ಹೊಸಪೇಟೆ: ಕೋವಿಡ್ ಸಂಕಷ್ಟದಲ್ಲಿರುವ ಎಲ್ಲ ರೈತರಿಗೆ ಸರಕಾರ ಘೋಷಿಸಿರುವ ಪರಿಹಾರ ಪ್ಯಾಕೇಜ್ ಹಾಗೂ ಉತ್ತಮ ಬೀಜ, ರಸಗೊಬ್ಬರ ಉಚಿತವಾಗಿ ಒದಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಘಟಕ ಶುಕ್ರವಾರ ಆಗ್ರಹಿಸಿದೆ.
ಕಳೆದ ಎರಡು ವರ್ಷಗಳಿಂದ ರೈತರು, ಕೃಷಿ ಕೂಲಿಕಾರರು ಸಂಕಷ್ಟಕ್ಕೊಳಗಾಗಿದ್ದಾರೆ. ರೈತರು ಬೆಳೆದ ಬೆಳೆಗಳನ್ನು ವ್ಯವಸ್ಥಿತವಾದ ಮಾರುಕಟ್ಟೆಗೆ ತರಲಾರದಂತಹ ಮತ್ತು ಅವರು ಮಾರಾಟ ಮಾಡಲು ಅವಕಾಶ ಇಲ್ಲದಂಥ ಸನ್ನಿವೇಶ ಎದುರಿಸಿದ್ದಾರೆ. ಆದರೆ ಆಳುವ ಸರಕಾರಗಳು ರೈತರ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದ್ದಾರೆ.
ಏಕೆಂದರೆ ಹೊಲಗಳಲ್ಲಿ ಕಟಾವಿಗೆ ಬಂದಿದ್ದ ಹಣ್ಣು, ತರಕಾರಿಗಳು, ಭತ್ತ, ಶೇಂಗಾ, ಬಾಳೆ, ಮತ್ತಿತರೆ ಮಾರಾಟ ಮಾಡಲಿಕ್ಕೆ ಖರೀದಿ ಕೇಂದ್ರ ಇಲ್ಲದಿರುವುದು ಮತ್ತು ಅವುಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಒಂದು ಕಡೆಯಿಂದ ಮತ್ತೂಂದು ಕಡೆಗೆ ಸಾಗಿಸಲು ಅನುಕೂಲ ಇಲ್ಲದಿರುವುದರಿಂದ ರೈತರು ಹಲವುಕಿರುಕುಳಗಳನ್ನು ಅನುಭವಿಸಿದ್ದಾರೆ ಎಂದು ದೂರಿದರು.
ಪಸಲ್ ಬಿಮಾ ಯೋಜನೆಯ ಹಣ ತಾಲೂಕಿನ ಸಾಕಷ್ಟು ರೈತರಿಗೆ ಇನ್ನು ತಲುಪಿಲ್ಲ. ಡಿಎಪಿ ರಸಗೊಬ್ಬರ ಕೋವಿಡ್ ಸಂದರ್ಭದಲ್ಲಿ ಈ ಹಿಂದೆ ಇದ್ದಂತೆಯೇ 1200 ರೂ. ಇದೆ. ಕೇಂದ್ರ, ರಾಜ್ಯ ಸರಕಾರಗಳು 1200ರೂಗಿಂತ 800 ರೂ. ಅಥವಾ 850 ರೂಗೆ ಸಿಗುವಂತೆ ಅನುಕೂಲ ಮಾಡಿ ಉಳಿದ ಸಬ್ಸಿಡಿ ಹಣವನ್ನು ಕೇಂದ್ರ ಸರಕಾರ ಭರಿಸಬೇಕು. ರೈತರ ಪಹಣಿಗಳಲ್ಲಿ ಜಂಟಿ ಕುಟುಂಬಗಳು ಹೆಚ್ಚಾಗಿರುವುದರಿಂದ ಹಲವು ಸೌಲಭ್ಯಗಳನ್ನು ಪಡೆಯಲಿಕ್ಕೆ ಕಷ್ಟಕರವಾಗಿದೆ. ಆದ್ದರಿಂದ ಎಲ್ಲ ಬಡ ರೈತರ ಹಿತದೃಷ್ಟಿಯಿಂದ ಸಂಬಂಧಿ ಸಿದ ಇಲಾಖೆಗಳು ಪ್ರತ್ಯೇಕ ಪಹಣಿಗಳಾಗಲು ರೈತರ ಸಭೆಗಳನ್ನು ನಡೆಸಬೇಕು ಎಂದು ಒತ್ತಾಯಿಸಿದರು.
ಬೇಡಿಕೆಗಳು: ಸರ್ಕಾರದಿಂದ ರೈತರಿಗೆ ಘೋಷಿಸಿದ 10,000 ರು. ಪ್ಯಾಕೇಜ್ ಸಮರ್ಪಕವಾಗಿ ಸಿಗುವಂತಾಗಲು ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಒದಗಿಸಬೇಕು. ತೋಟಗಾರಿಕೆ ಇಲಾಖೆಯಿಂದರೈತರಿಗೆ ಸಬ್ಸಿಡಿ ರೂಪದಲ್ಲಿ ಸಿಗುವ ಸಾವಯವ ಕೃಷಿ ಪದ್ಧತಿಗೆ ಎಲ್ಲ ಕ್ರಮ ವಹಿಸಬೇಕು. ಈರುಳ್ಳಿ ಶೇಖರಣೆ ಘಟಕ ಹಾಗೂ ಇನ್ನಿತರೆ ತರಕಾರಿ ಬೆಳೆಗಳ ಪ್ಯಾಕೇಜ್ ಹೌಸ್‌ಗಳನ್ನು ಹೆಚ್ಚಾಗಿ ತಾಲೂಕಿನ ನಗರ ಮತ್ತು ಗ್ರಾಮೀಣ ಭಾಗಕ್ಕೆ ಸಿಗುವಂತೆ ಕ್ರಮ ವಹಿಸಬೇಕು. ಪ್ರತಿಯೊಬ್ಬ ರೈತರಿಗೆ ಉಚಿತವಾಗಿ ಬೀಜ ಗೊಬ್ಬರ ನೀಡಬೇಕು. ಡಿಎಪಿ ಇತರೆ ರಸಗೊಬ್ಬರ ಮಾರಾಟ ಕೇಂದ್ರಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ಇಲಾಖೆಯಿಂದ ನಿಗದಿತ ದರದ ಸುತ್ತೋಲೆಯನ್ನು ಹೊರಡಿಸಬೇಕು. ರಾಜಾಪುರ ಭಾಗದಲ್ಲಿ ತ್ವರಿತವಾಗಿ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ತೋಟಗಾರಿಕೆ ಇಲಾಖೆ ಅಧಿಕಾರಿ ಜೆ. ಶಂಕರ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಂಘದ ಪದಾಧಿಕಾರಿಗಳಾದ ಜಿ. ಕರೆಹನುಮಂತ, ಎನ್. ಯಲ್ಲಾಲಿಂಗ, ಭಾಸ್ಕರ್ ರೆಡ್ಡಿ, ಬಾಣದ ನಾಗರಾಜ, ಬಾಣದ ರಾಮಣ್ಣ, ಬಿ. ತಾಯಪ್ಪ, ಭೀಮಜ್ಜ ಮತ್ತಿತರರಿದ್ದರು.