ಕೆ.ಆರ್.ನಗರ: ತಾಲೂಕು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಮುಂದಿನ ಐದು ವರ್ಷಗಳ ಅವಧಿ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಸಲು ದಿನಾಂಕ ನಿಗದಿಪಡಿಸಲಾಗಿದ್ದು, ಜ.25ರಂದು ನಡೆಸಲು ತೀರ್ಮಾನಿಸಿ ಸಹಕಾರ ಸಂಘಗಳ ಜಂಟಿ ನಿಬಂಧಕರು ಆದೇಶ ಹೊರಡಿಸಿದ್ದಾರೆ.
ಫೆ. 14, 2020ರೊಳಗೆ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳಲಿದ್ದು, ಜನವರಿ 17 ಮತ್ತು 18ರಂದು ನಾಮಪತ್ರ ಸಲ್ಲಿಸಲು ಎರಡು ದಿನಗಳ ಕಾಲ ಅವಕಾಶ ಕಲ್ಪಿಸಲಾಗಿದೆ. 19ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, 20ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ ನಿಗದಿಯಾಗಿದ್ದು ಜ.25ರಂದು ಶನಿವಾರ ಚುನಾವಣೆ ನಡೆದು ಅಂದೇ ಫಲಿತಾಂಶ ಪ್ರಕಟವಾಗಲಿದೆ.
ಮೀಸಲಾತಿ ವಿವರ: ಪ್ರಸ್ತುತ ಅವಧಿಯಲ್ಲಿ ಸಾಮಾನ್ಯ ಕ್ಷೇತ್ರ ಸೇರಿ 12 ಸ್ಥಾನಗಳನ್ನು ಹೊಂದಿದ್ದ ಬ್ಯಾಂಕ್‌ನ ಆಡಳಿತ ಮಂಡಳಿ, ಮುಂದಿನ ಐದು ವರ್ಷಗಳ ಅವಧಿಗೆ ಕ್ಷೇತ್ರ ಪುನರ್ ವಿಂಗಡಣೆಯೊಂದಿಗೆ 14 ಸ್ಥಾನಗಳನ್ನು ಹೊಂದಲಿದೆ. ಸಾಲಗಾರರ ಕ್ಷೇತ್ರದಿಂದ ಕೆ.ಆರ್.ನಗರ ತಾಲೂಕಿನ ಕಸಬಾ ಹೋಬಳಿಯ ಕೆ.ಆರ್.ನಗರ ಕ್ಷೇತ್ರ ಪರಿಶಿಷ್ಟ ಜಾತಿ ಮತ್ತು ತಿಪ್ಪೂರು ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಲಾಗಿದೆ. ಚುಂಚನಕಟ್ಟೆ ಹೋಬಳಿಯ ಮಳಲಿ ಮತ್ತು ಹಾಡ್ಯ ಕ್ಷೇತ್ರಗಳನ್ನು ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಲಾಗಿದೆ.
ಸಾಲಿಗ್ರಾಮ ಹೋಬಳಿಯ ಸಾಲಿಗ್ರಾಮ ಕ್ಷೇತ್ರ ಸಾಮಾನ್ಯವಾಗಿದ್ದು, ಅಂಕನಹಳ್ಳಿ ಕ್ಷೇತ್ರ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರೆ, ಹೆಬ್ಟಾಳು ಹೋಬಳಿಯ ಚೀರ್ನಹಳ್ಳಿ ಮತ್ತು ಹೆಬ್ಟಾಳು ಸಾಮಾನ್ಯ ವರ್ಗಕ್ಕೆ ನಿಗದಿಯಾಗಿವೆ. ಮಿರ್ಲೆ ಹೋಬಳಿಯ ತಂದ್ರೆ ಕ್ಷೇತ್ರದಲ್ಲಿ ಸಾಮಾನ್ಯ ಮತ್ತು ಮಿರ್ಲೆ ಕ್ಷೇತ್ರ ಹಿಂದುಳಿದ ವರ್ಗಕ್ಕೆ ಹಾಗೂ ಹೊಸಗ್ರಹಾರ ಹೋಬಳಿಯ ಮಂಚನಹಳ್ಳಿ ಹಿಂದುಳಿದ ವರ್ಗ ಎ, ದೊಡ್ಡಕೊಪ್ಪಲು ಸಾಮಾನ್ಯ ಮಹಿಳೆಗೆ ಹಾಗೂ ಭೇರ್ಯ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಉಳಿದಂತೆ ಸಾಲಗಾರರಲ್ಲದ ಒಂದು ಕ್ಷೇತ್ರ ಸಾಮಾನ್ಯ ವರ್ಗಕ್ಕೆ ನಿಗದಿಯಾಗಿದೆ.
ಗರಿಗೆದರಿದ ಕಾರ್ಯಚಟುವಟಿಕೆಗಳು: ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಸ್ಪರ್ಧಾಕಾಂಕ್ಷಿಗಳು ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದ್ದಾರೆ. ವಾರ್ಷಿಕ ಹತ್ತಾರು ಕೋಟಿ ರೂ.ಗಳ ವ್ಯವಹಾರ ನಡೆಸಿ ರೈತರ ಜೀವನಾಡಿಯಾಗಿರುವ ಬ್ಯಾಂಕ್‌ನ ಆಡಳಿತ ಪ್ರಸ್ತುತ ಜೆಡಿಎಸ್ ತೆಕ್ಕೆಯಲ್ಲಿದ್ದು, ಅದನ್ನು ಕಾಯ್ದುಕೊಳ್ಳಲು ಪಕ್ಷದವರು ತಂತ್ರ ರೂಪಿಸುತ್ತಿದ್ದಾರೆ. ಇತ್ತ ಕಾಂಗ್ರೆಸ್ ಹಾಗೂ ಬಿಜೆಪಿಯವರು ತಮ್ಮ ರಾಜಕೀಯ ದಾಳ ಉರುಳಿಸಲು ಸನ್ನದ್ಧರಾಗುತ್ತಿದ್ದಾರೆ.
ಚುನಾವಣೆ ಘೋಷಣೆಯಾಗಿದೆ. ಶಾಸಕ ಸಾ.ರಾ.ಮಹೇಶ್ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ, ಬ್ಯಾಂಕ್‌ನ ರೈತ ಸದಸ್ಯರು ಸದ್ಯ ಜೆಡಿಎಸ್‌ಗೆ ಅವಕಾಶ ನೀಡಿದ್ದರು. ಈಗ ನಾವು ಮತ್ತೆ ಶಾಸಕರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸಿ, ಮುಂದಿನ ಅವಧಿಗೂ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ.
-ಎಂ.ಎಸ್. ಹರಿಚಿದಂಬರ, ಬ್ಯಾಂಕ್‌ನ ಮಾಜಿ ಅಧ್ಯಕ್ಷ