Advertisement
ಭಾರತೀಯ ಕಿಸಾನ್ ಸಂಘ ಉಡುಪಿ ಜಿಲ್ಲಾ ಸಮಿತಿಯು ಕುಂದಾಪುರದ ಶ್ರೀ ವ್ಯಾಸರಾಜ ಕಲಾ ಮಂದಿರದಲ್ಲಿ ಆಯೋಜಿಸಿದ ಜಿಲ್ಲಾ ರೈತ ಸಮ್ಮೇಳನದಲ್ಲಿ ಕೃಷಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಪರಿಹಾರಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಸಲುವಾಗಿ ಕೆಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಿದರು. ಕಿಸಾನ್ ಸಂಘದ ರಾಷ್ಟ್ರೀಯ ಅಧ್ಯಕ್ಷ ಐ.ಎನ್. ಬಸವೇ ಗೌಡ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ್ ಹೆಗ್ಡೆ, ಕಾಸರಗೋಡಿನ ಸಿಪಿಸಿಆರ್‌ಐ ವಿಜ್ಞಾನಿ ಡಾ| ರವಿ ಭಟ್, ರಾಜ್ಯಾಧ್ಯಕ್ಷ ಪುಟ್ಟಸ್ವಾಮಿ ಗೌಡ, ರಾಜ್ಯ ಕಾರ್ಯಕಾರಣಿ ಸದಸ್ಯ ಬಿ.ವಿ. ಪೂಜಾರಿ, ಜಿಲ್ಲಾ ಹಾಪ್‌ಕಾಮ್ಸ್ ಮಂಗಳೂರಿನ ಅಧ್ಯಕ್ಷ ಲಕ್ಷ್ಮೀನಾರಾಯಣ ಉಡುಪ, ಜಿಲ್ಲಾಧ್ಯಕ್ಷ ನವೀನ್‌ಚಂದ್ರ ಜೈನ್ ನಿಟ್ಟೆ, ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ, ತಾ| ಅಧ್ಯಕ್ಷ ಸೀತಾರಾಮ ಗಾಣಿಗ ಹಾಲಾಡಿ ಉಪಸ್ಥಿತರಿದ್ದರು. ಸಮ್ಮೇಳನದ ಪ್ರಮುಖ ನಿರ್ಣಯಗಳು
ಸಾವಯವ ಕೃಷಿಗೆ ಪ್ರೋತ್ಸಾಹದೊಂದಿಗೆ ಪಾರಂಪರಿಕ ತಳಿ ಸಂರಕ್ಷಣೆಗೆ ಆದ್ಯತೆ
ಡಾ| ಕಸ್ತೂರಿ ರಂಗನ್ ವರದಿ ಜಾರಿಗೂ ಮುನ್ನ ಜನಜೀವನಕ್ಕೆ ಮಾರಕವಾದ “ಬಫರ್ ಜೋನ್’ ಮತ್ತಿತರ ಅಂಶಗಳನ್ನು ಕೈಬಿಡಬೇಕು. ಪರಿಸರ ಸೂಕ್ಷ್ಮ ಪ್ರದೇಶಗಳ ಭೌತಿಕ ಸಮೀಕ್ಷೆ ನಡೆಸಿ, ನಕ್ಷೆ ತಯಾರಿಸಬೇಕು.
ಪರಿಸರ – ಪಶ್ಚಿಮ ಘಟ್ಟಕ್ಕೆ ಮಾರಕ ಬೃಹತ್ ಕೈಗಾರಿಕೆಗಳಿಗೆ ಉಡುಪಿಯಲ್ಲಿ ಅವಕಾಶ ನೀಡಬಾರದು.
ಜಿಲ್ಲೆಗೆ ಪ್ರತ್ಯೇಕ ಕೇಂದ್ರ ಸಹಕಾರಿ ಬ್ಯಾಂಕ್, ಹಾಪ್‌ಕಾಮ್ಸ್ ಸ್ಥಾಪನೆ.
ಪ್ರಾಕೃತಿಕ ಜಲ ಸಂರಕ್ಷಣೆಗೆ ಒತ್ತು ನೀಡಬೇಕು.
ಮರಳು ಗಣಿಗಾರಿಕೆಗೆ ಸಮರ್ಪಕ ನೀತಿ ರೂಪಿಸಿ ತೊಂದರೆಯನ್ನು ಪರಿಹರಿಸಬೇಕು.
ವಾರಾಹಿ ನೀರಾವರಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಬೇಕು.
ಪ್ರಾಕೃತಿಕ ವಿಕೋಪಕ್ಕೊಳಗಾಗುವ ರೈತರಿಗೆ ನ್ಯಾಯಯುತ ಪರಿಹಾರ ನೀಡಬೇಕು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು. ಅಲ್ಲಿನ 110 ಎಕರೆ ಭೂಮಿಯನ್ನು ಕೃಷಿ ಸಂಬಂಧಿತಾ ಸಂಸ್ಕರಣಾ ಘಟಕಗಳಿಗೆ ಮಾತ್ರ ಬಳಸಬೇಕು.