Advertisement

ಅಂಧೇರಿ ಶ್ರೀ ಮದ್ಭಾರತ ಮಂಡಳಿಯ ವಾರ್ಷಿಕ ಮಂಗಳ್ಳೋತ್ಸವ ಧಾರ್ಮಿಕ ಸಭೆ

12:42 PM Feb 26, 2019 | Team Udayavani |

ಮುಂಬಯಿ: ಮೊಗವೀರ ಸಮಾಜದ ಹಿರಿಯರು ಮುಂಬಯಿಯಲ್ಲಿ ಸಮಾಜಪರ ಕಾರ್ಯಗಳನ್ನು ಮಾಡುತ್ತಾ ಸಂಘಟನೆ ಗಳನ್ನು ಸ್ಥಾಪಿಸಿ ತುಳು-ಕನ್ನಡಿಗರ ಹಿರಿಯ ಸಂಸ್ಥೆಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಅಭಿಮಾನದ ಸಂಗತಿಯಾಗಿದೆ. ಮೊಗವೀರ ಸಮಾಜ ದವರು ಒಗ್ಗಟ್ಟಾಗಿ ಸ್ವಾಭಿಮಾನದ ಬದುಕನ್ನು ಹೊಂದಿದವರು. ಸಮಾಜಪರ ಕಾರ್ಯಗಳಲ್ಲಿ ಸದಾ ಉತ್ಸಾಹಿಗಳಾಗಿರುವ ಇವರು ಎಲ್ಲರಿಗೂ ಮಾದರಿಯಾದವರು. ಪ್ರಸ್ತುತ ಮದ್ಭಾರತ ಮಂಡಳಿಗಳಂತಹ ಸಂಘಟನೆಗಳಲ್ಲಿ ಯುವ ಜನತೆ ಮುತುವರ್ಜಿಯಿಂದ ಕಾರ್ಯ ನಿರ್ವಹಿಸಿ ಮುಂದಿನ ಯೋಜನೆಗಳಿಗೆ ಕೈಜೋಡಿಸಬೇಕು ಎಂದು ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ನುಡಿದರು.

Advertisement

ಫೆ. 24ರಂದು ಪೂರ್ವಾಹ್ನ ಅಂಧೇರಿ ಪಶ್ಚಿಮದ ಶ್ರೀ ಮದ್ಭಾರತ ಮಂಡಳಿ ಮುಂಬಯಿ ಇದರ ಸಂಚಾಲಕತ್ವದ ಶ್ರೀ ಲಕ್ಷ್ಮೀನಾರಾಯಣ ಮಂದಿರದ 141ನೇ ಸಮಾಪ್ತಿ ಮಂಗಳ್ಳೋತ್ಸವ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಹಿರಿಯ ಸಂಸ್ಥೆಯಾದ ಮದ್ಭಾರತ ಮಂಡಳಿಯ ಶ್ರೀ ಲಕ್ಷ್ಮೀನಾರಾಯಣ ಮಂದಿರದ ಜೀರ್ಣೋದ್ಧಾರ ಮತ್ತು ಸಭಾ ಭವನ ನಿರ್ಮಾಣದಲ್ಲಿ ಎಲ್ಲರೂ ಒಂದಾಗಿ ಈ ಮಹತ್ಕಾರ್ಯಯಲ್ಲಿ ಸಹಕರಿಸಬೇಕು. ಮೊಗವೀರ ಸಮಾಜದ ಅನೇಕ ಮಹಾನೀಯರು, ದಾನಿಗಳು ಒಂದಾಗಿ ಈ ಬಗ್ಗೆ ವಿಚಾರ ವಿನಿಮಯ ನಡೆಸಿದಾಗ ಈ ಯೋಜನೆ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ. ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ದೇವರ  ಅನುಗ್ರಹ ಪಡೆದಿರುವುದು ನನಗೆ ಸಂತೋಷವಾಯಿತು ಎಂದು ನುಡಿದು ಶುಭಹಾರೈಸಿದರು.

