ಬೆಂಗಳೂರು: ಆ್ಯಂಬಿಡೆಂಟ್, ಐಎಂಎ ಬಹುಕೋಟಿ ವಂಚನೆ ಪ್ರಕರಣಗಳ ಮಾದರಿಯಲ್ಲಿಯೇ ಅಧಿಕ ಲಾಭಾಂಶದ ಆಮಿಷವೊಡ್ಡಿ ಗ್ರಾಹಕರಿಂದ ಹಣ ಸಂಗ್ರಹಿಸಿ ಮತ್ತೂಂದು ಕಂಪನಿ ವಂಚಿಸಿರುವುದು ಪತ್ತೆಯಾಗಿದೆ.
ಆರಂಭದಲ್ಲಿ ಶೇ 7ರಷ್ಟು ಲಾಭಾಂಶ!: ಟಿಫಾರ್ಫ್ ಕಂಪನಿಯ ಬಗ್ಗೆ ನಮ್ಮ ಸಹೋದರನಿಂದ ಮಾಹಿತಿ ಗೊತ್ತಾಗಿದ್ದು ಆತನಿಗೆ 1ಲಕ್ಷ ರೂಗಳಿಗೆ ಶೇ 7 ರಷ್ಟು ಲಾಭಾಂಶ ನೀಡಿದ್ದರು. ಅದನ್ನು ನಂಬಿ ನಾನು ನನ್ನ ಕುಟುಂಬ ಒಟ್ಟು 36 ಲಕ್ಷ ರೂ.ಗಳನ್ನು 2017ರಲ್ಲಿ ಹೂಡಿಕೆ ಮಾಡಿದ್ದೆವು. ಆರಂಭದಲ್ಲಿ ಶೇ. 4 ಲಾಭಾಂಶ ನೀಡಿದ್ದರು. ಆದರೆ, ಕಳೆದ 9 ತಿಂಗಳಿನಿಂದ ಲಾಭಾಂಶ ನೀಡದೆ ಏಕಾಏಕಿ ಕಂಪನಿ ಮುಚ್ಚಿದ್ದರು. ಹೀಗಾಗಿ ಹಣ ವಾಪಾಸ್ ನೀಡುವಂತೆ ಕೇಳಿದರೆ ಕೊಡುತ್ತೇವೆ ಎಂದು ನಂಬಿಸುತ್ತಲೇ ಇದ್ದರು ಆದರೆ ಕಡೆಗೂ ಕೊಟ್ಟಿಲ್ಲ ಎಂದು ದೂರುದಾರ ಸೈಯದ್‌ಖಲೀಲ್ ಅಹ್ಮದ್ ‘ ಉದಯವಾಣಿ’ಗೆ ತಿಳಿಸಿದರು.
ಪೊಲೀಸರಿಗೆ ದೂರು ನೀಡಿದರೆ ಹಣ ವಾಪಾಸ್ ನೀಡುವುದಿಲ್ಲ ಎಂದು ಬೆದರಿಕೆ ಒಡ್ಡಲಾಗಿತ್ತು. ನಮ್ಮಂತೆಯೇ ನೂರಾರು ಮಂದಿ ಹೂಡಿಕೆ ಮಾಡಿದ್ದು, ಅವರೂ ಅವರ ಬೆದರಿಕೆಗೆ ಹೆದರಿದ್ದರು. ಐಎಂಎ ವಂಚನೆ ಬಳಿಕ ಆರೋಪಿಗಳು ಪುನ: ಸಿಕ್ಕಿರಲಿಲ್ಲ. ಹೀಗಾಗಿ ಅಂತಿಮವಾಗಿ ದೂರು ನೀಡಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
Advertisement
ಟಿಫಾರ್ಫ್ ಟ್ರೇಡಿಂಗ್ ಸರ್ವೀಸ್ ಹೆಸರಿನ ಕಂಪನಿ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿದೆ ಎಂದು ಆರೋಪಿಸಿರುವ ಗ್ರಾಹಕರು ತಿಲಕ್ ನಗರ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಾರೆ. ಕಂಪನಿಯಿಂದ ಮೋಸ ಹೋದ ಆಂಧ್ರಮೂಲದ ಸೈಯದ್ ಖಲೀದ್ ಅಹ್ಮದ್ ನೀಡಿರುವ ದೂರಿನ ಅನ್ವಯ, ಟಿಫಾರ್ಫ್ ಟ್ರೇಡಿಂಗ್ ಸರ್ವೀಸ್‌ನ ನಿರ್ದೇಶಕರುಗಳಾದ ಹಬೀಬುಲ್ಲಾ ಷರೀಫ್, ಆತನ ಸಂಬಂಧಿ ಮಸೀವುಲ್ಲಾ ಷರೀಫ್, ಫಹಾದ್, ಮಂಜುನಾಥ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವರ್ಷದ ಹಿಂದೆಯೇ ಕಂಪನಿಗೆ ಬೀಗ:
ಜಯನಗರದ 9ನೇ ಬ್ಲಾಕ್‌ನಲ್ಲಿರುವ ಟಿಫಾರ್ಫ್ ಟ್ರೇಡಿಂಗ್ ಸರ್ವೀಸ್ ಕಂಪನಿಯ ಕಚೇರಿ ವರ್ಷದ ಹಿಂದೆಯೇ ಮುಚ್ಚಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಾಲ್ವರು ಆರೋಪಿಗಳು ಕೂಡ ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಕ್ರಮವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಟಿಫಾರ್ಫ್ ಟ್ರೇಡಿಂಗ್ ಸರ್ವೀಸ್ ಕಂಪನಿ ವಂಚಿಸಿದೆ ಎಂದು ಆರೋಪಿಸಿ ಇದುವರೆಗೂ ನಾಲ್ಕು ದೂರುಗಳು ಬಂದಿದ್ದು, ಪ್ರಕರಣ ದಾಖಲಿಸಲಾಗಿದೆ. ಇದುವರೆಗೂ 36 ಲಕ್ಷ ರೂ. ವಂಚಿಸಿದೆ ಎಂಬುದು ಗೊತ್ತಾಗಿದೆ. ಈ ಪ್ರಮಾಣ ಇನ್ನೂ ಹೆಚ್ಚಿರುವ ಸಾಧ್ಯತೆಯಿದೆ. ತನಿಖೆ ಮುಂದುವರಿಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ದೂರು ನೀಡಬಹುದು!:
ಟಿಫಾರ್ಫ್ ಟ್ರೇಡಿಂಗ್ ಸರ್ವೀಸ್ ಕಂಪನಿಯಿಂದ ವಂಚನೆಗೊಳಗಾದ ಸಾರ್ವಜನಿಕರ ದೂರು ನೀಡಿದರೆ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.