Advertisement

ಸಂಧ್ಯಾ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

07:30 AM Mar 23, 2018 | |

ಕಾಲೇಜು ಲೈಫೆಂದರೆ ಗೋಲ್ಡನ್‌ ಲೈಫ್ ಎಂಬ ಮಾತಿದೆ. ಅಂತಹ ಗೋಲ್ಡನ್‌ ಲೈಫ್ನ ಬಗೆಗಿನ ಕನಸುಗಳನ್ನು ಬಡತನ ಹಾಗೂ ಇನ್ನಿತರ ಕಾರಣಗಳಿಂದ ಕಳೆದುಕೊಂಡವರಿಗೆ ಅದೇ ದಿನಗಳು ಮರಳಿ ಸಿಕ್ಕರೆ ಹೇಗಿರಬಹುದು? ಜೀವನದಲ್ಲೆಂದೂ ಮರೆಯಲಾಗದ ಗಳಿಗೆ ಖಂಡಿತಾ ಆಗುತ್ತದೆಂಬುದು ಅಪ್ಪಟ ಸತ್ಯ. ಅಂತಹ ಒಂದು ಸನ್ನಿವೇಶವೇ ನಮಗೆ ಈಗ ಸಿಕ್ಕಿರುವುದು.

Advertisement

    ಅನಿವಾರ್ಯ ಕಾರಣಗಳಿಂದಾಗಿ ನಮ್ಮ ಉನ್ನತ ಶಿಕ್ಷಣದ ಕನಸುಗಳು ಬಾಡಿ ಹೋಗುತ್ತಿದ್ದ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ, ಮಂಗಳೂರಿನ ಹಳೆಯ ಸರಕಾರಿ ಕಾಲೇಜು, ಪ್ರಸ್ತುತ ವಿಶ್ವ ವಿದ್ಯಾನಿಲಯ ಕಾಲೇಜು ಎಂದು ಕರೆಯಲ್ಪಡುವ ಕಾಲೇಜಿನ ಕ್ಯಾಂಪಸ್‌ನಲ್ಲಿ ಪ್ರಾರಂಭವಾದ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ನಮ್ಮ ಕನಸುಗಳಿಗೆ ನೀರೆರೆಯಲು ಪ್ರಾರಂಭವಾಗಿ ಎರಡು ವರ್ಷಗಳಾಗುತ್ತ ಬಂತು. ಹಗಲು ನಮ್ಮವರಿಗಾಗಿ ದುಡಿದು ಸಂಜೆಯ ನಂತರ ನಮ್ಮ ಕನಸುಗಳನ್ನು ನನಸಾಗಿಸುವ ಸಮಯದಲ್ಲಿ ಕೇವಲ ಪಾಠ-ಪ್ರವಚನಗಳಲ್ಲಿ ತೊಡಗಿರದೆ ಇನ್ನಿತರ ಶೈಕ್ಷಣಿಕ, ಕ್ರೀಡಾ ಚಟುವಟಿಕೆಗಳಲ್ಲೂ ಮುಂದಿದ್ದೇವೆ ಎಂದು ತೋರಲು ಅಂತರ್‌ ಕಾಲೇಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನೂ ಬಾಚಿಕೊಂಡಿದ್ದೇವೆ. ನಮ್ಮ ಪ್ರಾಂಶುಪಾಲರು “ಇದೇ ಬರುವ ಮಾ. 11ರಂದು ಕಾಲೇಜಿನ ವಾರ್ಷಿಕ ಕ್ರೀಡಾಕೂಟ ನಡೆಯಲಿದೆ ಹಾಗೂ ಇತರ ಅಂತರ್‌ ತರಗತಿ ಪಂದ್ಯಾಟಗಳು ನಡೆಯಲಿದೆ’ ಎಂದು ಘೋಷಿಸಿದಾಗ ನಮ್ಮೊಳಗೆ ಸುಪ್ತವಾಗಿದ್ದ ಕ್ರೀಡಾಪಟುವೊಬ್ಬ ಜಾಗೃತನಾಗಿಬಿಟ್ಟ ಹಾಗೂ ಮಾರನೆಯ ದಿನದಿಂದಲೇ ನಮ್ಮ ಪ್ರಾಕ್ಟೀಸುಗಳೂ ಪ್ರಾರಂಭವಾಗಿಬಿಟ್ಟಿವೆ. ತಮ್ಮ ತಮ್ಮ ತರಗತಿ ಕಾಲೇಜಿನ ಕ್ರೀಡಾ ಚಾಂಪಿಯನ್‌ ತಂಡವಾಗಿ ಮೂಡಿಬರಬೇಕೆಂದು ಬೇರೆ ತರಗತಿಯವರಿಗೆ ತಿಳಿಯದ ಹಾಗೆ ಗೇಮ್‌ ಪ್ಲಾನ್‌ ಮಾಡುವುದು, ತಂಡದ ಎಲ್ಲರಲ್ಲೂ ಶಿಸ್ತು, ಸಮಾನತೆ ತೋರಿಸಲು ತಮ್ಮ ತಮ್ಮ ತಂಡಕ್ಕೆ ಬೇಕಾದ ಜರ್ಸಿಯನ್ನು ಇನ್ನೊಂದು ತಂಡದವರಿಗೆ ತಿಳಿಯದ ಹಾಗೆ ತಯಾರುಗೊಳಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ಬ್ರಹ್ಮಾಂಡ ರಹಸ್ಯವಾಗಿದೆ ! ಒಟ್ಟಾರೆ ಹೇಳಬೇಕೆಂದರೆ ವಿದ್ಯಾರ್ಥಿಗಳು ನಾವೆಲ್ಲರೂ ತಯಾರಾಗಿದ್ದೇವೆ.

