ದ.
ಎಲ್ಲರ ಪ್ರೀತಿ ಗಳಿಸಿದ್ದ
ಮೃತ ಬಾಲಕ ಮಂಜುನಾಥ್‌ ಅಪಾರ್ಟ್‌ಮೆಂಟ್‌ನ ಎಲ್ಲರ ಪ್ರೀತಿ ಗಳಿಸಿದ್ದ. ಏನೇ ಕೆಲಸ ಹೇಳಿದರೂ ತಪ್ಪದೇ ಮಾಡುತ್ತಿದ್ದ. ಹೆತ್ತವರ ಕೆಲಸದಲ್ಲಿ ಸದಾ ನೆರವಾಗುತ್ತಿದ್ದ. ಸಾವನ್ನಪ್ಪುವುದಕ್ಕೆ ಐದು ನಿಮಿಷ ಮೊದಲು ಅಪಾರ್ಟ್‌ಮೆಂಟ್‌ ನಿವಾಸಿಯೊಬ್ಬರಿಗೆ ಜ್ಯೂಸ್‌ ತಂದು ಕೊಟ್ಟಿದ್ದ ಎಂದು ಕಣ್ಣೀರಿಡುತ್ತಾರೆ ಅಪಾರ್ಟ್‌ಮೆಂಟ್‌ ನಿವಾಸಿಗಳು. ಕಲಿಕೆಯಲ್ಲೂ ಮುಂಚೂಣಿಯಲ್ಲಿದ್ದ ಬಾಲಕ, ಉರ್ವ ಕೆನರಾ ಆಂಗ್ಲ ಮಾ. ಶಾಲೆಯಲ್ಲಿ ಎರ ಡ ನೇ ತರಗತಿ ಓದುತ್ತಿದ್ದ. ಇದೀಗ ಬಾಲಕನ ಸಾವಿನಿಂದ ಇಡೀ ಅಪಾರ್ಟ್‌ ಮೆಂಟ್‌ ನಿವಾಸಿಗಳು ದುಃಖತಪ್ತರಾಗಿದ್ದಾರೆ.
ಹಲವು ಬಾರಿ ಎಚ್ಚರಿಸಿದ್ದೆವು
ಭಾರತಿ ಹೈಟ್ಸ್‌ ಅಪಾರ್ಟ್‌ಮೆಂಟ್‌ ನಲ್ಲಿ ಒಟ್ಟು ಮೂರು ಮಹಡಿಗಳಿವೆ. ಇಲ್ಲಿ ಮಂಜುನಾಥನೇ ಅತೀ ಚಿಕ್ಕವ. ಮಕ್ಕಳಿಗೆ ಲಿಫ್ಟ್‌ ಬಳಕೆ ಬಗ್ಗೆ ಗೊತ್ತಿಲ್ಲವಾದ್ದರಿಂದ ಲಿಫ್ಟ್ ನಲ್ಲಿ ಹೋಗಬೇಡಿ, ಮೆಟ್ಟಿಲನ್ನೇ ಬಳಸಿ ಎಂದು ಹಲವು ಬಾರಿ ಅಪಾರ್ಟ್ ಮೆಂಟ್‌ ನಿವಾಸಿಗಳು ಎಚ್ಚರಿಸಿದ್ದಾರೆ. ಆದಾಗ್ಯೂ ಮಕ್ಕಳು ಲಿಫ್ಟ್‌ನ್ನೇ ಬಳಸುತ್ತಿದ್ದರು ಎನ್ನುತ್ತಾರೆ ಅಲ್ಲಿನ ನಿವಾಸಿಯೋರ್ವರು.
ವಿಶೇಷ ವರದಿ
Advertisement

Udayavani is now on Telegram. Click here to join our channel and stay updated with the latest news.

Next