Advertisement

ರೇರಾ ಕಾಯ್ದೆ ನಿಯಮಾವಳಿ ರಚಿಸಿ ಅಧಿಸೂಚನೆ

11:20 AM Jul 11, 2017 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಿಯಲ್‌ ಎಸ್ಟೇಟ್‌ ನಿಯಂತ್ರಣ ಕಾಯ್ದೆಗೆ ರಾಜ್ಯ ಸರ್ಕಾರ ನಿಯಮಾವಳಿ ರೂಪಿಸಿ “ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ನಿಯಮ’ ಸೋಮವಾರ ಅಧಿಸೂಚನೆ ಹೊರಡಿಸಿದೆ.

Advertisement

ಕೇಂದ್ರ ಸರ್ಕಾರದ ಕಾಯ್ದೆಯಲ್ಲಿರುವ ಬಹುತೇಕ ಅಂಶಗಳನ್ನೇ ನಿಯಮಾವಳಿಗಳಲ್ಲಿ ಸೇರ್ಪಡೆ ಮಾಡಲಾಗಿದ್ದು, ಬಡಾವಣೆ ರಚನೆ, ಮನೆ ಅಥವಾ ವಸತಿ/ವಾಣಿಜ್ಯ ಸಮುತ್ಛಯ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳುವ ಎಲ್ಲ ರಿಯಲ್‌ ಎಸ್ಟೇಟ್‌ ಸಂಸ್ಥೆ ಅಥವಾ ಬಿಲ್ಡರ್‌ಗಳು ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳಬೇಕು.

 ಜತೆಗೆ, ನಿವೇಶನ, ಮನೆ ಅಥವಾ ವಸತಿ ಸಮುತ್ಛಯ ಯೋಜನೆಗೆ ಗ್ರಾಹಕರಿಂದ ಮುಂಗಡವಾಗಿ ಪಡೆಯುವ ಹಣದ ಶೇ.70 ರ ಪ್ರಾಧಿಕಾರದಲ್ಲಿ ಠೇವಣಿ ಇಡುವುದು ಕಡ್ಡಾಗೊಳಿಸಲಾಗಿದೆ. ಯೋಜನೆಯ ಅನುಷ್ಟಾನದ ಪ್ರಗತಿಗೆ ಅನುಗುಣವಾಗಿ ಹಂತ ಹಂತವಾಗಿ ಹಣ ಮರುಪಾವತಿ ಮಾಡಿಕೊಳ್ಳಬಹುದಾಗಿದೆ.

ನಿಗದಿತ ಸಮಯದಲ್ಲಿ ಯೋಜನೆ ಪೂರ್ಣಗೊಳಿಸದಿದ್ದರೆ ನಿವೇಶನ, ಮನೆ ಅಥವಾ ವಸತಿ ಸಮುತ್ಛಯದ ಮೊತ್ತದ ಶೇ.10 ರಷ್ಟು ದಂಡ ಪಾವತಿಸಬೇಕಾಗುತ್ತದೆ. ಇಲ್ಲದಿದ್ದರೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಪ್ರಾಧಿಕಾರದಲ್ಲಿ ನೋಂದಣಿ ಸಂದರ್ಭದಲ್ಲಿ ರಿಯಲ್‌ ಎಸ್ಟೇಟ್‌ ಸಂಸ್ಥೆ ಅಥವಾ ಬಿಲ್ಡರ್‌ ಕಳೆದ ಐದು ವರ್ಷಗಳಲ್ಲಿ ರೂಪಿಸಿರುವ ಯೋಜನೆಗಳ ವಿವರ ಜತೆಗೆ ಮೂರು ವರ್ಷಗಳ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಹಿತಿ, ಲೆಕ್ಕಪರಿಶೋಧನಾ ವರದಿ ಸಲ್ಲಿಸಿರಬೇಕು.

ವೆಬ್‌ಸೈಟ್‌ನಲ್ಲಿ ಸಂಪೂರ್ಣ ಯೋಜನೆ ವಿವರ, ಗ್ರಾಹಕರ ಹೆಸರು ಮತ್ತು ವಿಳಾಸ ಹಾಗೂ ಯೋಜನೆಯ ಸಮಗ್ರ ಮಾಹಿತಿ ನೀಡಬೇಕು. ವಿನಾಯಿತಿ ಚಾಲ್ತಿಯಲ್ಲಿರುವ ಯೋಜಗಳಲ್ಲಿ ಶೇ.60 ರಷ್ಟು ಪೂರ್ಣಗೊಂಡಿದ್ದರೆ ಅಂತಹ ಯೋಜನೆಗಳಿಗೆ ಕಾಯ್ದೆ ಅನ್ವಯಿಸದೆ ರಿಯಾಯಿತಿ ನೀಡಲಾಗಿದೆ. ಬಡಾವಣೆ ಅಭಿವೃದ್ಧಿ ಯೋಜನೆಯಾದರೆ ಶೇ. 60 ರಷ್ಟು ನಿವೇಶನ 60 ರಷ್ಟು ಕ್ರಯ ಪತ್ರ ಮಾಡಿಸಿರಬೇಕು.