    ವಿದ್ಯಾರ್ಥಿಗಳು ಇಷ್ಟೆಲ್ಲ ಉತ್ಸಾಹದಲ್ಲಿರುವಾಗ ಉಪನ್ಯಾಸಕರೂ ಕೂಡ ತಾವೇ ಸ್ಪರ್ಧಿಸುತ್ತಿದ್ದೇವೆಯೋ ಎಂಬಂತೆ ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕುತ್ತ ನಮ್ಮನ್ನು ಹುರಿದುಂಬಿಸುವುದು ಇದ್ದೇ ಇದೆ. ಒಳಾಂಗಣ ಕ್ರೀಡೆಗಳ ಜೊತೆಗೆ ವಾಲಿಬಾಲ್‌, ಕ್ರಿಕೆಟ್‌, ಕಬಡ್ಡಿ, ಅತ್ಲೆಟಿಕ್ಸ್‌ ನಂಥ‌ ಹೊರಾಂಗಣ ಕ್ರೀಡೆಗಳೂ ನಡೆಯಲಿವೆ. ಪ್ರತೀ ಆಟಗಳಿಗೂ ಒಬ್ಬೊಬ್ಬ ಉಪನ್ಯಾಸಕರ ಮೇಲ್ವಿಚಾರಣೆಯ ಜೊತೆಗೆ ಒಂದೊಂದು ಆಟಗಳನ್ನು ನಡೆಸಿಕೊಡುವಂತೆ ವಿದ್ಯಾರ್ಥಿಗಳಿಗೂ ಕರ್ತವ್ಯಗಳನ್ನು ಹಂಚಿಕೆ ಮಾಡಲಾಗಿದೆ. ವಿದ್ಯಾರ್ಥಿಗಳು ಈಗಾಗಲೆ ತಮ್ಮ ಕೆಲಸಗಳನ್ನೂ ಪ್ರಾರಂಭಿಸಿಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಕಾಲೇಜಿನ ಪ್ರಾಂಶುಪಾಲರು ಕೂಡ ವಿದ್ಯಾರ್ಥಿಗಳೊಂದಿಗೆ ವಿದ್ಯಾರ್ಥಿಯಾಗಿ ನಮ್ಮೊಂದಿಗೆ ಬೆರೆಯುವುದು ನಮ್ಮ ಉತ್ಸಾಹಕ್ಕೆ ಹೆಚ್ಚಿನ ಮೆರುಗು ನೀಡಿದೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಪ್ರಾಂಶುಪಾಲರಾದಿಯಾಗಿ ಹೆಚ್ಚಿನ ನಮ್ಮ ಎಲ್ಲಾ ಉಪನ್ಯಾಸಕರು ಬೆಳಗ್ಗಿನ ಸಮಯದಲ್ಲಿ ಇತರ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿ ಸಂಜೆಯ ಅವರ ವಿಶ್ರಾಂತಿಯ ಸಮಯವನ್ನು ನಮ್ಮ ಕನಸುಗಳಿಗೆ ನೀರೆರೆದು ಪೋಷಿಸಿ ನನಸಾಗಲು ವ್ಯಯಿಸುತ್ತಿದ್ದಾರೆ. ಅವರ ಈ ತ್ಯಾಗಕ್ಕೆ ಬಿಗ್‌ ಸೆಲ್ಯೂಟ್‌.

    ಅದೇನೆ ಇರಲಿ, ಮುಂದಿನ ಹನ್ನೊಂದನೇ ತಾರೀಕಿನಂದು ನಮ್ಮ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಕ್ರೀಡಾ ದಿನವಿದೆ. ಕಳೆದು ಹೋಗಬಹುದಾಗಿದ್ದ ಜೀವನದ ಅತ್ಯಂತ ಸುಂದರ, ಮರೆಯಲಾಗದ ಕ್ಷಣಗಳನ್ನು ಸಂಧ್ಯಾ ಕಾಲೇಜಿನ ಮೂಲಕ ಅನುಭವಿಸಲು ಹೊರಟಿದ್ದೇವೆ. ಕ್ರೀಡಾ ದಿನ ಯಶಸ್ವಿಯಾಗುವಂತೆ ನಿಮ್ಮ ಹಾರೈಕೆಯಿರಲಿ.

ಮಹಮ್ಮದ್‌ ನಾಝೀರ್‌ ಹುಸೈನ್‌ ದ್ವಿತೀಯ ಬಿ. ಎ.  ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next