Advertisement

ಭಾರತದಿಂದ ಮತ್ತೂಂದು ದಾಳಿ: ಪಾಕಿಸ್ಥಾನ ಆತಂಕ

11:54 PM Apr 07, 2019 | Team Udayavani |

ಇಸ್ಲಾಮಾಬಾದ್‌: ಗುಮ್ಮನ ಭೀತಿಯಿಂದಾಗಿ ಕನಸಿನಲ್ಲಿ ಬೆಚ್ಚಿಬೀಳುವ ಮಕ್ಕಳಂತೆ, ಬಾಲಕೋಟ್‌ ದಾಳಿಯ ನಂತರ ಪದೇ ಪದೆ ಭಾರತದತ್ತ ಬೊಟ್ಟು ಮಾಡಿ ಬೊಬ್ಬಿಡುತ್ತಿರುವ ಪಾಕಿಸ್ಥಾನದ ವಿದೇಶಾಂಗ ಸಚಿವ ಮೊಹಮ್ಮದ್‌ ಖುರೇಷಿ ಈಗ ಅಂಥದ್ದೇ ಮತ್ತೂಂದು ಭೀತಿಯನ್ನು ಹೊರಹಾಕಿದ್ದಾರೆ.
ಮುಲ್ತಾನ್‌ನಲ್ಲಿ ರವಿವಾರ ಮಾತನಾಡಿದ ಅವರು, ಇದೇ ತಿಂಗಳ 16ರಿಂದ 20ರೊಳಗಾಗಿ ಪಾಕಿಸ್ಥಾನದ ಮೇಲೆ ಭಾರತ ಮತ್ತೂಂದು ಸರ್ಜಿಕಲ್‌ ಸ್ಟ್ರೈಕ್‌ ನಡೆಸಲು ಯೋಜಿಸಿದೆ. ಅದಕ್ಕೆ ಪೂರಕವಾದ ಸಿದ್ಧತೆಗಳು ಸಾಗುತ್ತಿವೆ. ಭಾರತ ಹೊಂದಿರುವ ಪಾಕ್‌ ವಿರೋಧಿ ಧೋರಣೆಯನ್ನು ಮತ್ತಷ್ಟು ಪ್ರಚುರ ಪಡಿಸಲು ಹಾಗೂ ಇಸ್ಲಾಮಾಬಾದ್‌ ಮೇಲೆ ಮತ್ತಷ್ಟು ಅಂತಾರಾಷ್ಟ್ರೀಯ ಒತ್ತಡವನ್ನು ಹೇರಲು ಭಾರತ ಮತ್ತೂಂದು ಸರ್ಜಿಕಲ್‌ ಸ್ಟ್ರೈಕ್‌ ನಡೆಸುವ ಬಗ್ಗೆ ಗುಪ್ತಚರ ಮಾಹಿತಿಯಿದೆ” ಎಂದು ತಿಳಿಸಿದ್ದಾರೆ.

Advertisement

ಅಸಂಬದ್ಧ ಹೇಳಿಕೆ: ಖುರೇಷಿ ಹೇಳಿಕೆಯನ್ನು ತಳ್ಳಿಹಾಕಿರುವ ಭಾರತ “ಇದೊಂದು ಬೇಜವಾಬ್ದಾರಿಯುತ ಹಾಗೂ ಅಸಂಬದ್ಧ ಹೇಳಿಕೆ’ ಎಂದು ಬಣ್ಣಿಸಿದೆ. ಇದು ಈ ಪ್ರದೇಶದಲ್ಲಿ ಯುದ್ಧ ಭೀತಿ ಹುಟ್ಟಿಸಲು ಪಾಕಿಸ್ಥಾನ ಮಾಡುತ್ತಿರುವ ಕುತಂತ್ರ ಎನ್ನುವುದು ಸ್ಪಷ್ಟ . ಅಲ್ಲದೆ, ಪಾಕ್‌ ಮೂಲದ ಭಯೋತ್ಪಾದಕರಿಗೆ ಭಾರತದ ಮೇಲೆ ದಾಳಿ ನಡೆಸುವಂತೆ ನೀಡುತ್ತಿರುವ ಕರೆಯೂ ಇದಾಗಿರಬಹುದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ಕಿಡಿಕಾರಿದ್ದಾರೆ.

370ನೇ ಕಲಂ ರದ್ದತಿಗೆ ಸಮ್ಮತಿಯಿಲ್ಲ: ಕಾಶ್ಮೀರದಲ್ಲಿ ಭಾರತದ ಸಂವಿಧಾನದ 370ನೇ ಕಲಂ ರದ್ದುಗೊಳಿಸಲು ಪಾಕಿಸ್ಥಾನ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಪಾಕ್‌ ವಿದೇಶಾಂಗ ಇಲಾಖೆ ವಕ್ತಾರ ಮೊಹಮ್ಮದ್‌ ಫೈಸಲ್‌ ಹೇಳಿದ್ದಾರೆ. ಭಾರತದ ಈ ಕ್ರಮ ವಿಶ್ವಸಂಸ್ಥೆಯ ನಿಲುವಳಿಯ ಉಲ್ಲಂಘನೆಯಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next