ಗೌರವ ಅತಿಥಿಯಾಗಿ ಕ್ಲಾಸಿಕ್‌ ಗ್ರೂಪ್‌ ಆಫ್‌ ಹೊಟೇಲ್ಸ್‌ನ ಸಿಎಂಡಿ ಸುರೇಶ್‌ ಕಾಂಚನ್‌ ಅವರು  ಮಾತನಾಡಿ, ಲಕ್ಷ್ಮೀನಾರಾಯಣ ಮಂದಿರದ ಜೀರ್ಣೋದ್ಧಾರ ಮತ್ತು ಸಭಾಭವನ ನಿರ್ಮಾಣ ಕಾರ್ಯದಲ್ಲಿ ನಾವೆಲ್ಲರು ಒಂದಾಗಿ ಶ್ರಮಿಸೋಣ. ಈ ಪುಣ್ಯ ಕಾರ್ಯದಲ್ಲಿ ಯುವಜನೆಯನ್ನು ಕೂಡಿಕೊಂಡು ಚರ್ಚಿಸಿ ಮುಂದಾಗೋಣ. ಲಕ್ಷ್ಮೀ ನಾರಾಯಣ ದೇವರ ಅನುಗ್ರಹ ನಮಗೆ ಸದಾಯಿದ್ದು, ನಮ್ಮ ಎಲ್ಲಾ ಕಾರ್ಯಗಳು ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಮೊಗವೀರ ಕೋ. ಆಪರೇಟಿವ್‌ ಬ್ಯಾಂಕಿನ ಕಾರ್ಯಾಧ್ಯಕ್ಷ ಸದಾನಂದ ಕೋಟ್ಯಾನ್‌ ಅವರು ಮಾತನಾಡಿ, ಮೊಗವೀರ ಬ್ಯಾಂಕಿನ ಎಲ್ಲಾ ರೀತಿಯ ಸಹಕಾರ ಮದ್ಭಾರತ ಮಂಡಳಿಗಿದೆ. ನಿಮ್ಮ ಮುಂದಿನ ಕಾರ್ಯಯೋಜನೆಗಳಿಗೆ ನಮ್ಮ ಪ್ರೋತ್ಸಾಹ ಇದೆ ಎಂದು ನುಡಿದು ಶುಭಹಾರೈಸಿದರು.

ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಕೆ. ಎಲ್‌. ಬಂಗೇರ, ಶ್ರೀ ಮಹಾಲಕ್ಷ್ಮೀ ಹೌಸಿಂಗ್‌ ಸೊಸೈಟಿಯ ಕಾರ್ಯಾಧ್ಯಕ್ಷ ಬಾಲಕೃಷ್ಣ ಕರ್ಕೇರ, ದಕ್ಷಿಣ ಕನ್ನಡ ಜಿಲ್ಲಾ ಮೊಗವೀರ ಮಹಾಜನ ಸಂಘದ ಮುಂಬಯಿ ಸಮಿತಿಯ ಸದಾಶಿವ ಪಣಂಬೂರು ಮೊದಲಾದವರು ಮಾತನಾಡಿ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಮತ್ತು ಭವನ ನಿರ್ಮಾಣ ಕಾರ್ಯದ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

Advertisement

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮದ್ಭಾರತ ಮಂಡಳಿಯ ಅಧ್ಯಕ್ಷ ಜಗನ್ನಾಥ್‌ ಪಿ. ಪುತ್ರನ್‌ ಅವರು ಮಾತನಾಡಿ, ಮಂಡಳಿಯ ಕನಸಾಗಿರುವ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಮತ್ತು ಸಭಾಭವನದ ನಿರ್ಮಾಣಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ. 141 ವರ್ಷಗಳ ಇತಿಹಾಸವಿರುವ ಈ ಸಂಸ್ಥೆಯಲ್ಲಿ ಯುವ ಜನಾಂಗ ಮುಂದೆ ಬಂದು ಸಂಸ್ಥೆಯ ಯಶಸ್ಸಿಗೆ ಸಹಕರಿಸಬೇಕು. ಇಲ್ಲಿನ ಧಾರ್ಮಿಕ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ತಿಳಿಯುವಂತಾಗಬೇಕು. ಇದಕ್ಕೆ ಎಲ್ಲರ ಸಹಕಾರವಿರಲಿ ಎಂದರು.

