ಹ್ಯೊಗೆಬಜಾರ್: ಬಂದರ್‌ನ ರೈಲ್ವೇ ಗೂಡ್‌ಶೆಡ್‌ಗೆ ತೆರಳುವ ರೈಲು ಹಳಿಯಲ್ಲಿ ಅನಾವಶ್ಯಕವಾಗಿ ರೈಲು ಎಂಜಿನ್‌ಗಳ ಓಡಾಟದಿಂದಾಗಿ ಜನರಿಗೆ ನಿತ್ಯ ಸಮಸ್ಯೆ ಆಗುತ್ತಿರುವ ಜತೆಗೆ, ಹ್ಯೊಗೆಬಜಾರ್ ವ್ಯಾಪ್ತಿಯಲ್ಲಿ ವಾಸವಿರುವ ಸ್ಥಳೀಯ ನಾಗರಿಕರಿಗೆ ಶಬ್ದ ಮಾಲಿನ್ಯದ ಕಿರಿಕಿರಿ ಉಂಟಾಗಿದೆ!
ರೈಲ್ವೇ ಗೂಡ್ಸ್‌ಶೆಡ್ ಭಾಗದಲ್ಲಿ ಮೂರು ಸಮಾನಾಂತರ ರೈಲು ಹಳಿಗಳಿದ್ದು ಗೂಡ್ಸ್ ಬೋಗಿಗಳನ್ನು ಹಾಗೂ ಎಂಜಿನ್ ಇರಿಸಲು ಅಲ್ಲಿ ಸ್ಥಳಾವಕಾಶವಿದೆ. ಆದರೆ ಗೂಡ್ಸ್ ಬೋಗಿಗಳನ್ನು ಗೂಡ್ಸ್‌ಶೆಡ್ ಭಾಗದಲ್ಲಿ ಇರಿಸಿ ಕೇವಲ ಎಂಜಿನ್ ಮಾತ್ರ ಹ್ಯೊಗೆಬಜಾರ್ ಜನವಸತಿ ಭಾಗದಲ್ಲಿ ಸತತವಾಗಿ ಚಾಲೂ ಸ್ಥಿತಿಯಲ್ಲಿ ಇರಿಸಲಾಗುತ್ತದೆ; ಜತೆಗೆ ಹಾರ್ನ್ ಮೂಲಕ ಸ್ಥಳೀಯರಿಗೆ ಕಿರಿಕಿರಿ ಉಂಟಾಗುತ್ತಿದೆ ಎಂಬುದು ಸ್ಥಳೀಯರ ಆರೋಪ.
ಗೂಡ್ಸ್ ರೈಲಿನಿಂದಾಗಿ ಸ್ಥಳೀಯರಿಗೆ ಆಗುತ್ತಿರುವ ಶಬ್ದಮಾಲಿನ್ಯದ ಬಗ್ಗೆ ಸ್ಥಳೀಯರು ದ.ಕ. ಜಿಲ್ಲಾಧಿಕಾರಿಯವರಿಗೆ ಕಳೆದ ವರ್ಷ ಫೆ. 3ರಂದು ಮನವಿ ಸಲ್ಲಿಸಿದ್ದರು.
ಇದರಂತೆ ಸ್ಥಳ ಪರಿಶೀಲನೆ ನಡೆಸಿ ಅವಲೋಕಿಸಿ ವರದಿ ನೀಡುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿಯವರಿಗೆ ಫೆ. 15ರಂದು ಜಿಲ್ಲಾಡಳಿತದಿಂದ ಸೂಚಿಸಲಾಗಿತ್ತು. ಅದರಂತೆ ಮಾ. 12, 13ರಂದು ಸ್ಥಳದಲ್ಲಿ ಶಬ್ದ ಮಾಲಿನ್ಯದ ಕುರಿತು ಪರಿಸರ ಇಲಾಖಾ ಅಧಿಕಾರಿಗಳು ತಪಾಸಣೆ ನಡೆಸಿ ಎ. 21ರಂದು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದರು. ಶಬ್ದ ಮಾಲಿನ್ಯ ಆಗುತ್ತಿರುವ ಅಂಶಗಳನ್ನು ಈ ವರದಿಯಲ್ಲಿ ಉಲ್ಲೇಖೀಸಲಾಗಿತ್ತು. ಆದರೆ ಆ ಬಳಿಕ ಈ ವಿಚಾರ ಮುನ್ನೆಲೆಗೆ ಬಂದೇ ಇಲ್ಲ!
ಸ್ಥಳೀಯರ ಸಮಸ್ಯೆಗೆ ಪರಿಹಾರ ನೀಡುವಂತೆ ಆಗ್ರಹಿಸಿ ಶಾಸಕರು, ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಮಂಗಳೂರು ಪಾಲಿಕೆ, ಮೇಯರ್, ಕಾರ್ಪೊರೇಟರ್, ರೈಲ್ವೇ ಅಧಿಕಾರಿಗಳು ಸಹಿತ ಹಲವು ವಿಭಾಗಗಳಿಗೆ ಮನವಿ ನೀಡಿದ್ದರೂ ಇನ್ನೂ ಪರಿಹಾರ ಮಾತ್ರ ದೊರಕಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಥಳೀಯರ ಸಮಸ್ಯೆಗೆ ಪರಿಹಾರವೇ ಇಲ್ಲ
ಗೂಡ್ಸ್‌ಶೆಡ್‌ಗೆ ಬರುವ ರೈಲ್ವೇ ಗೂಡ್ಸ್‌ಗಳ ಕೇವಲ ಎಂಜಿನ್‌ಗಳನ್ನು ಹೊಗೆಬಜಾರ್ ಪರಿಸರದಲ್ಲಿ ಅತ್ತಿಂದಿತ್ತ ಓಡಿಸುತ್ತ ಹಾಗೂ ರಾತ್ರಿ ಹ್ಯೊಗೆಬಜಾರ್ ವ್ಯಾಪ್ತಿಯ ಹಳಿಯಲ್ಲಿ ನಿಲ್ಲಿಸಿ ಕರ್ಕಶ ಶಬ್ದ ಮಾಡುವ ಪರಿಪಾಠದಿಂದ ಸ್ಥಳೀಯರಿಗೆ ನಿತ್ಯ ಕಿರಿಕಿರಿಯಾಗುತ್ತಿದೆ. ಸ್ಥಳೀಯಾಡಳಿತಕ್ಕೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಿರಿಯರು, ಮಕ್ಕಳ ಬವಣೆಗೆ ಇಲ್ಲಿ ಪರಿಹಾರವೇ ಸಿಕ್ಕಿಲ್ಲ.
–ಕೆ.ಜೆ. ಪಿಂಟೋ, ಸ್ಥಳೀಯರು, ಹ್ಯೊಗೆಬಜಾರ್