Advertisement

ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಿ

02:48 PM Aug 13, 2019 | Team Udayavani |

ಚಿಕ್ಕಮಗಳೂರು: ಮಳೆಯಿಂದ ಹಾನಿಗೊಳಗಾದ ಪ್ರದೇಶ ಹಾಗೂ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕೆಂದು ಶಾಸಕ ಸಿ.ಟಿ.ರವಿ ಆಗ್ರಹಿಸಿದರು.

Advertisement

ಸೋಮವಾರ ಮೂಡಿಗೆರೆ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಯಾವುದೇ ಸಂತ್ರಸ್ತರನ್ನು ಕಚೇರಿಗೆ ಅಲೆದಾಡಿಸಬಾರದು. ಗ್ರಾಮ ಪಂಚಾಯತ್‌ನಲ್ಲೇ ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳನ್ನು ವಿಶೇಷ ಅಧಿಕಾರಿಗಳನ್ನಾಗಿ ನೇಮಿಸಿ ಎನ್‌ಜಿಒಗಳ ಸಹಕಾರ ಪಡೆದು ಶೀಘ್ರದಲ್ಲಿ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದರು.

ಕಾನೂನು ನಿಯಮಗಳನ್ನು ನೋಡಿದರೆ ನಾವು ನಿರಾಶ್ರಿತರ ಕೇಂದ್ರಗಳನ್ನು ತೆರೆಯಲು ಮಾತ್ರ ಸಾಧ್ಯ. ಅವರ ಬದುಕು ಕಟ್ಟಿಕೊಡಲು ಸಾಧ್ಯವಿಲ್ಲ. ಯಾವುದೇ ದಾಖಲೆಗಳನ್ನು ಕೇಳದೆ ಪರಿಹಾರ ನೀಡಬೇಕು. ಮನೆ-ಮಠ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಅವರು ದಾಖಲೆ ಎಲ್ಲಿಂದ ತರುತ್ತಾರೆ. ಆದ್ದರಿಂದ, ದಾಖಲೆಗಳಿಗಾಗಿ ಅಲೆದಾಡಿಸದೆ ಅಧಿಕಾರಿಗಳು ಕೆಲಸ ಮಾಡಿಕೊಡಬೇಕು ಎಂದು ಸೂಚನೆ ನೀಡಿದರು.

ಮಲೆನಾಡು ಭಾಗದಲ್ಲಿ ಮಳೆಯಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಜನರು ನೂರಾರು ಎಕರೆ ಜಮೀನು ಕಳೆದುಕೊಂಡಿದ್ದಾರೆ. ಬದುಕು ಕಳೆದುಕೊಂಡಿರುವವರ ಬದುಕಿಗೆ ನೆರವಾಗಲು ಸರ್ವ ಪ್ರಯತ್ನ ಮಾಡಲಾಗುವುದು ಎಂದರು.

Advertisement

ಆಗಸ್ಟ್‌ 16 ಅಥವಾ 17ರಂದು ಜನಪ್ರತಿನಿಧಿಗಳ ಸಭೆ ನಡೆಸುವಂತೆ ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ. ನೀವು ಒಂದು ವಾರ ನಮಗೆ ಆಶ್ರಯ ನೀಡುತ್ತೀರಾ. ಆ ನಂತರ ನಾವು ಎಲ್ಲಿಗೆ ಹೋಗುವುದು ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ಈ ಪ್ರಶ್ನೆ ಮತ್ತೆ ಉದ್ಭವ ಆಗಬಾರದು. ಆ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ತಿಳಿಸಿದರು.

ಸದ್ಯದಲ್ಲಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಲ್ಲೆಗೆ ಭೇಟಿ ನೀಡುವುದಾಗಿ ಹೇಳಿದ್ದಾರೆ. ಅವರಿಗೆ ಈ ಪ್ರಮಾಣದಲ್ಲಿ ಹಾನಿಯಾಗಿರುವ ಸ್ಥಳಗಳಿಗೆ ಕರೆ ತರಬೇಕು. ಆಗ ಅವರಿಗೆ ಹಾನಿಯ ಪ್ರಮಾಣದ ಮನವರಿಕೆ ಆಗುತ್ತದೆ. ಹಿರಿಯ ಅಧಿಕಾರಿಗಳು ಇಂತಹ ಪ್ರದೇಶಗಳಿಗೆ ಭೇಟಿ ನೀಡಿ ಪರೀಶಿಲನೆ ನಡೆಸಬೇಕು. ಆಗ ವಾಸ್ತವ ಸ್ಥಿತಿಯ ಅರಿವಾಗುತ್ತದೆ ಎಂದರು.

ಅಧಿಕಾರಿಗಳು ಶಕ್ತಿಮೀರಿ ಕೆಲಸ ಮಾಡಬೇಕು. ಯಾರು ಕೂಡ ಭಯಪಡುವ ಅಗತ್ಯವಿಲ್ಲ. ನಾವು ನಿಮ್ಮೊಂದಿಗೆ ಇದ್ದೇವೆ. ಎಲ್ಲರೂ ಒಟ್ಟಾಗಿ ಎಲ್ಲವನ್ನು ಕಳೆದುಕೊಂಡವರ ಬದುಕು ಕಟ್ಟೋಣ ಎಂದರು. ಜಿಲ್ಲಾ ಮುಖಂಡರ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿಗೆ ತಗೆದುಕೊಂಡು ಹೋಗಲಾಗುವುದು. ಮೃತಪಟ್ಟವರಿಗೆ ಐದು ಲಕ್ಷ ಪರಿಹಾರ ನೀಡಲಾಗುವುದು. ಮೂರು ದಿನ ಸಾಲು ಸಾಲು ರಜೆ ಬಂದಿದ್ದರಿಂದ ಸದ್ಯಕ್ಕೆ ಬ್ಯಾಂಕ್‌ನೊಂದಿಗೆ ಮಾತನಾಡಿ ತುರ್ತು ಪರಿಸ್ಥಿತಿ ನಿಭಾಯಿಸಲು ಒಂದು ಲಕ್ಷ ರೂ.ಅನ್ನು ರಜೆಯ ದಿನದಲ್ಲೂ ಕೊಡಿಸಲಾಗಿದೆ ಎಂದರು.

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌, ಮೂಡಿಗೆರೆ ತಾಲೂಕು ಪಂಚಾಯತ್‌ ಅಧ್ಯಕ್ಷ ರತನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next