Advertisement

ಘಟಪ್ರಭಾ ಶುಗರ್ಸ್‌ನಿಂದ ಕಬ್ಬಿಗೆ 2700 ರೂ. ದರ ಘೋಷಣೆ

04:47 PM Oct 26, 2021 | Team Udayavani |

ಗೋಕಾಕ: ಪ್ರಸಕ್ತ ಹಂಗಾಮಿನಲ್ಲಿ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ಪ್ರತಿ ಟನ್‌ ಕಬ್ಬಿಗೆ 2700 ರೂ. ದರ ನೀಡುವುದಾಗಿ ಕಾರ್ಖಾನೆಯ ಮಾರ್ಗದರ್ಶಕರೂ ಆಗಿರುವ ಕೆಎಂಎಫ್‌ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

Advertisement

ಸೋಮವಾರ ನಗರದ ಹೊರವಲಯದ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿ ಮಾತನಾಡಿದ ಅವರು, ಒಂದೇ ಕಂತಿನಲ್ಲಿ ರೈತರಿಗೆ ಬಿಲ್‌ ಪಾವತಿಸಲಾಗುವುದು ಎಂದು ಹೇಳಿದರು.

ಪ್ರಸಕ್ತ 2021-22ನೇ ಸಾಲಿನ ಹಂಗಾಮಿನಲ್ಲಿ ಕಾರ್ಖಾನೆಗೆ ಉತ್ತಮ ಇಳುವರಿಯ ಕಬ್ಬನ್ನು ಪೂರೈಕೆ ಮಾಡುವಂತೆ ರೈತರಲ್ಲಿ ಕೋರಿದ ಅವರು, ರೈತರ ಸಹಕಾರದಿಂದ ನಮ್ಮ ಕಾರ್ಖಾನೆಯು ಪ್ರಗತಿ ಪಥದತ್ತ ಸಾಗುತ್ತಿದೆ. ಈ ಭಾಗದ ರೈತರ ಜೀವನಾಡಿಯಾಗಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಸಕ್ತ ಹಂಗಾಮಿನಲ್ಲಿ 4 ಲಕ್ಷ ಟನ್‌ ಕಬ್ಬು ನುರಿಸುವ ಗುರಿ ಹೊಂದಿದೆ ಎಂದರು.

ಕಬ್ಬು ಪೂರೈಸುತ್ತಿರುವ ರೈತರಿಗೆ ಪ್ರತಿ 20 ದಿನಗಳಿಗೊಮ್ಮೆ ಅವರ ಬ್ಯಾಂಕ್‌ ಖಾತೆಗಳಿಗೆ ಬಿಲ್‌ ಸಂದಾಯ ಮಾಡಲಾಗುವುದು. ನಮ್ಮ ನೆರೆ ಹೊರೆಯ ಕಾರ್ಖಾನೆಗಳು ನೀಡುವ ದರವನ್ನು ನಾವು ನೀಡುತ್ತೇವೆ ಎಂದು ಈ ಹಿಂದೆಯೇ ರೈತರ ಸಭೆಯಲ್ಲಿ ಹೇಳಲಾಗಿತ್ತು. ಅದರಂತೆಯೇ ಜಿಲ್ಲೆಯ ಬಹುತೇಕ ಕಾರ್ಖಾನೆಗಳು ಈಗಾಗಲೇ ದರವನ್ನು ಘೋಷಿಸಿದ್ದು, ಅದರನ್ವಯ ಈ ಬಾರಿ ಪ್ರತಿ ಟನ್‌ ಕಬ್ಬಿಗೆ 2700 ರೂ. ದರವನ್ನು ಆಡಳಿತ ಮಂಡಳಿಯ ನಿರ್ಣಯದಂತೆ ಘೋಷಿಸಲಾಗಿದೆ. ರೈತರ ಸಹಕಾರವೇ ನಮ್ಮ ಕಾರ್ಖಾನೆಗೆ ಶ್ರೀರಕ್ಷೆಯಾಗಿದೆ ಎಂದು ಜಾರಕಿಹೊಳಿ ತಿಳಿಸಿದರು.

ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಖಾನೆಯಲ್ಲಿ ಆಯೋಜಿಸಿದ್ದ ಪೂಜಾ ಸಮಾರಂಭದಲ್ಲಿ ಭಾಗವಹಿಸಿದರು. ನಂತರ ಕಾರ್ಖಾನೆಯ ವಿವಿಧ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಉದ್ಯಮಿಗಳಾದ ಅಭಿನಂದನ ಪಾಟೀಲ, ಉತ್ತಮ ಪಾಟೀಲ, ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ, ಕಾರ್ಖಾನೆ ಸಿಇಒ ನಿತೀನ ಪಾಟೀಲ, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next