ದೇವನಹಳ್ಳಿ: ಪಕ್ಷದ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಿ, ಪ್ರತಿ ಗ್ರಾಮದಲ್ಲೂ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್.ಎಂ.ರವಿಕುಮಾರ್ ತಿಳಿಸಿದರು. ತಾಲೂಕಿನ ಲಕ್ಷ್ಮೀಪುರ ಶ್ರೀಆಂಜನೇಯಸ್ವಾಮಿ ದೇವಾಲಯ ಆವರಣದಲ್ಲಿ ನಡೆದ ಬಿಜೆಪಿ ಆವತಿ ಶಕ್ತಿ ಕೇಂದ್ರದ ಬೂತ್ ಮಟ್ಟದ ಕಮಿಟಿ ಸಭೆಯಲ್ಲಿ ಮಾತನಾಡಿದರು.
ಈಗಾಗಲೇ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಪಕ್ಷದ ಸದಸ್ಯರನ್ನಾಗಿ ಮಾಡಲು ಶ್ರಮಿಸಲಾಗುತ್ತಿದೆ. ಆವತಿ ಶಕ್ತಿ ಕೇಂದ್ರದ ಮುಖಂಡರ ಸಭೆ ಕರೆದು ಯಾವ ರೀತಿ ಕಾರ್ಯಕ್ರಮ ರೂಪಿಸಬೇಕು ಎಂಬುವುದರ ಬಗ್ಗೆ ತಿಳುವಳಿಕೆ ನೀಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಉತ್ತಮ ಯೋಜನೆಗಳನ್ನು ರೂಪಿಸಿ ಮಾದರಿ ಆಡಳಿತ ನೀಡುತ್ತಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಜನರ ಕಲ್ಯಾಣಕ್ಕೆ ಯೋಜನೆಗಳನ್ನು ರೂಪಿಸುತ್ತಿದೆ. ಆವತಿ ಶಕ್ತಿ ಕೇಂದ್ರದ ಬಿಜೆಪಿ ಮಟ್ಟದ ಸಭೆಯಲ್ಲಿ ಮುಖಂಡರ ಸಮ್ಮೂಖದಲ್ಲಿ ಮಂಡಲ ಅಧ್ಯಕ್ಷರ ಚುನಾವಣೆ ನಡೆಯಲಿದ್ದು, ಹೆಸರು ನೋಂದಣಿಯ ಸದಸ್ಯರ ಪಟ್ಟಿಯನ್ನು 15ನೇ ತಾರೀಖೀನ ಒಳಗಾಗಿ ಸಲ್ಲಿಸಬೇಕಾಗುತ್ತದೆ ಎಂದು ಚರ್ಚಿಸಲಾಗಿದೆ ಎಂದರು.
ಬೆಂ.ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ದೇವನಹಳ್ಳಿಯ ಪುಷ್ಪ ಶಿವಶಂಕರ್ ಅವರನ್ನು ನೇಮಕ ಮಾಡಿರುವುದರಿಂದ ಮಂಗಳವಾರದಂದು ಕೊಯಿರ, ವಿಶ್ವನಾಥಪುರ, ಬಿದಲೂರು, ಕಾರಹಳ್ಳಿ, ಆವತಿ ಗ್ರಾ.ಪಂಚಾಯಿತಿಗೆ ಭೇಟಿ ನೀಡಲಿದ್ದು, ಈ ವ್ಯಾಪ್ತಿಯ ಶಕ್ತಿ ಕೇಂದ್ರಗಳ ಕಮಿಟಿಯ ಸದಸ್ಯರ ಪಟ್ಟಿಯನ್ನು ಹಸ್ತಾಂತರಿಸಬೇಕಾಗುತ್ತದೆ. ಮಂಡಲ ಪಟ್ಟಿ ಹಾಗೂ ಸದಸ್ಯರ ಪಟ್ಟಿ ನೊಂದಣಿ ಕಾರ್ಯ ಮುಕ್ತಾಯಗೊಂಡ ನಂತರ ಮಂಡಲ ಅಧ್ಯಕ್ಷರ ಆಯ್ಕೆ ಚುನಾವಣೆ ನಡೆಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಹೇಳಿದರು.
ತಾಲೂಕು ಸೊಸೈಟಿ ಮಾಜಿ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ ಮಾತನಾಡಿ, ತಾಲೂಕಿನಾದ್ಯಂತ ಗಾಂಧಿ ಜಯಂತಿಯ 150ನೇ ವರ್ಷದ ಅಂಗವಾಗಿ ತಾಲೂಕಿನಾದ್ಯಂತ ಪಾದಯಾತ್ರೆ ಮೂಲಕ ಸಾರ್ವಜನಿಕ ಸ್ವತ್ಛತೆಯ ಅರಿವು ಹಾಗೂ ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ಜಾಥ ಮಾಡಲಾಗುವುದು. ತಾಲೂಕಿನಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಈ ವೇಳೆ ತಾಲೂಕು ಪ್ರಧಾನ ಕಾರ್ಯದರ್ಶಿ ಸುನೀಲ್, ಬಿಎಲ್‌ಎಚ್‌ಒ ಶಿವಪ್ರಸಾದ್, ಆವತಿ ಶಕ್ತಿ ಕೇಂದ್ರದ ಕಾರ್ಯದರ್ಶಿ ರಮೇಶ್, ಹಿರಿಯ ಮುಖಂಡ ಕೆಂಪಣ್ಣ, ಬಿಜೆಪಿ ಮುಖಂಡರಾದ ನಾಗರಾಜ್, ಯುವ ಮೋರ್ಚಾ ತಾಲೂಕು ಉಪಾಧ್ಯಕ್ಷ ಹರ್ಷವರ್ಧನ, ಆವತಿ ಸುರೇಶ್, ರಾಮಾಂಜಿನಪ್ಪ, ಮುಖಂಡರುಗಳು ಮತ್ತಿತರರು ಇದ್ದರು.