ಜತೆ ಕಾರ್ಯದರ್ಶಿ ಲೋಕನಾಥ್‌ ಪಿ. ಕಾಂಚನ್‌ ಕಾರ್ಯಕ್ರಮ ನಿರ್ವಹಿಸಿದರು. ಅತಿಥಿಗಳನ್ನು ಮಂದಿರದ ವತಿಯಿಂದ ಗೌರವಿಸಲಾಯಿತು. ಉಪಾಧ್ಯಕ್ಷರುಗಳಾದ ಬಂಟ್ವಾಡಿ ಸಂಜೀವ ಬಿ. ಚಂದನ್‌, ನಾಗೇಶ್‌ ಎಲ್‌. ಮೆಂಡನ್‌, ಪ್ರಧಾನ ಕಾರ್ಯದರ್ಶಿ ಗುಂಡಿ ವಿ. ಕೆ. ಸುವರ್ಣ, ಗೌರವ ಜತೆ ಕಾರ್ಯದರ್ಶಿಗಳಾದ ಸಣ್ಣಗುಂಡಿ ಲೋಕನಾಥ್‌ ಪಿ. ಕಾಂಚನ್‌, ಪಲಿಮಾರು ಹರಿಶ್ಚಂದ್ರ ಸಿ. ಕಾಂಚನ್‌, ಗೌರವ ಪ್ರಧಾನ ಕೋಶಾಧಿಕಾರಿ ಮೂಳೂರು ಕೇಶವ ಆರ್‌. ಪುತ್ರನ್‌, ಗೌರವ ಜತೆ ಕೋಶಾಧಿಕಾರಿಗಳಾದ ಬೈಕಂಪಾಡಿ ಶ್ಯಾಮ ಕೆ. ಪುತ್ರನ್‌, ಅಶೋಕ್‌ ಎನ್‌. ಸುವರ್ಣ, ಪಾರುಪತ್ಯಗಾರುಗಳಾದ ಜೆ. ಪಿ. ಪುತ್ರನ್‌, ವಿ. ಕೆ. ಸುವರ್ಣ, ನಾಗೇಶ್‌ ಎಲ್‌. ಮೆಂಡನ್‌, ಗೋವಿಂದ ಎನ್‌. ಪುತ್ರನ್‌, ವಾಸು ಎಸ್‌. ಉಪ್ಪೂರು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮಗಳು
ಧಾರ್ಮಿಕ ಕಾರ್ಯಕ್ರಮವಾಗಿ ಮಂದಿರದ ಪ್ರಧಾನ ಆರ್ಚಕ  ಗುರುಪ್ರಸಾದ್‌ ಭಟ್‌ ಇವರ ಮುಂದಾಳತ್ವದಲ್ಲಿ   ಫೆ. 23 ರಂದು ಸಂಜೆ 5.30ರಿಂದ ದೇವರ ಪೂರ್ತಿಯನ್ನು ಮಂಟಪದಲ್ಲಿ ಆರೂ ಢಗೊಳಿಸಲಾಗುವುದು. ಆನಂತರ ಹೋಮ, ಬ್ರಾಹ್ಮಣ ಸತ್ಕಾರ, ಇತರ ಪೂಜೆಗಳು, ರಾತ್ರಿ 7.30ರಿಂದ ಗ್ರಂಥ ಪಾರಾಯಣ, ರಾತ್ರಿ 9.30ರಿಂದ ಉಪಕಾರ ಸ್ಮರಣೆ, ರಾತ್ರಿ 9.50ರಿಂದ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.

ಫೆ. 24ರಂದು ಬೆಳಗ್ಗೆ 8ರಿಂದ ಭಜನೆ, ಉತ್ತರ ಪೂಜೆ, ಮುಖ್ಯ ಅತಿಥಿಗಳ ಸತ್ಕಾರ, ಪೂರ್ವಾಹ್ನ 11.30ರಿಂದ ಪ್ರಾರ್ಥನೆ, ಹರಕೆ ಸಮರ್ಪಣೆ, ಆನಂತರ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಅನಂತರ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಅಪರಾಹ್ನ 3 ರಿಂದ ಶ್ರೀ ದೇವರ ಮೂರ್ತಿಯನ್ನು ಪಲ್ಲಕ್ಕಿಯೊಂದಿಗೆ ಸಾತ್‌ಬಂಗ್ಲೆ ಚೌಪಾಟಿಗೆ ಭಜನೆಯೊಂದಿಗೆ ಮೆರವಣಿಗೆಯಲ್ಲಿ ಅವಭೃತ ಸ್ನಾನಕ್ಕೆ ಕೊಂಡೊಯ್ಯಲಾಯಿತು. ತುಳು-ಕನ್ನಡಿಗರು, ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.        

  ಚಿತ್ರ-ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next