ಕಾಸರಗೋಡು: ಜಿಲ್ಲೆಯ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳ 2019-20ರ ವಾರ್ಷಿಕ ಯೋಜನೆ ದಾಖಲೆಗಳಲ್ಲಿ ಬದಲಾವಣೆ ನಡೆಸಲಾಗಿದೆ.
ಈ ಯೋಜನೆಗಳಲ್ಲಿ ಟೆಂಡರ್ ಕ್ರಮ ಪೂರ್ತಿಗೊಳಿಸಿ ಅಗ್ರಿಮೆಂಟ್ ನಡೆಸಿ ತತ್‌ಕ್ಷಣ ನಿರ್ವಹಣೆ ಆರಂಭಿಸಲು ನಿರ್ಧರಿಸಲಾಗಿದೆ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಯೋಜನೆ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ. ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಹರಿತ ಕೇರಳಂ ಮಿಷನ್ ಮುಖಾಂತರ ಜಿಲ್ಲೆಯಲ್ಲಿ ಜಾರಿಗೊಳಿಸುವ ಹರಿತ ಮುಟ್ಟಂ (ಹಸುರು ಅಂಗಳ), ಪೆನ್ ಫ್ರೆಂಡ್, ಪಚ್ಚ ತುರುತ್ (ಹಸುರು ದ್ವೀಪ) ಇತ್ಯಾದಿ ಯೋಜನೆಗಳನ್ನು ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲೂ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಕಾಂಞಂಗಾಡ್ ನಗರಸಭೆಯ ಅಯ್ಯಂಗಾಳಿ ನಗರ ನೌಕರಿ ಖಾತರಿ ಯೋಜನೆಯ ಕ್ರಿಯಾ ಯೋಜನೆ, ಕಾರ್ಮಿಕ ಮುಂಗಡಪತ್ರ ಇತ್ಯಾದಿಗಳಿಗೆ ಅಂಗೀಕಾರ ನೀಡ ಲಾಯಿತು. ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು ಆಯಾ ಸಂಸ್ಥೆಗಳ ಯೋಜನೆ ಮಾಹಿತಿಗಳನ್ನು ಪ್ರಸ್ತುತಗೊಳಿಸಿದರು.
ಡೆಪ್ಯುಟಿ ಡಿಸ್ಟ್ರಿಕ್ಟ್ ಪ್ಲಾನಿಂಗ್ ಆಫೀಸರ್ ಸಾಬು ಸಿ. ಮ್ಯಾಥ್ಯೂ, ಯೋಜನೆ ಸಮಿತಿಯ ಸರಕಾರಿ ನಾಮಿನಿ ಕೆ. ಬಾಲಕೃಷ್ಣನ್, ಜಿಲ್ಲಾ ಯೋಜನೆ ಸಮಿತಿ ಸದಸ್ಯರಾದ ಹರ್ಷಾದ್, ಡಾ| ವಿ.ಪಿ.ಪಿ. ಮುಸ್ತಫ, ಇ. ಪದ್ಮಾವತಿ, ಫರೀದಾ ಝಕೀರ್ ಅಹಮ್ಮದ್, ಮುಂತಾಝ್ ಝಮೀರ, ಪುಷ್ಪಾ ಅಮೆಕ್ಕಳ, ಷಾನವಾಝ್ ಪಾದೂರು, ಎ.ಎ.ಜಲೀಲ್, ಸಹಾಯಕ ಜಿಲ್ಲಾಧಿಕಾರಿ ಪಿ.ಆರ್. ರಾಧಿಕಾ, ಗ್ರಾಮ ಪಂಚಾಯತ್ ಅಧ್ಯಕ್ಷರು, ಕಾರ್ಯ ದರ್ಶಿಗಳು ಮೊದಲಾದವರು ಉಪಸ್ಥಿತರಿದ್ದರು.