Advertisement

ರಸ್ತೆ, ಒಳಚರಂಡಿ ಸೇರಿ ಮೂಲಸೌಕರ್ಯ ಕಾಮಗಾರಿ ಪೂರ್ಣಗೊಳಿಸಿ ಸ್ಥಳೀಯ ಸಂಸ್ಥೆ ಅಥವಾ ಪ್ರಾಧಿಕಾರಕ್ಕೆ ಹಸ್ತಾಂತರಿಸಿರಬೇಕು. ವಸತಿ ಸಮುತ್ಛಯವಾದರೆ ಎಲ್ಲ ನಾಗರಿಕ ಸೌಲಭ್ಯ ಕಲ್ಪಿಸಿ ಶೇ.60 ರಷ್ಟು ಕ್ರಯ ಮಾಡಿಸಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ಪಾರ್ಕಿಂಗ್‌ ಸ್ಥಳ, ಉದ್ಯಾನ ನಿರ್ವಹಣೆ ಸೇರಿ ಇತರೆ ಜವಾಬ್ದಾರಿ ಹಸ್ತಾಂತರಬೇಕು.

ವೈಯಕ್ತಿಕ ಮನೆಯಾದರೆ ಪೂರ್ಣ ಪ್ರಮಾಣದಲ್ಲಿ ಸೌಲಭ್ಯ ಕಲ್ಪಿಸಿ ಕ್ರಯಪತ್ರ ಮಾಡಿಸಿರಬೇಕು. ಒಂದೊಮ್ಮೆ ನಿವೇಶನ ಅಥವಾ ಅಪಾರ್ಟ್‌ಮೆಂಟ್‌ಗಳಲ್ಲಿ ಶೇ.60 ರಷ್ಟು ಕ್ರಯ ಪತ್ರ ಆಗಿಲ್ಲದಿದ್ದರೆ ಸ್ವಾಧೀನಾನುಭವ ಪತ್ರ ಹಾಗೂ ಕಾಮಗಾರಿ ಪೂರ್ಣಗೊಂಡ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿ, ಮೂಲಸೌಕರ್ಯ ನಿಯಮಾವಳಿ ಪ್ರಕಾರ ಕೈಗೊಂಡು ಪೂರ್ಣಗೊಂಡಿದೆ ಎಂಬುದನ್ನು ಅಧಿಕೃತ ವಾಸ್ತುಶಿಲ್ಪಿಯಿಂದ ದೃಢೀಕರಿಸಿದ ಪತ್ರ ನೀಡಬೇಕಾಗುತ್ತದೆ.

ರಿಯಲ್‌ ಎಸ್ಟೇಟ್‌ ಸಂಸ್ಥೆ ಅಥವಾ ಬಿಲ್ಟರ್‌ ಹೆಸರಿನಲ್ಲಿ  ಯೋಜನೆಗೆ ಅಗತ್ಯವಾದ ಜಮೀನು ಇಲ್ಲದಿದ್ದರೂ ಜಂಟಿ ಸಹಭಾಗಿತ್ವದಲ್ಲಿ ಸ್ವ ಘೋಷಿತ ಒಡಂಬಡಿಕೆ, ಅಭಿವೃದ್ಧಿ ಒಡಂಬಡಿಕೆ, ಜಂಟಿ ಅಭಿವೃದ್ಧಿ ಒಡಂಬಡಿಕೆ ಪ್ರಾರಂಭದಲ್ಲೇ ಮಾಡಿಕೊಂಡು ಯೋಜನೆ ಕೈಗೆತ್ತಿಕೊಳ್ಳಬಹುದು ಎಂದು ನಿಯಮಾವಳಿಗಳಲ್ಲಿ ತಿಳಿಸಲಾಗಿದೆ.
 
ಇತ್ತೀಚೆಗಷ್ಟೇ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಿಯಲ್‌ ಎಸ್ಟೇಟ್‌ ಕಾಯ್ದೆಗೆ ನಿಯಮಾವಳಿ ರೂಪಿಸಲು ಒಪ್ಪಿಗೆ ನೀಡಲಾಗಿತ್ತು. ತಕ್ಷಣದಿಂದಲೇ ನಿಯಮಾವಳಿ ಜಾರಿಗೆ ಬರಲಿದೆಯಾದರೂ ರಾಜ್ಯ ಸರ್ಕಾರ ಪ್ರಾಧಿಕಾರ ರಚನೆ ಮಾಡಬೇಕಿದ್ದು ಆ ನಂತರವಷ್ಟೇ ಪೂರ್ಣಪ್ರಮಾಣದಲ್ಲಿ ಅನುಷ್ಟಾನಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next