Advertisement
ಶುಕ್ರವಾರ ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ತಾಲೂಕಿನಿಂದ ಆಗಮಿಸಿದ್ದ ನೂರಾರು ರೈತರು, ರೈತ ಮಹಿಳೆಯರು ಹಾಗೂ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಮನಗೂಳಿ-ಬಿಜ್ಜಳ ಬಾರಖೇಡ-ಬೀಳಗಿ ರಾಜ್ಯ ಹೆದ್ದಾರಿ ಮಧ್ಯ ಇರುವ ಬಸವೇಶ್ವರ ವೃತ್ತದಲ್ಲಿ ಈರುಳ್ಳಿ ರಸ್ತೆಗೆ ಚೆಲ್ಲಿ ಪ್ರತಿಭಟನೆ ಮಾಡಿ ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಕೆಲ ಹೊತ್ತು ಪ್ರತಿಭಟನೆ ನಡೆಸಿದರು.
Related Articles
Advertisement
ಈಗಾಗಲೇ ಸರ್ಕಾರ ಈರುಳ್ಳಿಗೆ ಕೇವಲ 900 ರೂ. ವರೆಗೆ ಬೆಂಬಲ ಬೆಲೆ ಘೋಷಿಸಿದ್ದು ಇದು ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಅಲ್ಲ. ಈರುಳ್ಳಿ ನಾಟಿ ಮಾಡುವ ಪ್ರಾರಂಭದಿಂದಲೂ ಫಸಲು ಕೈ ಸೇರುವವರೆಗೂ ಎಲ್ಲ ರೀತಿಯ ಖರ್ಚು ವೆಚ್ಚಗಳನ್ನು ಲೆಕ್ಕ ಹಾಕಿ ಬೆಂಬಲ ಬೆಲೆ ಘೋಷಿಸಬೇಕೆಂದು ಒತ್ತಾಯಿಸಿದರು.
ತಾಲೂಕಾಧ್ಯಕ್ಷ ಸಿದ್ದರಾಮ ಅಂಗಡಗೇರಿ ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲದ ನಡುವೆಯೂ ರೈತರು ಅಲ್ಪ ಸ್ವಲ್ಪ ತೊಗರಿ ಬೆಳೆದಿದ್ದಾರೆ. ಈ ಬಾರಿ ಸಕಾಲಕ್ಕೆ ಮಳೆ ಆಗದೆ ಇದ್ದರೂ ಪ್ರತಿ ಎಕರೆಗೆ 2 ಕ್ವಿಂಟಲ್‌ವರೆಗೆ ತೊಗರಿ ಫಸಲು ಬಂದಿದೆ. ಆದರೆ ಈ ಸದ್ಯ ರೈತರು ತೊಗರಿಯನ್ನು ಕಟಾವು ಮಾಡಿ ಫಸಲು ಕೈ ಸೇರಿದೆ. ಕಳೆದ ವರ್ಷ ಸರ್ಕಾರ ಈ ಸಮಯದಲ್ಲಿ ತೊಗರಿಗೆ ಬೆಂಬಲ ಬೆಲೆ ಘೋಷಿಸಿ ಖರೀದಿ ಪ್ರಾರಂಭಿಸಿತ್ತು. ಆದರೆ ಈ ವರ್ಷ ಇಲ್ಲಿವರೆಗೂ ಬೆಂಬಲ ಬೆಲೆ ಘೋಷಿಸಿ ತೋಗರಿ ಖರೀದಿಸುವ ಕುರಿತು ಯಾವುದೇ ಘೋಷಣೆ ಮಾಡಿಲ್ಲ.
ತೊಗರಿ ಬೆಳೆದು ಅಲ್ಪ ಸ್ವಲ್ಪ ಫಸಲು ಪಡೆದುಕೊಂಡು ರೈತರು ಇಂದು ನಾಳೆ ಸರ್ಕಾರ ಬೆಂಬಲ ಬೆಲೆ ಘೋಷಿಸಿ ತೊಗರಿ ಖರೀದಿಸುತ್ತಾರೆಂದು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಬೆಂಬಲ ಬೆಲೆ ಘೋಷಿಸಿ ತೊಗರಿ ಖರೀದಿಯನ್ನು ಪ್ರಾರಂಭಿಸಬೇಕು. ರಾಜ್ಯ ಸರಕಾರ ಹಿಂದೇಟು ಹಾಕಿದಲ್ಲಿ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಈರಣ್ಣ ದೇವರಗುಡಿ, ಡಾ| ಎಂ.ರಾಮಚಂದ್ರ ಬಮ್ಮನಜೋಗಿ, ಹೊನಕೆರೆಪ್ಪ ತೆಲಗಿ, ಕೃಷ್ಣಪ್ಪ ಬಮರೆಡ್ಡಿ, ಹನುಮಂತ ತೋಟದ, ಚಂದ್ರಾಮ ತೆಗ್ಗಿ, ಶಿವಾನಂದ ಐಗಳಿ, ಶ್ರೀಶೈಲ ತೋಟದ, ಪರಮಾನಂದ ಮಾಳೂರ, ರಂಜಾನ ಹೆಬ್ಟಾಳ, ಸುಭಾಷ್ ಬಿಸಿರೊಟ್ಟಿ, ಶಾಂತಗೌಡ ಬಿರಾದಾರ, ಮೈಬೂಬಸಾಬ ಅವಟಿ, ರೈತ ಮಹಿಳೆಯರಾದ ಶಾರದಾ ಲಮಾಣಿ, ಕಾಳಮ್ಮ ಬಡಿಗೇರ. ಗುರುಬಾಯಿ ಹಾದಿಮನಿ, ಜ್ಯೋತಿ ಹಿರೇಮಠ, ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಂತರ ಗ್ರೇಡ್-2 ತಹಶೀಲ್ದಾರ್ ಪಿ.ಜಿ. ಪವಾರ ಅವರಿಗೆ ಮನವಿ ಸಲ್ಲಿಸಿದರು.